Saturday, November 7, 2026

ಪ್ರದೀಪ್ ಪೂಜಾರಿ ಪ್ರಕರಣ ಸಿಐಡಿಗೆ ಒಪ್ಪಿಸಿ: ಸಹೋದರ ದಿಲೀಪ್ ಪೂಜಾರಿ ಆಗ್ರಹ

ಉಡುಪಿ: ಪೆರ್ಡೂರು ಪ್ರದೀಪ್ ಪೂಜಾರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಹೊರಟು ಹೋಗಿರುವುದರಿಂದ ಇಡೀ ಪ್ರಕರಣ ಹಾಗೂ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಮೃತರ ಸಹೋದರ ದಿಲೀಪ್ ಪೂಜಾರಿ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ವಶದಲ್ಲಿದ್ದ ಗಾಯಾಳು ಪ್ರದೀಪ್ ಪೂಜಾರಿಯ ಭದ್ರತೆ ಮತ್ತು ಆತನ ದೂರನ್ನು ಸ್ವೀಕರಿಸದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಇದೊಂದು ಪೊಲೀಸ್ ಕಸ್ಟಡಿ ಸಾವು ಆಗಿದೆ. ಈ ಪ್ರಕರಣದಲ್ಲಿ ಕೆಳ ಹಂತದ ಸಿಬ್ಬಂದಿಗಳನ್ನು ಅಮಾನತು ಗೊಳಿಸಿ, ಅದೇ ಅಪರಾಧ ಎಸಗಿ ರುವ ಹಿರಿಯಡ್ಕ ಎಸ್ಸೈಯನ್ನು ಕೇವಲ ಕಡ್ಡಾಯ ರಜೆಗೆ ಕಳುಹಿಸಿರುವುದು ಇಲಾಖೆಯ ಪಕ್ಷಪಾತ ಹಾಗೂ ತಾರತಮ್ಯ ನೀತಿಯಾಗಿದೆ ಎಂದರು.

ಆದುದರಿಂದ ಗಂಭೀರ ಕರ್ತವ್ಯ ಲೋಪ ಎಸಗಿರುವ ಎಸ್ಸೈ ಪುನೀತ್ ಅವರನ್ನು ಕೂಡ ಅಮಾನತುಗೊಳಿಸಬೇಕು. ಪ್ರದೀಪ್ ಪೂಜಾರಿ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ಸತತ ಕಿರುಕುಳಕ್ಕೆ ಒಳಗಾದ ಪ್ರದೀಪ್ ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ಕಾನೂನು ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಅನ್ಯಾಯ, ಪೊಲೀಸ್ ಇಲಾಖೆಯ ದೌರ್ಜನ್ಯ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಖಂಡಿಸಿ ಪೆರ್ಡೂರು ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ನ.11ರಂದು ಉಡುಪಿಯಲ್ಲಿ ಜನಾಗ್ರಹ ಸಭೆಯನ್ನು ಹಮ್ಮಿಕೊ ಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂಪರ ಸಂಘಟನೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಪ್ರದೀಪ್ ಪೂಜಾರಿ ಸಂಶಯಾಸ್ಪದ ಸಾವು ಹಾಗೂ ಪ್ರಕರಣದ ನಿರ್ವಹಣೆಯಲ್ಲಿ ಪೊಲೀಸರ ನಿರ್ಲಕ್ಷ್ಯದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ತನಿಖೆಗೆ ಒಳಪಡಿಸಬೇಕು. ಎಸ್‌ಐ ಪುನೀತ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರದೀಪ್ ಸಾವಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ. ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸದಿರುವುದು ಹಾಗೂ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬ ನೋವಿನಿಂದಲೇ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದವರ ವಿರುದ್ಧವೂ ಹೋರಾಟ ಮುಂದುವರಿಸಲಾಗುವುದು. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ನವೆಂಬರ್ 11ರಂದು ಉಡುಪಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರದೀಪ್ ಸಾವಿನ ಪ್ರಕರಣದಲ್ಲಿ ನ್ಯಾಯಕ್ಕಾಗಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಹಾಗೂ ಎಸ್‌ಐ ಪುನೀತ್ ಅವರನ್ನು ರಜೆಯಲ್ಲಿ ಕಳುಹಿಸಿರುವುದನ್ನು ಹೊರತುಪಡಿಸಿದರೆ ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿರುವ ರೀತಿ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪ್ರದೀಪ್ ಜೊತೆ ಗುರುತಿಸಿಕೊಂಡಿರುವ ಸಂಘಟನೆಗಳ ಪ್ರಮುಖರಿಗೆ ನೋವುಂಟು ಮಾಡಿದೆ. ಅವರ ಹೇಳಿಕೆ ಏಕಪಕ್ಷೀಯವಾಗಿದೆ. ಒಬ್ಬ ಯುವಕ ಜೀವ ಕಳೆದುಕೊಂಡಿದ್ದಾನೆ. ಆತನ ಸಾವಿನ ಬಗ್ಗೆ ಕನಿಷ್ಠ ಸಂತಾಪವನ್ನೂ ವ್ಯಕ್ತಪಡಿಸಿಲ್ಲ. ಆತನ ಮೇಲೆ ನಡೆದಿರುವ ಅನೈತಿಕ ಪೊಲೀಸ್ ಗಿರಿಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿಲ್ಲ. ಕುಟುಂಬದವರು ಅನುಭವಿಸುತ್ತಿರುವ ನೋವಿನ ಬಗ್ಗೆಯೂ ಮಾತನಾಡಿಲ್ಲ. ಕೇವಲ ಸಂತ್ರಸ್ತ ಯುವತಿಯ ವಿಚಾರವನ್ನಷ್ಟೇ ಪ್ರಸ್ತಾಪಿಸಿದ್ದಾರೆ ಎಂದು ದೂರಿದರು.

