ಕಾರ್ಕಳ: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಕಲಿ ಸಹಿ ಬಳಸಿ ಚೆಕ್ಗಳನ್ನು ನಗದೀಕರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಮಾಜಿ ಡಾಟಾ ಎಂಟ್ರಿ ಆಪರೇಟರ್ನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಕ್ಷಯ ದೇವಾಡಿಗ (29), ಅಣ್ಣು ದೇವಾಡಿಗ ಅವರ ಪುತ್ರ, ಕಮಲ ನಿವಾಸ, ಹಂಚಿಕಟ್ಟೆ, ಎಣ್ಣೆಹೊಳೆ, ಮರ್ಣೆ ಗ್ರಾಮ ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿ ಅಕ್ಷಯ ದೇವಾಡಿಗ ಅವರು 2022ರ ಡಿಸೆಂಬರ್ 1ರಿಂದ 2026ರ ಮೇ 7ರವರೆಗೆ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಲಾಖೆಯ ಲೆಕ್ಕಪರಿಶೋಧನೆ ವೇಳೆ ಅವರ ಕರ್ತವ್ಯ ಲೋಪ ಹಾಗೂ ಅಕ್ರಮಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವರಣೆ ಕೇಳಿದ್ದರು. ಆದರೆ ಯಾವುದೇ ಸಮರ್ಪಕ ಉತ್ತರ ನೀಡದೇ 2026ರ ಮೇ 7ರಂದು ರಾಜೀನಾಮೆ ಸಲ್ಲಿಸಿ ಕರ್ತವ್ಯಕ್ಕೆ ಗೈರಾಗಿದ್ದರು.
ದೇವಸ್ಥಾನದ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಚಾಲ್ತಿ ಖಾತೆಗೆ ಸಂಬಂಧಿಸಿದ ಆರು ಖಾಲಿ ಚೆಕ್ಗಳನ್ನು ಆರೋಪಿಯು 2026ರ ಜೂನ್ 24ರಂದು ನಗದೀಕರಣಕ್ಕಾಗಿ ಬ್ಯಾಂಕ್ಗೆ ಸಲ್ಲಿಸಿದ್ದಾನೆ. ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಆರೋಪಿಯು ಸಮರ್ಪಕ ಉತ್ತರ ನೀಡಲು ವಿಫಲವಾಗಿದ್ದರಿಂದ ಚೆಕ್ಗಳನ್ನು ನಗದೀಕರಿಸಲಾಗಿಲ್ಲ.
ಪ್ರಾಥಮಿಕ ತನಿಖೆಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರ ಗಮನಕ್ಕೆ ತರದೆ, ಅವರ ಸಹಿಯನ್ನು ನಕಲಿ ಮಾಡಿ ಮೋಸ ಮಾಡಲು ಆರೋಪಿಯು ಯತ್ನಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.




