Thursday, October 29, 2026

ಕರಾವಳಿಯಲ್ಲಿ ಕ್ರೈಸ್ತರ ಮೊಂತಿ ಹಬ್ಬ

‘ಸಕ್ಕಡ್ ಸಾಂಗಾತಾ ಮೆಳ್ಯಾಂ, ಮರಿಯೆಕ್ ಹೊಗೊಳ್ಶಿಯಾಂ!’

‘ಸಕ್ಕಡ್ ಸಾಂಗಾತಾ ಮೆಳ್ಯಾಂ, ಮರಿಯೆಕ್ ಹೊಗೊಳ್ಶಿಯಾಂ! ಕರಾವಳಿಯ ಕೊಂಕಣಿ ಕಥೊಲಿಕರಿಗೆ ಮಂಗಳವಾರ (ಸೆ.8) ಮೊಂತಿ ಹಬ್ಬ ಅಥವಾ ಮೇರಿ ಮಾತೆಯ ಜನ್ಮದಿನದ ಸಂಭ್ರಮವಾಗಿದೆ. ಇದು ಪ್ರತಿವರ್ಷ ಸೆ. 8ರಂದು ಬರುವ ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬವಾಗಿದ್ದು ಹೊಸ ಬೆಳೆಯ ಹಬ್ಬವಾಗಿ ಕೂಡ ಆಚರಿಸಲ್ಪಡುತ್ತದೆ.

ಹಬ್ಬಕ್ಕೆ ಮುಂಚಿತವಾಗಿ 9 ದಿನ ಮಾತೆ ಮೇರಿಯ ಕೃಪೆಯನ್ನು ಬೇಡಿ ಕೊಂಡು ವಿಶೇಷ ಪ್ರಾರ್ಥನೆ(ನವೇನಾ)ಯನ್ನು ಎಲ್ಲ ಚರ್ಚ್‌ಗಳಲ್ಲಿ ನಡೆಸಲಾ ಗುತ್ತದೆ. 9ನೇ ದಿನವನ್ನು ಮೊಂತಿ ಹಬ್ಬವಾಗಿ ಕರಾವಳಿಯ ಕ್ರೆಸ್ತ ಬಂಧುಗಳು ಆಚರಣೆ ಮಾಡು ತ್ತಾರೆ. ಹಬ್ಬದ ದಿನದಂದು ಕನ್ಯಾ ಮರಿಯಮ್ಮ ಅವರ ಮೂರ್ತಿಯನ್ನು ಚರ್ಚ್ ಮುಂಭಾಗದಲ್ಲಿಟ್ಟು ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮರಿಗೆ ಪುಷ್ಪಾರ್ಪಣೆ ಮಾಡಿದ ನಂತರ ಚರ್ಚ್‌ಗಳಲ್ಲಿ ಮೊಂತಿ ಹಬ್ಬಕ್ಕಾಗಿ ವಿಶೇಷವಾದ ಪ್ರಾರ್ಥನೆ, ಬಲಿಪೂಜೆಗಳು ನಡೆಯುತ್ತವೆ. ಈ ವೇಳೆ ಗದ್ದೆಗಳಲ್ಲಿ ಬೆಳೆದ ಹೊಸ ತೆನೆಯನ್ನು ಗೌರವ ಪೂರ್ವಕವಾಗಿ ವಾಳೆಯ ಗುರಿಕಾರರು ಗೌರವ ಪೂರ್ವಕವಾಗಿ ಚರ್ಚಿಗೆ ತಂದು ಧರ್ಮಗುರುಗಳು ಆಶೀರ್ವಚನ ಮಾಡಿ ಪೂಜೆಯ ಬಳಿಕ ಹಬ್ಬದ ಪ್ರಸಾದ ರೂಪದಲ್ಲಿ ಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಮಾಡಿದ ಪುಟಾಣಿ ಮಕ್ಕಳಿಗೆ ಕಬ್ಬು, ಸಿಹಿ ತಿಂಡಿಗಳನ್ನು ನೀಡಲಾಗುತ್ತದೆ.

‘ಮೊಂತಿ ಹಬ್ಬ’ದ ಮತ್ತೊಂದು ಪ್ರಮುಖ ಆಚರಣೆಯಲ್ಲಿ ಹೊಸ ಅಕ್ಕಿ ಊಟ, ವಿಶೇಷ ಮನ್ನಣೆ ಪಡೆದುಕೊಂಡಿದೆ. ಹೊಸ ಭತ್ತದ ತೆನೆಗಳನ್ನು ಚರ್ಚ್‌ಗಳಲ್ಲಿ ಪವಿತ್ರೀಕರಿಸಿ ನಂತರ ಕ್ರೈಸ್ತ ಸಮುದಾಯದವರಿಗೆ ಹಂಚಲಾಗುತ್ತದೆ. ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲರೂ ವೈವಿಧ್ಯಮಯ ವ್ಯಂಜನಗಳನ್ನು ತಯಾರಿಸಿ ಒಟ್ಟಾಗಿ ಕೂತು ಸೇವಿಸುವುದು ಈ ಹಬ್ಬದ ವಿಶೇಷತೆಗಳಲ್ಲಿ ಒಂದಾಗಿದೆ.

