Thursday, October 29, 2026

ಬಡವರ ಪಾಲಿನ ಆಸ್ಪತ್ರೆಯಲ್ಲೇ ಹಣದ ‘ಶಸ್ತ್ರಚಿಕಿತ್ಸೆ’!

ಕುಂದಾಪುರ: ಬಡವರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಆಸ್ಪತ್ರೆಯೆಂದರೆ ಕೊನೆಯ ಆಸರೆ. ಕೈಯಲ್ಲಿ ಹಣವಿಲ್ಲದಿದ್ದರೂ ಆರೋಗ್ಯ ಸೇವೆ ದೊರೆಯುತ್ತದೆ ಎಂಬ ನಂಬಿಕೆಯಿಂದಲೇ ಜನರು ಸರ್ಕಾರಿ ಆಸ್ಪತ್ರೆಯ ಬಾಗಿಲು ತಟ್ಟುತ್ತಾರೆ. ಆದರೆ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆಗೆ ಹಣ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವುದು ಬಡ ರೋಗಿಗಳಲ್ಲಿ ಆತಂಕ ಮೂಡಿಸಿದೆ.

ಆಸ್ಪತ್ರೆಯ ಶಸ್ತ್ರಚಿಕಿತ್ಸಕ ವೈದ್ಯನೋರ್ವ ಶಸ್ತ್ರಚಿಕಿತ್ಸೆಗೆ ₹7,000 ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹಣ ಹೊಂದಿಸಲಾಗದ ರೋಗಿಗಳನ್ನು ಔಷಧಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ ಎಂದು ರೋಗಿಗಳ ಕುಟುಂಬಿಕರು ಆರೋಪಿಸಿದ್ದಾರೆ. ಬಡತನದ ನಡುವೆ ಚಿಕಿತ್ಸೆಗಾಗಿ ಬಂದವರು, ವೈದ್ಯರು ಕೇಳಿದ ಹಣ ಹೊಂದಿಸಲು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಳಲು ಕೂಡ ಕೇಳಿಬಂದಿದೆ.

ಹಣವಿಲ್ಲದಿದ್ದರೆ ಚಿಕಿತ್ಸೆ ಮುಂದೂಡಿಕೆ:
ಶಸ್ತ್ರಚಿಕಿತ್ಸೆ ಅಗತ್ಯವಿರುವ ಬಡ ರೋಗಿಗಳಿಗೆ ಹಣ ನೀಡುವಂತೆ ಒತ್ತಡ ಹೇರಲಾಗುತ್ತಿದ್ದು, ಹಣವಿಲ್ಲ ಎಂದು ಹೇಳಿದರೆ ಶಸ್ತ್ರಚಿಕಿತ್ಸೆ ಮಾಡದೆ ಔಷಧಿ ನೀಡಿ ವಾಪಸ್ ಕಳುಹಿಸುವ ಪ್ರಕರಣ ನಡೆಯುತ್ತಿದೆ. ಬಳಿಕ ಬೇರೆ ದಾರಿ ಕಾಣದೆ ರೋಗಿಗಳ ಕುಟುಂಬಿಕರು ಸಾಲ ಮಾಡಿ ಹಣ ಹೊಂದಿಸಿ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದರೆ ಜಾಸ್ತಿ ಹಣ ಕೊಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಕೇಳಿದಷ್ಟು ಹಣ ಕೊಟ್ಟು ಚಿಕಿತ್ಸೆ ಮಾಡಿಸಿಕೊಂಡು ಹೋಗೋಣ ಎಂಬ ಮನಸ್ಥಿತಿಗೆ ಬಡ ಕುಟುಂಬಗಳು ತಲುಪಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. ಹಣ ನೀಡದೆ ಡಿಸ್ಚಾರ್ಜ್ ಆಗಲು ಮುಂದಾದರೆ, ಹಣ ಕೊಟ್ಟು ಡಿಸ್ಚಾರ್ಜ್ ಮಾಡಿಕೊಳ್ಳಿ ಎಂದು ಹೇಳುತ್ತಾರೆ ಎಂಬ ಆರೋಪವೂ ಕುಟುಂಬಿಕರಿಂದ ಕೇಳಿಬಂದಿದೆ. ವೈದ್ಯರ ವಿರುದ್ಧ ದೂರು ನೀಡಿದರೆ ಮುಂದಿನ ಚಿಕಿತ್ಸೆ ಸಂದರ್ಭದಲ್ಲಿ ತೊಂದರೆಯಾಗಬಹುದು ಎಂಬ ಭಯದಿಂದ ಅನೇಕ ಕುಟುಂಬಗಳು ಮೌನವಾಗಿಯೇ ಹಣ ನೀಡಿ ಆಸ್ಪತ್ರೆಯಿಂದ ತೆರಳುತ್ತಿದ್ದಾರೆ.

