Friday, October 16, 2026

ಕರಾವಳಿ ಇಲ್ಲದೆ ಕರ್ನಾಟಕದ ಅಸ್ಮಿತೆ ಇಲ್ಲ: ಸಿಎಂ ಡಿ ಕೆ ಶಿವಕುಮಾರ್  

ಉಚ್ಚಿಲ : “ಕರಾವಳಿ ಇಲ್ಲದೆ ಕರ್ನಾಟಕ ಪೂರ್ಣವಾಗುವುದಿಲ್ಲ. ಈ ಭಾಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಪ್ರವಾಸೋದ್ಯಮದೊಂದಿಗೆ ಬೆಸೆಯುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಉಡುಪಿಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ‘ಉಡುಪಿ ಉಚ್ಚಿಲ ದಸರಾ- 2026’ರ ಮಹಿಳಾ ದಸರಾವನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.

“ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶ. ಉದ್ಯೋಗಕ್ಕಾಗಿ ಮಕ್ಕಳು ತಮ್ಮ ಊರು, ತಂದೆ-ತಾಯಿಯನ್ನು ಬಿಟ್ಟು ಮುಂಬೈ, ದುಬೈ ಹಾಗೂ ಬೆಂಗಳೂರಿಗೆ ತೆರಳುವ ಪರಿಸ್ಥಿತಿ ಬದಲಾಗಬೇಕು. ಕರಾವಳಿ ಮತ್ತು ಮಲೆನಾಡಿನ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಂಡೇ ಆರ್ಥಿಕ ಪ್ರಗತಿ ಸಾಧಿಸುವ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ” ಎಂದು ಹೇಳಿದರು.

“ಕರಾವಳಿ ಕರ್ನಾಟಕದ ಸಮುದ್ರ ತೀರವನ್ನು ಬಳಸಿಕೊಂಡು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದೆ. ಗೋವಾ ಮತ್ತು ಕೇರಳ ರಾಜ್ಯಗಳ ಮಾದರಿಗಿಂತಲೂ ಉತ್ತಮವಾಗಿ ಕರಾವಳಿ ಪ್ರವಾಸೋದ್ಯಮವನ್ನು ಬೆಳೆಸುವ ಗುರಿ ಸರ್ಕಾರಕ್ಕಿದೆ” ಎಂದರು.

ಮೀನುಗಾರರ ಸಮಸ್ಯೆಗಳಿಗೆ ಸ್ಪಂದನೆ

“ಕರಾವಳಿ ಭಾಗದ ಮೀನುಗಾರರ ಸಮಸ್ಯೆಗಳು, ಸಾಲದ ಬಡ್ಡಿ ಮನ್ನಾ, ಸೀಮೆಎಣ್ಣೆ ಸಬ್ಸಿಡಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಜನಪ್ರತಿನಿಧಿಗಳು ಮತ್ತು ಮೀನುಗಾರರ ಸಂಘಟನೆಗಳು ಮನವಿ ಸಲ್ಲಿಸಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೇದಿಕೆಯಲ್ಲಿ ಹೊಸ ಘೋಷಣೆಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ ಸಲ್ಲಿಕೆಯಾಗಿರುವ ಮನವಿಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

“ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ” ಎಂದರು.

“ಮೈಸೂರು, ಕರಾವಳಿ ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಪರಂಪರೆಯ ಹೆಮ್ಮೆ, ಆರ್ಥಿಕ ಚಟುವಟಿಕೆಯ ಚಕ್ರ ಮತ್ತು ಒಗ್ಗಟ್ಟಿನ ಸಂಕೇತ. ಭಕ್ತಿ, ಸೌಹಾರ್ದತೆ, ಸಂಸ್ಕೃತಿ ಹಾಗೂ ಮಾನವೀಯತೆಯ ಮೂಲಕ ಸಮಾಜವನ್ನು ಕಟ್ಟುವ ಅಗತ್ಯವಿದೆ. ಜಾತಿ-ಧರ್ಮದ ಭೇದಗಳನ್ನು ಮೀರಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು” ಎಂದು ಕರೆ ನೀಡಿದರು.

ಮಹಿಳಾ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳ ಬಲ

“ಮಹಾಲಕ್ಷ್ಮಿ ಎಂದರೆ ಸಂಪತ್ತು, ಮಹಾಸರಸ್ವತಿ ಎಂದರೆ ಜ್ಞಾನ, ಮಹಾಕಾಳಿ ಎಂದರೆ ಶಕ್ತಿ. ಮಹಿಳೆಯರು ಕುಟುಂಬದ ಮತ್ತು ಸಮಾಜದ ಪ್ರಗತಿಯ ಪ್ರಮುಖ ಶಕ್ತಿಯಾಗಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳು ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸಲು ನೆರವಾಗುತ್ತಿದೆ” ಎಂದರು.

