Tuesday, September 29, 2026

ಕೃಷಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ : ಸಿ.ಇ.ಓ ಪ್ರತೀಕ್ ಬಾಯಲ್

ಉಡುಪಿ: ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳ ಜೊತೆಗೆ ಗ್ರಾಮೀಣ ಬದುಕು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರವಾಸೋದ್ಯಮದೊಂದಿಗೆ ಬೆಸೆಯಲು ಕೃಷಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಚಿಂತನೆ ಇದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದರು.

ಅವರು ರವಿವಾರ ಕಾಪುವಿನ ಪ್ಯಾಲೇಸ್ ಗಾರ್ಡನ್ನಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಉಡುಪಿ ಪ್ರವಾಸೋದ್ಯಮ ಇಲಾಖೆ ಹಾಗೂ ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಸಹಯೋಗದಲ್ಲಿ ಉಡುಪಿ ಟೂರಿಸಂ ಇನ್ಲ್ಫುಯೆನ್ಸರ್ಸ್ & ಸ್ಟೇಕ್ ಹೋರ್ಲ್ಡ್ಸ್ ಮೀಟ್ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು

ಪ್ರವಾಸಿಗರಿಗೆ ಪ್ರವಾಸಿ ತಾಣಗಳು ಕೇವಲ ವೀಕ್ಷಣೆಗೆ ಸೀಮಿತವಾಗದೆ, ಸ್ಥಳೀಯ ಗ್ರಾಮೀಣ ಜೀವನಶೈಲಿ, ಕೃಷಿ ಚಟುವಟಿಕೆಗಳು, ಸ್ಥಳೀಯ ಆಹಾರ ಪದ್ಧತಿ ಹಾಗೂ ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ಅವಕಾಶ ಕಲ್ಪಿಸಬೇಕು. ಇದರ ಭಾಗವಾಗಿ ವಿಲೇಜ್ ವಾಕ್, ಫಾರ್ಮ್ ವಿಸಿಟ್, ಸ್ಥಳೀಯ ಆಹಾರ ಪರಿಚಯ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಅನುಭವ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರವಾಸೋದ್ಯಮ ಪ್ಯಾಕೇಜ್ಗಳಲ್ಲಿ ಅಳವಡಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ ಎಂದರು.

ಜಾನಪದ ಕಲೆ, ಯಕ್ಷಗಾನ, ಸ್ಥಳೀಯ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಗಳ ಪರಿಚಯದ ಮೂಲಕ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶ ಇದೆ. ಕೃಷಿ ಪ್ರವಾಸೋದ್ಯಮದಿಂದ ಸ್ಥಳೀಯ ರೈತರು, ಗ್ರಾಮೀಣ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಕಲಾವಿದರಿಗೆ ಹೆಚ್ಚು ಆರ್ಥಿಕ ಅವಕಾಶಗಳು ಸೃಷ್ಟಿಯಾಗುತ್ತವೆ. ‘ಉಡುಪಿ – ಸೀ ಬ್ರಾಂಡ್’ ಜೊತೆಗೆ ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮಕ್ಕೂ ಹೆಚ್ಚಿನ ಪ್ರಚಾರ ನೀಡುವ ಮೂಲಕ ಜಿಲ್ಲೆಯನ್ನು ವೈವಿಧ್ಯಮಯ ಪ್ರವಾಸಿ ಅನುಭವದ ತಾಣವನ್ನಾಗಿ ರೂಪಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಸ್ಥಳೀಯ ಪ್ರವಾಸಿ ತಾಣಗಳು, ಕೃಷಿ ಮತ್ತು ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು. ಸ್ಥಳೀಯರು ಹಾಗೂ ಪ್ರವಾಸೋದ್ಯದ್ಯಮ ಕ್ಷೇತ್ರದ ವಿವಿಧ ಪಾಲುದಾರರು ಒಗ್ಗೂಡಿ ಕಾರ್ಯನಿರ್ವಹಿಸಿದರೆ ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ಕರಾವಳಿ ಉಡುಪಿಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಕಡಲತೀರಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳು ಮತ್ತು ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ದೇಶ-ವಿದೇಶಗಳ ಪ್ರವಾಸಿಗರಿಗೆ ಪರಿಣಾಮಕಾರಿಯಾಗಿ ಪರಿಚಯಿಸಬೇಕು. ಅಧಿಕಾರಿಗಳು ಹಾಗೂ ಕಂಟೆAಟ್ ಕ್ರಿಯೇಟರ್ಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕರಾವಳಿ ಉಡುಪಿಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬಹುದು ಎಂದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಮಾತನಾಡಿ, ಪ್ರವಾಸೋದ್ಯಮ ಇನ್ಫ್ಲುಯೆನ್ಸರ್ಗಳು, ಕಂಟೆಂಟ್ ಕ್ರಿಯೇಟರ್ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರ ಸಹಕಾರ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆಯ ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ತಾಣಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಮೂಲಕ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಉತ್ತಮ ಗುಣಮಟ್ಟದ ಸ್ಥಳೀಯ ಕಂಟೆAಟ್ ಸೃಷ್ಟಿಸುವಲ್ಲಿ ಕಂಟೆಂಟ್ ಕ್ರಿಯೇಟರ್ಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಕೃಷಿ ಪ್ರವಾಸೋದ್ಯಮದ ಕುರಿತು ಕಾರ್ಯದರ್ಶಿ ಗೌರವ ಶೇಣವ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ 20 ಇನ್ಫ್ಲುಯೆನ್ಸರ್ಗಳನ್ನು ಸನ್ಮಾನಿಸಲಾಯಿತು.