ಶಾಸಕರಿಗೂ ದೂರು; ಎಚ್ಚರಿಕೆಯ ಬಳಿಕವೂ ನಿಲ್ಲದ ಪೀಕಲಾಟ:
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಈ ಹಿಂದೆಯೇ ಶಾಸಕರ ಗಮನಕ್ಕೂ ಹೋಗಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ವೈದ್ಯರ ಸಭೆ ನಡೆಸಿ, ಇಂತಹ ಯಾವುದೇ ರೀತಿಯ ಹಣ ವಸೂಲಿ ನಡೆಯಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಅವರ ಎಚ್ಚರಿಕೆಯ ಬಳಿಕವೂ ಇದೇ ರೀತಿಯ ಹಣ ಪಡೆಯುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕ್ಯಾಬಿನ್‌ನಲ್ಲಿ ಮೊಬೈಲ್‌ಗೂ ನಿಷೇಧ:
ಹಣ ಬೇಡಿಕೆ ಇಡುತ್ತಿರುವ ವೈದ್ಯರ ಕ್ಯಾಬಿನ್‌ಗೆ ತೆರಳುವ ರೋಗಿಗಳ ಕುಟುಂಬಿಕರ ಶರ್ಟ್‌ನ ಮೇಲಿನ ಜೇಬಿನಲ್ಲಿ ಮೊಬೈಲ್ ಇರಿಸಿಕೊಳ್ಳದಂತೆ ಸೂಚಿಸಲಾಗುತ್ತಿದೆ. ಮೇಲಿನ ಜೇಬಿನಲ್ಲಿ ಮೊಬೈಲ್ ಕಂಡುಬಂದರೆ ಅದನ್ನು ತೆಗೆದು ಇಡುವಂತೆ ಹೇಳಲಾಗುತ್ತಿದ್ದು, ಹಣದ ಬೇಡಿಕೆಯ ಬಗ್ಗೆ ಯಾರಾದರೂ ವಿಡಿಯೋ ಚಿತ್ರೀಕರಣ ಮಾಡಬಹುದು ಎಂಬ ಕಾರಣಕ್ಕೆ ಇಂತಹ ನಿಯಮ ಜಾರಿಗೊಳಿಸಲಾಗಿದೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.

ಭಯವೇ ದೊಡ್ಡ ಗೋಡೆ:
ಈ ಪ್ರಕರಣದ ಅತ್ಯಂತ ನೋವಿನ ಸಂಗತಿಯೆಂದರೆ, ಆರೋಪ ಎದುರಿಸುತ್ತಿರುವ ವೈದ್ಯರ ವಿರುದ್ಧ ಮಾತನಾಡಲು ರೋಗಿಗಳ ಕುಟುಂಬಿಕರು ಹಿಂದೇಟು ಹಾಕುತ್ತಿದ್ದಾರೆ. ಬಡ ಕುಟುಂಬಕ್ಕೆ ಆಸ್ಪತ್ರೆಯ ಬಾಗಿಲೇ ಆಶ್ರಯ. ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಕಾರಣಕ್ಕೆ ವೈದ್ಯರ ವಿರುದ್ಧ ದೂರು ನೀಡಲು ಹೆದರುವ ಪರಿಸ್ಥಿತಿ ಬಂದರೆ, ಅದು ಕೇವಲ ಒಬ್ಬ ರೋಗಿಯ ಸಮಸ್ಯೆಯಲ್ಲ, ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಎದುರಾಗಿರುವ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆರೋಗ್ಯ ಸಚಿವರ ಪಕ್ಕದ ಜಿಲ್ಲೆಯಲ್ಲೇ ಈ ಅವ್ಯವಸ್ಥೆ:
ಯು.ಟಿ. ಖಾದರ್ ಅವರು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಹಲವು ನಿರೀಕ್ಷೆಗಳು ಮೂಡಿವೆ. ಸಚಿವರು ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವ ಮೂಲಕ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಆರೋಗ್ಯ ಸಚಿವರ ತವರು ಜಿಲ್ಲೆಗೆ ಸಮೀಪದಲ್ಲಿರುವ ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ವಿರುದ್ಧವೇ ಹಣದ ಬೇಡಿಕೆಯಂತಹ ಗಂಭೀರ ಆರೋಪಗಳು ಕೇಳಿಬರುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಚಿವರ ಗಮನಕ್ಕೆ ಇಂತಹ ಆರೋಪಗಳು ತಲುಪಿವೆಯೇ? ತಲುಪಿದ್ದರೆ ಕ್ರಮ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಭಯದ ನೆರಳಲ್ಲಿ ನೋವು ಹೇಳಿಕೊಂಡ ಕುಟುಂಬ:
ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಯ ಕುಟುಂಬವೊಂದು ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿ, ಆಸ್ಪತ್ರೆಯಲ್ಲಿ ಹಣದ ಬೇಡಿಕೆ ಕೇಳಿಬಂದಿದೆ ಎನ್ನಲಾಗುತ್ತಿರುವ ಕುರಿತು ಅಳಲು ತೋಡಿಕೊಂಡಿದೆ.

