Sunday, June 21, 2026

ಪರಿಸರ ಸಂರಕ್ಷಣೆಯಲ್ಲಿ ಹಕ್ಕು ಮತ್ತು ಜವಾಬ್ದಾರಿ ಮರೆಯಬಾರದು: ಡಿಸಿಎಫ್‌ ರುಥ್ರನ್ ಪಿ

ಕುಂದಾಪುರ: ಪರಿಸರದ ಮೇಲೆ ಪ್ರತಿಯೊಬ್ಬರಿಗೂ ಹಕ್ಕಿರುವಂತೆಯೇ ಅದನ್ನು ರಕ್ಷಿಸುವ ಜವಾಬ್ದಾರಿಯೂ ಇದೆ. ಆ ಜವಾಬ್ದಾರಿಯಿಂದ ನುಣುಚಿಕೊಂಡರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪರಿಸರ ಸಂರಕ್ಷಣೆಯ ವಿಷಯದಲ್ಲಿ ನಾವು ನಮ್ಮ ಹಕ್ಕು ಮತ್ತು ಜವಾಬ್ದಾರಿ ಮರೆಯಬಾರದು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ ಪಿ. ಹೇಳಿದರು.

ಅವರು ಬುಧವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅರಣ್ಯ ಇಲಾಖೆ ಹಾಗೂ ಶ್ರೀ ಶಾರದಾ ಕಾಲೇಜು ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಪ್ರತಿಯೊಂದು ಕಾರ್ಯವೂ ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಂಡಾಗ ನಿಜವಾದ ಜಾಗೃತಿ ಮೂಡುತ್ತದೆ. ಇಂದು ಪ್ರಕೃತಿ ಸಂರಕ್ಷಣೆ ಮಾಡದಿದ್ದರೆ ಮುಂದಿನ ತಲೆಮಾರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಮೂಲಕ ಪರಿಸರದ ಸಮತೋಲನ ಕಾಪಾಡಬಹುದು ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾನ್ ಡಿಸೋಜ ಅವರಿಗೆ ಗಿಡ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ ಆರ್‌ಎಫ್‌ಒ ರಾಘವೇಂದ್ರ ನಾಯ್ಕ್ ಮಾತನಾಡಿ, ಪ್ರಕೃತಿಯ ಪ್ರತಿಯೊಂದು ಜೀವಿ ಹಾಗೂ ಸಸ್ಯಕ್ಕೂ ತನ್ನದೇ ಆದ ಮಹತ್ವವಿದೆ. ಅರಣ್ಯ ನಾಶದಿಂದ ಪರಿಸರದ ಸಮತೋಲನ ಹದಗೆಡುತ್ತಿದ್ದು, ಅನೇಕ ಜೀವಸಂಕುಲಗಳ ಅಳಿವಿನ ಪರಿಣಾಮ ಮಾನವ ಜೀವನದ ಮೇಲೂ ಬೀಳುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಶ್ರೀ ಶಾರದಾ ಕಾಲೇಜಿನ ಸಂಚಾಲಕಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವತ್ತ ಗಮನ ಹರಿಸಬೇಕು. ಉತ್ತಮ ಆರೋಗ್ಯ ಮತ್ತು ಸುಸ್ಥಿರ ಬದುಕಿಗೆ ಪರಿಸರ ಸಂರಕ್ಷಣೆ ಅಗತ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಎನ್. ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಕಷ್ಟವಾದರೂ ಅದರ ಮರುಬಳಕೆ ಹಾಗೂ ಸಮರ್ಪಕ ವಿಲೇವಾರಿಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ) ಮಾತನಾಡಿ, ಹವಾಮಾನ ವೈಪರೀತ್ಯಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ನಮ್ಮ ತಪ್ಪಿನ ಪರಿಣಾಮವನ್ನು ಭವಿಷ್ಯದ ತಲೆಮಾರು ಅನುಭವಿಸಬಾರದು. ಭೂಮಿ, ಸಮುದ್ರ ಮತ್ತು ಬಾಹ್ಯಾಕಾಶದಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅದರ ಮರುಬಳಕೆ ಮತ್ತು ವಿಲೇವಾರಿ ಕುರಿತು ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ರಾಜ್ಯ ಹಾಗೂ ಜಿಲ್ಲಾ ಸಂಘದ ನಿರ್ದೇಶನದಂತೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 33 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಕ್ರೀಡಾಂಗಣದ ಸುತ್ತ 33 ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶೇಷ ಪರಿಸರ ಅಭಿಯಾನ ನಡೆಸಲಾಯಿತು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಸುಭಾಷ್ಚಂದ್ರ ಶೆಟ್ಟಿ ಬಾಂಡ್ಯ, ಜಿಲ್ಲಾ ಸಂಘದ ಕಾರ್ಯದರ್ಶಿ ಟಿ. ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ ಹೆಮ್ಮಾಡಿ ವಂದಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.


More like this
Related

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ ಕೆ ಹರಿಪ್ರಸಾದ್ ಅಧಿಕಾರ ಸ್ವೀಕಾರ

ಬೆಂಗಳೂರು: ನೂತನ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿಕೆ ಹರಿಪ್ರಸಾದ್ ಅವರು ಭಾನುವಾರ (ಜೂನ್...

ಸುಳ್ಯ| ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತ್ಯು

ಸುಳ್ಯ: ಮನೆಯ ಸಮೀಪದ ಕೆರೆಯ ಬಳಿ ಆಟವಾಡುತ್ತಿದ್ದ ಅವಳಿ ಮಕ್ಕಳು ಆಕಸ್ಮಿಕವಾಗಿ...

ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು ಕಾಂಗ್ರೆಸ್ ಸ್ವಾಗತ

ಕುಂದಾಪುರ: ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ಕೊಡುವ ಮುಖ್ಯಮಂತ್ರಿ ಡಿ. ಕೆ....

MRG ಗ್ರೂಪ್ ಮಾಲೀಕ ಪ್ರಕಾಶ್ ಶೆಟ್ಟಿಯಿಂದ ಐಷಾರಾಮಿ ‘ಎಂಬ್ರೇಯರ್ ಲೆಗಸಿ 650’ ಖಾಸಗಿ ಜೆಟ್ ಖರೀದಿ!

ಮಂಗಳೂರು: ಎಂಆರ್ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್...

Copying is disabled on Udupi Digital News.