ಉಡುಪಿ: ಗುಜ್ಜಾಡಿ ನರಸಿಂಹ ನಾಯಕ್ ಅವರ ಬದುಕು ಸಮಾಜಸೇವೆ, ರಾಷ್ಟ್ರಭಕ್ತಿ ಮತ್ತು ಮೌಲ್ಯಾಧಾರಿತ ಜೀವನಕ್ಕೆ ಮಾದರಿಯಾಗಿದ್ದು, ಧನ, ಕರ್ಮ ಹಾಗೂ ತ್ಯಾಗದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.

ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸ್ವರ್ಣ ಉದ್ಯಮದ ಸ್ಥಾಪಕ, ಆರೆಸ್ಸೆಸ್ ಕಾರ್ಯಕರ್ತ ಹಾಗೂ ಸಮಾಜಸೇವಕ ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗುಜ್ಜಾಡಿ ನೆನಪುಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕುಟುಂಬದ ವ್ಯವಹಾರದ ಜೊತೆಗೆ ದೇವಋಣ, ಪಿತೃಋಣ ಹಾಗೂ ಸಮಾಜಋಣ ತೀರಿಸುವ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯಬೇಕಿದ್ದು, ರಾಷ್ಟ್ರಧರ್ಮವೂ ಅದೇ ರೀತಿಯಲ್ಲಿ ಉಳಿಯಬೇಕು ಎಂದು ಅವರು ಹೇಳಿದರು. ಬಡತನ ಮತ್ತು ಜೀವನಾನುಭವದಿಂದ ಬದುಕಿನ ಪಾಠ ಕಲಿತ ಗುಜ್ಜಾಡಿ ನರಸಿಂಹ ನಾಯಕ್ ಅವರು ಹಿಂದಿಯಲ್ಲಿ ಸಹಿ ಹಾಕುತ್ತಿದ್ದುದೇ ಅವರ ರಾಷ್ಟ್ರೀಯತೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜಕ್ಕೆ ಕೃತಜ್ಞತೆಯ ಮನೋಭಾವ ಹೊಂದಿದ್ದ ಹಿರಿಯರು ಆದರ್ಶ ಪುರುಷರಾಗಿ ಬದುಕಿನ ದಾರಿ ತೋರಿಸಿದ್ದಾರೆ. ಅಮೂಲ್ಯವಾದ ಚಿನ್ನದ ಮೌಲ್ಯವು ಜೀವನ ಹಾಗೂ ಸಮಾಜ ರಕ್ಷಣೆಗೆ ಬಳಕೆಯಾಗಬೇಕು. ಪ್ರತಿಯೊಬ್ಬರೂ ಬಂಗಾರದಂತಹ ಮನುಷ್ಯರಾಗಬೇಕು. ಬದುಕಿನಲ್ಲಿ ಉದಾತ್ತತೆಯ ತುಡಿತ ಇಲ್ಲದಿದ್ದರೆ ಜೀವನಕ್ಕೆ ಅರ್ಥವಿಲ್ಲ ಎಂದು ಹೊಸಬಾಳೆ ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಕಾರ್ಯಕರ್ತ ಮೈ. ನ. ನಾಗರಾಜ್ ಮಾತನಾಡಿ, 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಮ್ಮೇಳನದ ಯಶಸ್ಸಿನ ಹಿಂದೆ ಗುಜ್ಜಾಡಿ ನರಸಿಂಹ ನಾಯಕ್ ಅವರ ಸಂಘಟನಾ ಶಕ್ತಿ, ಪ್ರತಿನಿಧಿಗಳಿಗೆ ನೀಡಿದ ಆತಿಥ್ಯ ಹಾಗೂ ಶಾಲೆಗಳಲ್ಲಿ ರಾಮಾಯಣ-ಮಹಾಭಾರತ ಪರೀಕ್ಷೆ ನಡೆಸಿದ ಅವರ ಸೇವೆಯನ್ನು ಸ್ಮರಿಸಿದರು.