“1 ಕೋಟಿ 24 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ  ಪ್ರಯೋಜನ ತಲುಪುತ್ತಿದೆ. ಮಹಿಳೆಯರು ಬೆಳೆದರೆ ಕುಟುಂಬ ಬೆಳೆಯುತ್ತದೆ. ಕುಟುಂಬ ಬೆಳೆದರೆ ಸಮಾಜ ಬೆಳೆಯುತ್ತದೆ, ಸಮಾಜ ಬೆಳೆದರೆ ಕರ್ನಾಟಕ ಪ್ರಗತಿ ಸಾಧಿಸುತ್ತದೆ” ಎಂದರು.

ಕರಾವಳಿಯ ಕಲೆ, ಸಂಸ್ಕೃತಿ ಸಂರಕ್ಷಣೆಗೆ ಆದ್ಯತೆ

“ಕರಾವಳಿ ಭಾಗದ ಸಾಂಪ್ರದಾಯಿಕ ಮರದ ಕೆತ್ತನೆ ಕಲೆ ಸೇರಿದಂತೆ ಸ್ಥಳೀಯ ಕಲೆ ಮತ್ತು ಕರಕುಶಲ ಪರಂಪರೆಯನ್ನು ಉಳಿಸಿ ಬೆಳೆಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೆತ್ತನೆ ಕಲೆಯ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ವಿಶೇಷ ಪಾರ್ಕ್‌ ಸ್ಥಾಪಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

“ಕರಾವಳಿಯ ಹುಲಿವೇಷ, ಯಕ್ಷಗಾನ, ಕಂಬಳ ಹಾಗೂ ತುಳು ಭಾಷೆ ಈ ಭಾಗದ ಸ್ವಾಭಿಮಾನದ ಸಂಕೇತಗಳಾಗಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವ ಅಗತ್ಯವಿದೆ” ಎಂದರು.

ತುಳು ಭಾಷೆಗೆ ಗೌರವ

“ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ಭಾಗ್ಯ ನನಗೆ ದೊರೆತಿದ್ದು ಸಂತಸದ ಸಂಗತಿ. ಕರಾವಳಿ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದರು.

ಯುವ ಪ್ರತಿಭೆಗಳಿಗೆ ಭಾರತ್ ಜೋಡೋ ಯುವಕ ಸಂಘ

“ಗ್ರಾಮೀಣ ಭಾಗದ ಯುವಜನರ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಸಂಘದಲ್ಲಿ 100ರಿಂದ 250 ಯುವಕ-ಯುವತಿಯರು ಸೇರಿ ಸಂಗೀತ, ಕಲೆ, ನಾಟಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವುದು ಇದರ ಉದ್ದೇಶವಾಗಿದೆ. ಸಂಘಗಳ ಸ್ಥಾಪನೆಗೆ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ಗೆ ₹10 ಲಕ್ಷ ನೀಡಲಾಗುವುದು. ರೂ 10 ರೂಪಾಯಿ ನೀಡಿ ಯುವ ಜನಾಂಗ ಸದಸ್ಯರಾಗಬೇಕು” ಎಂದು ಹೇಳಿದರು.

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ಹಿತಾಸಕ್ತಿ ರಕ್ಷಣೆ

“ಕಸ್ತೂರಿರಂಗನ್ ವರದಿಯಿಂದ ಉಡುಪಿ ಜಿಲ್ಲೆ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಈ ವಿಚಾರದಲ್ಲಿ ಜನರ ಬದುಕು ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಕೇಂದ್ರ ಸರ್ಕಾರಕ್ಕೆ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಮ್ಮ ನಿಲುವು ತಿಳಿಸಲಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಹಿಳಾ ದಸರಾವನ್ನು ಉದ್ಘಾಟಿಸಿ, ದೇವಸ್ಥಾನದ ಸಮಿತಿಯಿಂದ ಅಭಿನಂದನೆ ಸ್ವೀಕರಿಸಿದರು. ಉಚ್ಚಿಲ ಹುಲಿವೇಷ ಆಚರಣೆಯ ಪೋಸ್ಟರ್ ಅನಾವರಣಗೊಳಿಸಿದರು.

ಸಚಿವರಾದ ಯು.ಟಿ. ಖಾದರ್, ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಮಂಕಾಳ ಎಸ್. ವೈದ್ಯ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

More like this
Related

ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್

ಮಂಗಳೂರು: “ಕರಾವಳಿಯ ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ...

ಉಡುಪಿ ಉಚ್ಚಿಲ ದಸರಾ – 2026 : ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ

ಕಾಪು: ಶ್ರೀಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ...

ಬಿಜೆಪಿ ನಾಯಕರುಗಳೇ ಶಿಕ್ಷಣದ ಜೊತೆ ಧರ್ಮ ಬೆರೆಸುವುದನ್ನು ನಿಲ್ಲಿಸಿ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿನ ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಜೆ...

ಜಿಪಂ, ತಾಪಂ ಚುನಾವಣೆ: ಎಸ್ಟಿ ಮೀಸಲಾತಿಯಲ್ಲಿ ಪುರುಷರಿಗೂ ಅವಕಾಶ ಕಲ್ಪಿಸಲು ಉಮೇಶ ಎ. ನಾಯ್ಕ್ ಮನವಿ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪರಿಶಿಷ್ಟ...

Copying is disabled on Udupi Digital News.