ಸೇವೆಯ ಹೆಸರಿಗೆ ಕಪ್ಪುಚುಕ್ಕೆ:
ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಹಲವು ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಶ್ರಯವಾಗಿದೆ. ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಇಲ್ಲಿನ ವೈದ್ಯ ನಾಗೇಶ್ ಸೇರಿದಂತೆ ಬಹುತೇಕ ವೈದ್ಯರ ಮತ್ತು ಸಿಬ್ಬಂದಿ ಸಲ್ಲಿಸಿದ ಸೇವೆಯನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಆಸ್ಪತ್ರೆಯ ಅನೇಕ ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವಾಗ, ಕೆಲವರ ವಿರುದ್ಧ ಕೇಳಿಬರುವ ಹಣ ವಸೂಲಿ ಆರೋಪಗಳು ಇಡೀ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸುತ್ತವೆ.

ಬಡ ರೋಗಿಗಳಿಂದ ಹಣ ಪಡೆಯುವುದು ಯಾವುದೇ ಕಾರಣಕ್ಕೂ ಸಹಿಸಲಾಗದು. ಸರ್ಕಾರಿ ಆಸ್ಪತ್ರೆ ಜನರ ಸೇವೆಗಾಗಿ ಇರುವುದೇ ಹೊರತು ಹಣ ವಸೂಲಿ ಮಾಡುವುದಕ್ಕಲ್ಲ. ವೈದ್ಯರ ಸಭೆ ನಡೆಸಿ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇನೆ. ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರು ಯಾವುದೇ ಭಯವಿಲ್ಲದೆ ದೂರು ನೀಡಲಿ. ಪ್ರಕರಣವನ್ನು ಸರ್ಕಾರದ ಗಮನಕ್ಕೆ ತಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ವಿಶೇಷ ವರದಿ : ಶ್ರೀಕಾಂತ್ ಹೆಮ್ಮಾಡಿ

More like this
Related

ನ. 1ರಂದು ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯ ಉದ್ಘಾಟನೆ

ಉಡುಪಿಯ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ನವೀಕೃತ...

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ವರ್ಗಾವಣೆ, ಮಹೇಶ್ ಪಿ.ಎಸ್.  ಹೊಸ ಎಸಿ

ಕುಂದಾಪುರ: ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ರಶ್ಮಿ ಎಸ್.ಆರ್. ಅವರನ್ನು ವರ್ಗಾವಣೆ...

ಪರಿಶಿಷ್ಟ ಜಾತಿಯ ಪುರುಷರಿಗೂ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಿ: ಮಂಜುನಾಥ್ ಚೇರ್ಕಾಡಿ ಮನವಿ

ಉಡುಪಿ: ಉಡುಪಿ ಜಿಲ್ಲೆಯ ಏಳು ತಾಲೂಕು ಪಂಚಾಯತ್‌ಗಳು ಹಾಗೂ ಚೇರ್ಕಾಡಿ ಗ್ರಾಮ...

ಪರಿಶಿಷ್ಟ ಪಂಗಡದ ಪುರುಷರಿಗೂ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಸಿಗಬೇಕು: ಕೆ.ಟಿ. ನಾಯ್ಕ್

ಉಮೇಶ್ ನಾಯ್ಕ್ ಅವರ ಮನವಿ ನ್ಯಾಯಸಮ್ಮತ; ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ...

Copying is disabled on Udupi Digital News.