ಎಒಜೆ ಮುಖ್ಯ ಸಂಪಾದಕ ಸುಮೇಶ್ ವಧೇರಾ ಮಾತನಾಡಿ, ಗುಜ್ಜಾಡಿ ನರಸಿಂಹ ನಾಯಕ್ ಅವರು ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಂಡ ಪರಿಪೂರ್ಣ ವ್ಯಕ್ತಿಯಾಗಿದ್ದು, ಸ್ವರ್ಣ ಉದ್ಯಮದ ಜೊತೆಗೆ ಸಮಾಜಸೇವೆಯಲ್ಲೂ ಮಾದರಿಯಾಗಿದ್ದರು. ಅವರು ಸ್ಥಾಪಿಸಿದ ಸ್ವರ್ಣ ಸಂಸ್ಥೆ ದೇಶದ 100 ಪ್ರಮುಖ ಆಭರಣ ಮಳಿಗೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಬೆಂಗಳೂರಿನ ಯುಕೆ ಆಂಡ್ ಕಂಪನಿಯ ಸ್ಥಾಪಕ ಕೆ. ಉಲ್ಲಾಸ್ ಕಾಮತ್ ಮಾತನಾಡಿ, ಗುಜ್ಜಾಡಿ ಕುಟುಂಬವು ಒಂದು ವಿಶ್ವವಿದ್ಯಾಲಯದಂತಿದ್ದು, ಕುಟುಂಬ, ಉದ್ಯಮ ಹಾಗೂ ಸಮಾಜವನ್ನು ಹೇಗೆ ಮುನ್ನಡೆಸಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಿದೆ ಎಂದರು. ಆರ್ಥಿಕ ಸ್ಥಿರತೆಗೆ ಕುಟುಂಬ ಉದ್ಯಮಗಳು ಮಹತ್ವದ್ದಾಗಿದ್ದು, ಉದ್ಯೋಗ ಕೇಳುವವರಿಗಿಂತ ಉದ್ಯೋಗ ನೀಡುವವರಾಗಬೇಕು ಎಂದು ಕರೆ ನೀಡಿದರು.

ಕುಟುಂಬ ಉದ್ಯಮಗಳಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಹೆಣ್ಮಕ್ಕಳೇ ಅವ್ಯಕ್ತ ಹೀರೋಗಳು. ದೇಶದ ಒಟ್ಟು ಜಿಡಿಪಿಗೆ ಕುಟುಂಬ ಉದ್ಯಮಗಳ ಕೊಡುಗೆ ಶೇ.69ರಷ್ಟಿದ್ದು, ಸುಮಾರು 23 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿವೆ. ಸ್ವರ್ಣ ಸಂಸ್ಥೆಯ ಶತಮಾನೋತ್ಸವದ ವೇಳೆಗೆ 100ನೇ ಮಳಿಗೆಯನ್ನು ಆರಂಭಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

‘ಗುಜ್ಜಾಡಿ ನೆನಪುಗಳು’ ಕೃತಿಯ ಲೇಖಕ ಪಿ. ಸತೀಶ್ ಮಲ್ಯ ಮಾತನಾಡಿ, ಮನೆ ಹಾಗೂ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ಒಗ್ಗಟ್ಟು ಅತ್ಯಗತ್ಯ. ಗುಜ್ಜಾಡಿ ನರಸಿಂಹ ನಾಯಕ್ ಅವರ ವ್ಯಕ್ತಿತ್ವದಲ್ಲಿ ಮಾನವೀಯತೆ ಹಾಗೂ ಮನುಷ್ಯರ ಮೇಲಿನ ಅಪಾರ ಪ್ರೀತಿ ಅಡಕವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವಿಕಾ ಪ್ರಾರ್ಥನೆ ಸಲ್ಲಿಸಿದರು. ಗುಜ್ಜಾಡಿ ಪ್ರಭಾಕರ ನಾಯಕ್ ಕಾರ್ಯಕ್ರಮ ನಿರೂಪಿಸಿದರೆ, ಗುಜ್ಜಾಡಿ ರಾಮದಾಸ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲಕೃಷ್ಣ ನಾಯಕ್ ವಂದಿಸಿದರು.




