90 ರ ದಶಕದ ಹಳೆಯ ಕನ್ನಡ ಚಿತ್ರಗೀತೆಗಳ ಮಧುರ ಮಾರ್ದನಿ
ಕುಂದಾಪುರ: ಸಂಗೀತ ರಸಮಂಜರಿಯಲ್ಲಿ ಸದಾ ಹೊಸತನವನ್ನೇ ಪರಿಚಯಿಸುತ್ತಿರುವ ಕಲಾಕ್ಷೇತ್ರ ಕುಂದಾಪುರ ಇದರ ಬಹುನಿರೀಕ್ಷೆಯ ಇನಿದನಿ ಕಾರ್ಯಕ್ರಮವು ಈ ಬಾರಿ ಜನವರಿ 11 ರಂದು ಭಾನುವಾರ ಇಲ್ಲಿನ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು.
ಸೋಮವಾರ ಬೆಳಗ್ಗೆ ನಗರದಲ್ಲಿರುವ ಕಲಾಕ್ಷೇತ್ರ ಕಚೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿನೂತನವಾಗಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸಂಘಟಿಸಿಕೊಂಡು ಜನಮೆಚ್ಚುಗೆ ಪಡೆದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಅಲ್ಲಿ ಶಿಸ್ತು, ಶಿಷ್ಟಾಚಾರ, ಶ್ರದ್ದೆ, ವೈಶಿಷ್ಟ್ಯತೆ ಇರುತ್ತದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಈ ಬಾರಿ 14ನೇ ವರ್ಷದ ಇನಿದನಿ ಕಾರ್ಯಕ್ರಮವು ಮತ್ತಷ್ಟು ವೈಶಿಷ್ಟ್ಯದಿಂದ ಕೂಡಿರುತ್ತದೆ. ಈ ಬಗ್ಗೆ ತಯಾರಿಯೂ ನಡೆಯುತ್ತಿದೆ ಎಂದರು.
ಹಳೆಯ ಚಿತ್ರಗೀತೆಗಳ ಮಧುರ ಮಾರ್ದನಿ:
90 ರ ದಶಕದ ಒಳಗಿನ 27 ಅತ್ಯುತ್ತಮ ಹಾಡುಗಳು ಮತ್ತು ಸಂಗೀತ ಸಂಯೋಜನೆ ಇರುವ ಗೀತೆಯನ್ನು ಆಯ್ದುಕೊಂಡು ಪ್ರಸಿದ್ಧ ಗಾಯಕ ಗಾಯಕಿಯರು ಮತ್ತು ಹಿಮ್ಮೇಳದೊಂದಿಗೆ ಪ್ರಸ್ತುತಪಡಿಸುವ ಇನಿದನಿ ಸಂಗೀತಾಭಿಮಾನಿಗಳ ಬಹು ಕಾತುರದ ಸಂಗೀತ ರಸಮಂಜರಿಯಾಗಿ ಹೊರಹೊಮ್ಮಿದೆ.
ಗಾಯಕರು ಮತ್ತು ಹಿಮ್ಮೇಳ:
ಖ್ಯಾತ ಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನೀಲ್ ಮತ್ತು ಮಂಗಳೂರಿನ ವೈ ಎನ್. ರವೀಂದ್ರ, ಮಾಲಿನಿ ಕೇಶವ ಪ್ರಸಾದ್ ಅಶೋಕ್ ಸಾರಂಗ್ ಪ್ರಮುಖ ಮುಖ್ಯ ಹಾಡುಗಾರರಾಗಿದ್ದು, ಅವರೊಂದಿಗೆ ಸ್ಥಳೀಯ ಪ್ರತಿಭೆಗಳಾದ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ ಮತ್ತು ಕಮಲ್ ಕುಂದಾಪುರ ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ರಾಜಗೋಪಾಲ್, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ್ ನವಗಿರಿ, ವಾಮನ ಕುಮಾರ್ ಕಾರ್ಕಳ, ಸಿಜಿಮೂನ್ ಕೊಚ್ಚಿನ್, ಗುರುರಾಜ್ ಎಮ್.ಜಿ, ಸುಮುಖ್ ಆಚಾರ್ಯ, ವರ್ಷಾ ಕುಂದಾಪುರ, ಟೋನಿ ಡಿಸಿಲ್ವಾ, ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯಲ್ಲಿ ಕೆ.ವಿ ರಮಣ್ ಮೂಡುಬಿದಿರೆ ಇರಲಿದ್ದಾರೆ ಎಂದರು.
ಕಳೆದ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ನೂರರ ಸಂಭ್ರಮ ಕಂಡ ನಾಡಗೀತೆಗೆ ಸಹಸ್ರ ಕಂಠಗಳಿಂದ ಗಾನನಮನ ಸೇರಿದಂತೆ ಸತತ 24 ಗಂಟೆಗಳಿಗೂ ಅಧಿಕ ಕಾಲ ವಿವಿಧ ಕನ್ನಡ ಸಂಬಂಧಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಕನ್ನಡಾಭಿಮಾನಿಗಳ ಮನ ತಣಿಸಿದ ಹೆಗ್ಗಳಿಕೆ ನಮ್ಮದು. ವಿಶ್ವ ಕುಂದಾಪ್ರ ದಿನಾಚರಣೆಯ ಅಂಗವಾಗಿ ಲಗೋರಿ ಎಂಬ ಗ್ರಾಮೀಣ ಕ್ರೀಡಾ ಕೂಟವನ್ನು ಆಯೋಜಿಸಿ ಈ ನೆಲದ ಕ್ರೀಡಾ ಪರಂಪರೆಯನ್ನು ಎತ್ತಿ ಹಿಡಿದ ಗೌರವಕ್ಕೆ ಕಲಾಕ್ಷೇತ್ರ ಪಾತ್ರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಾಕ್ಷೇತ್ರ ಟ್ರಸ್ಟ್ ನ ಕಾರ್ಯದರ್ಶಿ ರಾಮಚಂದ್ರ ಬಿ.ಎನ್, ಟ್ರಸ್ಟಿಗಳಾದ ರಾಜೇಶ್ ಕಾವೇರಿ, ದಾಮೋದರ್ ಪೈ, ಜಾಯ್ ಜೆ ಕರ್ವಾಲ್ಲೊ, ಸನತ್ ಕುಮಾರ್ ರೈ, ಉದಯ್ ಶೆಟ್ಟಿ ಪಡುಕೆರೆ, ಪ್ರಮುಖರಾದ ಅನಿಲ್ ಉಪ್ಪೂರು, ಸಾಯಿನಾಥ್ ಶೇಟ್, ಸಿದ್ದಾರ್ಥ್, ರಂಜನ್ ಮಾಣಿಗೋಪಾಲ್ ಉಪಸ್ಥಿತರಿದ್ದರು.




