Tuesday, July 28, 2026

ನಾಯಕತ್ವ ಎಂದರೆ ಜವಾಬ್ದಾರಿಯುತ ಸೇವೆ; ಆತ್ಮಸಾಕ್ಷಿಗೆ ವಂಚನೆ ಮಾಡಬೇಡಿ

ವಿದ್ಯಾರಣ್ಯ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ; ಜಿಲ್ಲಾ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಕರೆ

ಕುಂದಾಪುರ: ನಾಯಕತ್ವ ಎಂದರೆ ಅಧಿಕಾರ ಪ್ರದರ್ಶನವಲ್ಲ, ಅದು ಜವಾಬ್ದಾರಿ, ಶಿಸ್ತು, ಬದ್ಧತೆ ಮತ್ತು ಇತರರಿಗೆ ಸ್ಫೂರ್ತಿಯಾಗುವ ಗುಣ. ವಿದ್ಯಾರ್ಥಿ ಜೀವನದಲ್ಲಿಯೇ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಹೇಳಿದರು.

ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ ನಲ್ಲಿ ಬುಧವಾರ ನಡೆದ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಯಕತ್ವ ಎಂದರೆ ತಂಡವನ್ನು ಜೊತೆಯಲ್ಲಿ ಕೊಂಡೊಯ್ಯುವ ಸಾಮರ್ಥ್ಯ. ವಿದ್ಯಾರ್ಥಿ ಸಂಸತ್‌ನಂತಹ ವೇದಿಕೆಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶಗಳಾಗಿವೆ. ಈ ಅವಕಾಶವನ್ನು ಜವಾಬ್ದಾರಿಯಿಂದ ಬಳಸಿಕೊಂಡು ಶಿಸ್ತು ಮತ್ತು ಬದ್ಧತೆಯನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನನ್ನ ಮಗನ ಯಶಸ್ಸಿನ ಹಿಂದೆ ಸುಜ್ಞಾನ ಸಂಸ್ಥೆಯ ಶ್ರಮವಿದೆ:

ಕಳೆದ ನಾಲ್ಕೈದು ವರ್ಷಗಳಿಂದ ಸುಜ್ಞಾನ ವಿದ್ಯಾಸಂಸ್ಥೆಯನ್ನು ಹತ್ತಿರದಿಂದ ಗಮನಿಸಿದ್ದೇನೆ. ನನ್ನ ಮಗನಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಸಂಸ್ಥೆಯ ಪಾತ್ರ ಅಪಾರವಾಗಿದೆ. ಆತ NEET ಪರೀಕ್ಷೆಯಲ್ಲಿ 720ಕ್ಕೆ 600 ಅಂಕ ಗಳಿಸಿ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾನೆ. ಈ ಸಾಧನೆಯ ಹಿಂದೆ ಸಂಸ್ಥೆಯ ಗುಣಮಟ್ಟದ ತರಬೇತಿ, ಕ್ರ್ಯಾಷ್ ಕೋರ್ಸ್, ಮಾಕ್ ಟೆಸ್ಟ್‌ಗಳು ಮತ್ತು ಶಿಕ್ಷಕರ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ಸುಜ್ಞಾನ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್ ಮಾತನಾಡಿ, ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪರಿಶ್ರಮ, ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸ ಅಗತ್ಯ ಎಂದರು.

ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಜಯಚಂದ್ರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡಲಾಗುವ ಬ್ಯಾಡ್ಜ್ ಶಾಲೆಯು ಅವರ ಮೇಲೆ ಇಟ್ಟಿರುವ ನಂಬಿಕೆಯ ಪ್ರತೀಕವಾಗಿದೆ. ಆ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸಿನ ಕುರಿತು ಉಲ್ಲೇಖಿಸಿದ ಅವರು, ನಿದ್ರೆಯಲ್ಲಿ ಕಾಣುವ ಕನಸುಗಳಲ್ಲ, ನಮ್ಮನ್ನು ಸಾಧನೆಯತ್ತ ಕೊಂಡೊಯ್ಯುವ ಕನಸುಗಳೇ ಜೀವನವನ್ನು ರೂಪಿಸುತ್ತವೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ನಾಯಕನಾಗುವ ಮೊದಲು ಶಿಸ್ತು, ಬದ್ಧತೆ ಮತ್ತು ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೌಲ್ಯಗಳೇ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ನಾಯಕತ್ವ ಎಂದರೆ ಅಧಿಕಾರ ಚಲಾಯಿಸುವುದಲ್ಲ; ಇತರರಿಗೆ ಪ್ರೇರಣೆಯಾಗುವುದೇ ನಿಜವಾದ ನಾಯಕತ್ವ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಶಾಲೆಗೆ ಆಹ್ವಾನಿಸಲಾಗುತ್ತಿದೆ. ಎಲ್ಲರನ್ನು ಜೊತೆಗೇ ಕೊಂಡೊಯ್ಯುವ ಮನೋಭಾವವೇ ನಿಜವಾದ ನಾಯಕತ್ವದ ಲಕ್ಷಣ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಿಂದ ಬ್ಯಾಡ್ಜ್ ಸ್ವೀಕರಿಸಿ ಪದಗ್ರಹಣ ಮಾಡಿದರು.

ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲ ಪ್ರದೀಪ್ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕಿಯರಾದ ಲಾಸ್ಯ ಮಧ್ಯಸ್ಥ ಹಾಗೂ ಯಶಿಕಾ ಅವರಿಗೆ ಶುಭ ಹಾರೈಸಲಾಯಿತು.

ಸುಜ್ಞಾನ ನ್ಯಾಷನಲ್ ಕಾಲೇಜು, ಬಾರ್ಕೂರಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಅನಿತಾ ಕುಮಾರಿ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಸ್ಪೂರ್ತಿ ಎ. ವಂದಿಸಿದರು.

More like this
Related

ದೇಶದಲ್ಲಿ ಚಳುವಳಿ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ದ ಜಿಲ್ಲಾ ಬಿಜೆಪಿ ಪ್ರತಿಭಟನೆ

ಉಡುಪಿ: ಚಳುವಳಿಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಕಾಕ್ರೋಚ್...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಲ್ಲವೇ? ಬಿಜೆಪಿಗರು ಉತ್ತರಿಸಲಿ: ಕೋಳ್ಕೆರೆ ವಿಕಾಸ್ ಹೆಗ್ಡೆ

ಉಡುಪಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ದೇಶದ ಲಕ್ಷಾಂತರ...

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ಧ ಬಲವಂತದ ಕ್ರಮ ಬೇಡ – ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ...

ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ದಿಲ್ಲಿಯ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿ : ಸಿಎಂ ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ರಾಜ್ಯದ ಮೇಕೆದಾಟು ಅಣೆಕಟ್ಟು ಸೇರಿದಂತೆ ಬಾಕಿ ಯೋಜನೆಗಳ ನಿರ್ವಹಣೆಗೆ...

Copying is disabled on Udupi Digital News.