ಉದ್ಯೊಗಕ್ಕಾಗಿ ಬೇರೆ ಊರುಗಳಿಗೆ ತೆರಳಿದ ಕುಟುಂಬ ಸದಸ್ಯರೆಲ್ಲರೂ ಈ ಹಬ್ಬದ ಸಂದರ್ಭ ಹಾಜರಿರುವುದು ಕಡ್ಡಾಯ. ಅನಿವಾರ್ಯ ಕಾರಣ ಗಳಿಂದಾಗಿ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರುವ ಕುಟುಂಬ ಸದಸ್ಯರಿಗೆ ಅಂಚೆ ಮೂಲಕ ಭತ್ತದ ತೆನೆ ಕಳುಹಿಸಿ ಅವರೂ ‘ಪ್ರಥಮ ಭೋಜನ’ದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ವಿದೇಶದಲ್ಲಿ, ವಿಶೇಷವಾಗಿ ಕೊಲ್ಲಿರಾಷ್ಟ್ರಗಳಲ್ಲಿ ನೆಲೆ ನಿಂತ ಕೆಥೋಲಿಕ್ ಕ್ರೆಸ್ತರು ಅಲ್ಲಿನ ಕ್ರೆಸ್ತ ದೇವಾಲಯಗಳಲ್ಲಿ ಕುಟುಂಬದ ಸದಸ್ಯರಂತೆ ಜತೆಗೂಡಿ ಸಂಭ್ರಮದ ತೆನೆಹಬ್ಬ ಆಚರಿಸಿ ಈ ‘ಹೊಸ ಅಕ್ಕಿ’ ಊಟ ಮಾಡುವುದು ನಡೆದುಕೊಂಡು ಬಂದಿದೆ. ಈ ಹಬ್ಬ ಒಂದರ್ಥದಲ್ಲಿ ಕುಟುಂಬ ಸದಸ್ಯರ ಏಕತೆಯ ಸಂಕೇತ.

ಈ ಹಬ್ಬ ಹೆಚ್ಚಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ. ಕರಾವಳಿಯ ಕ್ರೈಸ್ತರಲ್ಲಿ ಹೆಚ್ಚಿನವರು ಕೃಷಿಯನ್ನೇ ಜೀವನಾಧಾರವಾಗಿ ನಂಬಿದ ಶ್ರಮಜೀವಿಗಳು. ಪ್ರಕೃತಿಯಿಂದ ಪಡೆದ ಕೊಡುಗೆಗೆ ಕೃತಜ್ಞತೆಯೊಂದಿಗೆ ಪೂಜೆ ಸಲ್ಲಿಸುವ ಪದ್ಧತಿ ತಲೆ ತಲಾಂತರಗಳಿಂದ ಇಲ್ಲಿ ನಡೆದು ಬಂದಿದೆ. ಇದರ ಹುಟ್ಟು ಮತ್ತು ಹಿನ್ನಲೆಯ ಬಗ್ಗೆ ಬೇರೆ ಬೇರೆ ಉಲ್ಲೇಖಗಳು ಕಂಡು ಬರು ತ್ತವೆ. ಮಂಗಳೂರು ಹೊರ ಹೊಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳ ಹಿಂದೆ ಮೊಂತಿ ಫೆಸ್ತ್ ಆಚರಣೆ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ.

ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಗುರ ಮಠವೊಂದು ಇಲ್ಲಿ ಸ್ಥಾಪನೆಯಾಯಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಗೋವಾದಿಂದ ಬಂದ ಕಥೋಲಿಕ್ ಧರ್ಮಗುರು ಫಾರ್ದ ಜೋಕಿಂ ಮಿರಾಂದಾ ಅವರು ಸ್ಥಳೀಯ ಚರ್ಚ್ ನ ವಾರ್ಷಿಕ ಹಬ್ಬದ ಜತೆಗೆ ಮೇರಿ ಮಾತೆಯ ಜನ್ಮ ದಿನವನ್ನು ಪ್ರಥಮ ಬಾರಿಗೆ ಆಚರಿಸಿದರು ಎನ್ನುವುದು ಪ್ರತೀತಿ.

ಮೊಂತೆ ಪದದಿಂದ ಮೊಂತಿ ಬಂತು. ವರ್ಷ ಕಳೆದಂತೆ ಈ ಆಚರಣೆ ಮುಂದುವರಿಯುತ್ತಾ ಕ್ರಮೇಣ ಮೊಂತಿ ಫೆಸ್ತ್ ಆಯಿತು ಎನ್ನುವುದು ಹಿರಿಯರ ಅಭಿಪ್ರಾಯ. ಕರಾವಳಿಯ ಕೆಥೋಲಿಕರು ಎಲ್ಲಿಯೇ ವಾಸಿಸುತ್ತಿದ್ದರೂ, ಅಲ್ಲೆಲ್ಲಾ ಈ ತೆನೆ ಹಬ್ಬವನ್ನು ಆಚರಿಸುತ್ತಾರೆ. ಮುಂಬಯಿ ಮತ್ತಿತರ ನಗರಗಳಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ, ಇಂಗ್ಲೆಂಡ್, ಅಮೇರಿಕಾ, ಕೆನಡಾಗಳಲ್ಲೂ ಇದನ್ನು ಆಚರಣೆ ಮಾಡಲಾಗುತ್ತದೆ.