ಸಂತ್ರಸ್ತ ಯುವತಿಯ ಪರವಾಗಿ ಪೊಲೀಸರು ಮಾತನಾಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಜೀವ ಕಳೆದುಕೊಂಡ ಯುವಕನ ಬಗ್ಗೆಯೂ ಸಮಾನ ಕಾಳಜಿ ತೋರಬೇಕಿತ್ತು. ಪ್ರದೀಪ್‌ನನ್ನು ಅತ್ಯಾಚಾರಿ ಹಾಗೂ ಅಪರಾಧಿ ಎಂಬಂತೆ ಬಿಂಬಿಸಲಾಗುತ್ತಿದೆ. ವೈದ್ಯಕೀಯ ವರದಿಯಲ್ಲಿ ಯುವತಿಗೆ ಬಾಹ್ಯ ಗಾಯಗಳಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಇಬ್ಬರೂ ಒಂದೇ ಬೈಕ್‌ನಲ್ಲಿ ತೆರಳಿರುವಾಗ ಅತ್ಯಾಚಾರ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು, ಅವುಗಳಿಗೆ ಸಮರ್ಪಕ ಉತ್ತರ ಸಿಗಬೇಕಿದೆ ಎಂದರು.

ಎಸ್‌ಐ ಪುನೀತ್ ಅವರನ್ನು ಅಮಾನತುಗೊಳಿಸುವ ಬದಲು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ. ಅವರನ್ನು ಅಮಾನತುಗೊಳಿಸಿದರೆ ಮೇಲಧಿಕಾರಿಗಳಿಗೂ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಅನುಮಾನವಿದೆ. ಜಿಲ್ಲಾ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೇ ಸಂಶಯ ಮೂಡಿದೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುವ ವಿಶ್ವಾಸ ಕಡಿಮೆಯಾಗಿದೆ ಎಂದು ಹೇಳಿದರು.

ಮುಂದಿನ ತನಿಖೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ವಿಚಾರಣೆಗೆ ಒಳಪಡಿಸಬೇಕು. ಪ್ರಕರಣದಲ್ಲಿ ಅವರ ಮೇಲೆ ಯಾರಾದರೂ ಪ್ರಭಾವ ಬೀರಿದ್ದಾರೆಯೇ, ಯಾರ ಸೂಚನೆಯ ಮೇರೆಗೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಪ್ರಕರಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಶ್ರೀಕಾಂತ್ ಶೆಟ್ಟಿ ಒತ್ತಾಯಿಸಿದರು.

More like this
Related

ಪದವಿ ಪಡೆದವರು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿ: ಡಾ.ಪ್ರಹ್ಲಾದ್ ರಾಮರಾವ್

ಮಂಗಳೂರು: ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು...

3 ಲಕ್ಷ ರೂ. ಮೊತ್ತದ ರೈತಪೀಠ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅಧಿಕೃತ ಲೋಗೋ ಅನಾವರಣ

• ಕೃಷಿ ಉದ್ಯಮಿ ಡಾ. ರಾಮಕೃಷ್ಣ ಆಚಾರ್ ಸ್ಥಾಪಿತ ಪ್ರಶಸ್ತಿಯ 2ನೇ...

ಹಿರಿಯಡ್ಕ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ತಿಮ್ಮೇಶ್ ಬಿ ಎನ್ ನೇಮಕ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆಯ ನೂತನ ಪೊಲೀಸ್ ಉಪನಿರೀಕ್ಷಕರಾಗಿ (ಪಿಎಸ್ಐ) ತಿಮ್ಮೇಶ್...

Copying is disabled on Udupi Digital News.