ಯುಡಿ ನ್ಯೂಸ್ ಡಾಟ್ ಕಾಮ್
ಕುಂದಾಪುರ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಋತ್ವೀಜರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಸಹೋದರ ಮಾವ ಕೆನರಾ ಬ್ಯಾಂಕ್‌ನ ನಿವೃತ್ತ ಚೇರ್ಮನ್ ಎಲ್.ಲಕ್ಷ್ಮೀನಾರಾಯಣ ಅವರೊಂದಿಗೆ ಸೋಮವಾರ ರಾತ್ರಿ ಕೊಲ್ಲೂರಿನ ವಾಸ್ತವ್ಯ ಮಾಡಿದ್ದ ಅವರು, ಬೆಳಿಗ್ಗೆ ಶ್ರೀದೇವಿಯ ದರ್ಶನಕ್ಕೆ ದೇವಸ್ಥಾನಕ್ಕೆ ಬಂದಿದ್ದರು. ಕ್ಷೇತ್ರದ ಋತ್ವೀಜರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.
ಶ್ರೀದೇವಿಯ ದರ್ಶನದ ಬಳಿಕ ಹಿರಿಯ ಅರ್ಚಕ ಎನ್.ನರಸಿಂಹ ಅಡಿಗ ಪ್ರಸಾದ ನೀಡಿ ಆಶೀರ್ವದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ತರ್ಗರ್ಸೆ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೇವಳದ ವತಿಯಿಂದ ಗೌರವಿಸಿದರು.
ಮಂಗಳೂರಿನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕ್ಷೇತ್ರದ ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ, ಎನ್.ಸುಬ್ರಮಣ್ಯ ಅಡಿಗ ಇದ್ದರು.