“ನೈಜ ಉಡುಪಿಯ ಇತಿಹಾಸವನ್ನು ಪ್ರಚಾರ ಮಾಡುವ ಮೂಲಕ ಪ್ರವಾಸಿಗರು ಉಡುಪಿಯೊಂದಿಗೆ ಸಂಪರ್ಕ ಸಾಧಿಸಲಿ, ಜನರೊಂದಿಗೆ ಸಹಕರಿಸಿ ಉಡುಪಿಯನ್ನು ಜಗತ್ತಿಗೆ ಪ್ರಚಾರ ಮಾಡಲಿ ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಜಿಲ್ಲೆ ಬೆಳೆಯಲಿ” ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಹಾಗೂ ಹೊಸ ಪ್ರವಾಸೋದ್ಯಮ ಮಾದರಿಗಳ ಕುರಿತು ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರು, ಪ್ರವಾಸೋದ್ಯಮ ಇನ್ಫ್ಲುಯೆನ್ಸರ್ಗಳು, ಕಂಟೆಂಟ್ ಕ್ರಿಯೇಟರ್ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸುದೀಪ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

More like this
Related

ಅ. 17: ಸಾರ್ವಜನಿಕ  ಶ್ರೀ ಗಣೇಶೋತ್ಸವ ಸಮಿತಿ (ರಿ). ಯುವ ಘಟಕದ ನೇತೃತ್ವದಲ್ಲಿ ಉಡುಪಿ ದಾಂಡಿಯಾ 2026

ಉಡುಪಿ:  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುವ ಘಟಕದ ನೇತೃತ್ವದಲ್ಲಿ ಅಕ್ಟೋಬರ್...

ಅ.13ರಂದು ಉಚ್ಚಿಲ ದಸರಾ ಕುಸ್ತಿ ಪಂದ್ಯಾಕೂಟ

ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ವಿವಿಧ ತೂಕದ ಸ್ಪರ್ಧೆಗಳು ಉಚ್ಚಿಲ: ದಕ್ಷಿಣ ಕನ್ನಡ...

ಕೆಂಗೇರಿ ಬಳಿ ಆನೆ ದಾಳಿಗೆ ವ್ಯಕ್ತಿ ಬಲಿ ಶಂಕೆ: ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿ ಸಾವು

ಬೆಂಗಳೂರು, : ರಾಜಧಾನಿ ಬೆಂಗಳೂರಿನ ಕೆಂಗೇರಿ ಸಮೀಪ ಆನೆ ದಾಳಿಗೆ ವ್ಯಕ್ತಿಯೊಬ್ಬರು...

‘ಅಮಿತಾಭ್ ಬಚ್ಚನ್ ಮನೆಗೆ ಊಟಕ್ಕೆ ಕರೆಯಬೇಕು’: ತಂದೆಯ ಆಸೆ ಬಿಚ್ಚಿಟ್ಟ ವಾಮಿಕಾ ಗಬ್ಬಿ

ಮುಂಬೈ: ಬಾಲಿವುಡ್ ನಟಿ ವಾಮಿಕಾ ಗಬ್ಬಿ ತಮ್ಮ ತಂದೆಯ ಅಪರೂಪದ ಆಸೆಯೊಂದನ್ನು...

Copying is disabled on Udupi Digital News.