ತೆನೆ ಹಬ್ಬದ ವಿಶೇಷತೆಯೇ ಸಸ್ಯಾಹಾರಿ ಭೋಜನ. ಕ್ರೈಸ್ತರ ಪ್ರತಿ ಮನೆ ಯಲ್ಲಿ ಕನಿಷ್ಟ 3 ಅಥವಾ 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳಾ ದರೂ ಇರುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಇದರ ಇನ್ನೊಂದು ವೈಶಿಷ್ಟ್ಯ.

ಭಾರತದಲ್ಲಿ ಕೇರಳ, ಗೋವಾ ಮತ್ತು ಮುಂಬೈನಲ್ಲಿ ಮೇರಿ ನೇಟಿವಿಟಿ ಆಚರಣೆಗೆ ವಿಶೇಷ ಮಹತ್ವವಿದೆ. ಕೇರಳದಲ್ಲಿ ಈ ಹಬ್ಬವನ್ನು ನಲ್ಪಿರವಿ ಎಂದೂ ಕರೆಯುತ್ತಾರೆ. ಗೋವಾದಲ್ಲಿ ಈ ಹಬ್ಬವನ್ನು ಮೊಂತಿ ಫೆಸ್ಟ್ ಎಂದು ಆಚರಿಸುತ್ತಾರೆ. ಮುಂಬೈನಲ್ಲಿ ಬಾಂದ್ರಾ ಫೇರ್ ಎಂಬ ಹೆಸರಿನೊಂದಿಗೆ ಒಂದು ವಾರಗಳ ಕಾಲ ಇದನ್ನು ಆಚರಿಸುತ್ತಾರೆ.

ಸಮಾಜ ಆಧುನಿಕತೆಯತ್ತ ಮುಖ ಮಾಡಿದ್ದರೂ ಕೂಡ ಕರಾವಳಿಯ ಕ್ರೈಸ್ತ ಸಮುದಾಯ ಇಂದಿಗೂ ತನ್ನ ಆಚರಣೆಯನ್ನು ಕೈಬಿಡದೆ ನಡೆಸಿಕೊಂಡು ಬಂದಿರುವುದು ವಿಶೇಷ. ಆಧುನಿಕ ಸಮಾಜದಲ್ಲಿ ಅಂಚೆ ವ್ಯವಸ್ಥೆ ಮೂಲೆಗುಂಪಾಗುತ್ತಿದ್ದರೂ ಕೂಡ ಹಬ್ಬಕ್ಕಾಗಿ ಹೊಸ ತೆನೆಯನ್ನು ತನ್ನವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಇಂದಿಗೂ ಉಳಿದಿದೆ. ಈ ಮೂಲಕ ಹಬ್ಬದ ಆಚರಣೆ ಬದಲಾವಣೆ ಕಾಣದೆ ತನ್ನತನವನ್ನು ಉಳಿಕೊಂಡಿದೆ.

More like this
Related

ನ. 1ರಂದು ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯ ಉದ್ಘಾಟನೆ

ಉಡುಪಿಯ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ನವೀಕೃತ...

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ವರ್ಗಾವಣೆ, ಮಹೇಶ್ ಪಿ.ಎಸ್.  ಹೊಸ ಎಸಿ

ಕುಂದಾಪುರ: ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ರಶ್ಮಿ ಎಸ್.ಆರ್. ಅವರನ್ನು ವರ್ಗಾವಣೆ...

ಪರಿಶಿಷ್ಟ ಜಾತಿಯ ಪುರುಷರಿಗೂ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಿ: ಮಂಜುನಾಥ್ ಚೇರ್ಕಾಡಿ ಮನವಿ

ಉಡುಪಿ: ಉಡುಪಿ ಜಿಲ್ಲೆಯ ಏಳು ತಾಲೂಕು ಪಂಚಾಯತ್‌ಗಳು ಹಾಗೂ ಚೇರ್ಕಾಡಿ ಗ್ರಾಮ...

ಪರಿಶಿಷ್ಟ ಪಂಗಡದ ಪುರುಷರಿಗೂ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಸಿಗಬೇಕು: ಕೆ.ಟಿ. ನಾಯ್ಕ್

ಉಮೇಶ್ ನಾಯ್ಕ್ ಅವರ ಮನವಿ ನ್ಯಾಯಸಮ್ಮತ; ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ...

Copying is disabled on Udupi Digital News.