ಗ್ರಾಮಾಂತರ ಪಿಎಸ್ಐ ನಾಸಿರ್ ಹುಸೇನ್ ಅವರನ್ನು ಅಜೆಕಾರು ಠಾಣೆಗೆ ವರ್ಗ; ಕಾನ್ಸ್ ಟೇಬಲ್ ಅಮಾನತು.
ಕುಂದಾಪುರ: ನಿಯಮ ಮೀರಿ ಮಣ್ಣು ತುಂಬಿಸಿ, ನಿರ್ಲಕ್ಷದ ಸಾಗಾಟ ನಡೆಸಿ 14 ಕ್ಕೂ ಹೆಚ್ಚು ಹೆಚ್ಚು ಬಸ್ ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಲು ಕಾರಣವಾಗಿದ್ದ ಶೆಟ್ರಕಟ್ಟೆಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಯಲ್ಲಿ ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸಿರ್ ಹುಸೇನ್ ಅವರನ್ನು ಅಜೆಕಾರು ಪೊಲೀಸ್ ಠಾಣೆಗೆ ಅನ್ಯ ಕರ್ತವ್ಯದ ಮೇಲೆ ನಿಯೋಜನೆಯ ಮಾಡಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಮಂಗಳವಾರ ರಾತ್ರಿ ಆದೇಶಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಬೀಟ್ ಪೊಲೀಸ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ.
ಗ್ರಾಮಾಂತರ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಜವಾಬ್ದಾರಿಯನ್ನು ಶಂಕರನಾರಾಯಣದ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಕಾಯ್ಕಿಣಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಸೋಮವಾರ ಸಂಜೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಕುಂದಾಪುರದಿಂದ ಆಜ್ರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಗೆ ವಿರುದ್ದ ದಿಕ್ಕಿನಿಂದ ಬಂದಿದ್ದ ಕೇರಳ ರಾಜ್ಯ ಪರವಾನಿಗೆ ಸಂಖ್ಯೆ ಕೆಎಲ್ -27 ಎ 7100 ಸಂಖ್ಯೆಯ ಟಿಪ್ಪರ್ ವೇಗವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಚಾಲಕನ ನಿರ್ಲಕ್ಷ, ಮಣ್ಣು ಸಾಗಾಟ ಹಾಗೂ ಟಿಪ್ಪರ್ ದಾಖಲೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅಮಾಯಕರ ಬಲಿ ತೆಗೆದುಕೊಳ್ಳುತ್ತಿದ್ದ ಟಿಪ್ಪರ್ ಹಾರಾಟಕ್ಕೆ ಸ್ಪೀಡ್ ಗವರ್ನರ್ ಅಳವಡಿಸುವಂತೆಯೂ ಒತ್ತಾಯಗಳು ಕೇಳಿ ಬಂದಿದ್ದವು. ದುರಂತ ನಡೆದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಗಂಭೀರ ಸ್ಥಿತಿಯನ್ನು ನೋಡಿಕೊಂಡು ಬಂದಿದ್ದ ಎಸ್ಪಿ ಹರಿರಾಮ್ ಶಂಕರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಟಿಪ್ಪರ್ ಚಾಲಕ ಬಿದ್ಕಲ್ ಕಟ್ಟೆ ನಿವಾಸಿ ರಾಘವೇಂದ್ರ ಸದ್ಯ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಆತನ ಮೇಲೆ ನಿಗಾ ಇರಿಸಿದೆ. ಮಣ್ಣು ಸಾಗಾಟ ಗುತ್ತಿಗೆದಾರ ಬಳ್ಕೂರಿನ ಶ್ರೀಧರ್ ಅವರನ್ನು ಮಂಗಳವಾರ ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಟಿಪ್ಪರ್ ಮಾಲಕಿ ಸುಮಾ ಅವರ ಮೇಲೂ ಪ್ರಕರಣ ದಾಖಲಾಗಿದೆ. ಮಣ್ಣಿನ ಜಾಗದ ಮಾಲಿಕರು ಸೇರಿದಂತೆ ಇನ್ನೂ ಯಾರ್ಯಾರ ಮೇಲೆ ಕಾನೂನು ಹಗ್ಗಗಳು ಸುತ್ತಿಕೊಳ್ಳುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಮಾಮೂಲಿ ಅಪಘಾತ ಕಾನೂನುಗಳಲ್ಲದೇ ಪ್ರಕರಣದಲ್ಲಿ 110, 303(2) ಬಿಎನ್ ಎಸ್ ಮತ್ತು 4(1ಎ), 21(4) ಎಮ್ಎಮ್ಆರ್ಡಿ ಕಾಯ್ದೆ ಮತ್ತು 183, 146,192,182 ಐಎಮ್ ವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಠಾತ್ತ್ ವರ್ಗಾವಣೆ:
ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಬೈಂದೂರು, ಕುಂದಾಪುರ, ಕೊಲ್ಲೂರು, ಶಂಕರನಾರಾಯಣ ಮುಂತಾದ ಕಡೆಯಲ್ಲಿ ಜನಾನುರಾಗಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎಸ್ಐ ನಾಸಿರ್ ಹುಸೇನ್ ಇತ್ತೀಚೆಗಷ್ಟೇ ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಠಾಣೆಯ ಸ್ವರೂಪವನ್ನೇ ಬದಲಿಸಿದ್ದ ಅವರ ಕಾರ್ಯ ಶೈಲಿಯ ಬಗ್ಗೆ ಸಾರ್ವಜನಿಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇದೀಗ ಅವರ ಹಠಾತ್ತ್ ವರ್ಗಾವಣೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶೆಟ್ರಕಟ್ಟೆ ಅಪಘಾತ ಪ್ರಕರಣ: ಕಂಡ್ಲೂರು ಪಿಎಸ್ಐ ತಲೆದಂಡ




