Tuesday, October 20, 2026

ಉಚ್ಚಿಲ ದಸರಾ: ಎಂಟನೇ ದಿನ ಭಕ್ತಸಾಗರ, ಆಕರ್ಷಣೆಯ ಕೇಂದ್ರ ವಾದ ಸಾಮೂಹಿಕ ಕುಣಿತ ಭಜನೆ

ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಎಂಟನೇ ದಿನವಾದ ಭಾನುವಾರ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿದವು. ದೇವಸ್ಥಾನದ ಆವರಣದ ಅಲಂಕಾರ ಮತ್ತು ವಸ್ತುಪ್ರದರ್ಶನವನ್ನು ವೀಕ್ಷಿಸಿದ ಭಕ್ತರು ಸಂಭ್ರಮಿಸಿದರು.

ಭಾನುವಾರ ಮಹಾಗೌರಿ ದೇವಿಯ ಆರಾಧನೆ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ. ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಉದಯಪೂಜೆ, ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ ಹಾಗೂ ಮಹಾಪೂಜೆ ನಡೆಯಿತು. ರಾತ್ರಿ ನವದುರ್ಗೆಯರಿಗೆ ಮಹಾಪೂಜೆ ಮತ್ತು ಸರಸ್ವತಿ ಕಲ್ಲೋಕ್ತ ಪೂಜೆ ನೆರವೇರಿಸಲಾಯಿತು.

ದಸರಾ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ ಭಜನಾ ಸಂಕೀರ್ತನೆ, ಸಂಜೆ ಧಾರ್ಮಿಕ ಪ್ರವಚನ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಿದವು.

ಸಾಮೂಹಿಕ ಕುಣಿತ ಭಜನೆ
ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಭಜನಾ ತಂಡಗಳು ಭಾಗವಹಿಸಿ ದೇವಸ್ಥಾನದ ರಥಬೀದಿಯ ಸುತ್ತ ಸಾಮೂಹಿಕ ಕುಣಿತ ಭಜನೆ ನಡೆಸಿದವು. ಭಜನಾ ತಂಡಗಳ ಭಕ್ತಿಭಾವದ ಪ್ರದರ್ಶನ ಗಮನ ಸೆಳೆಯಿತು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಹಾಗೂ ಉಚ್ಚಿಲ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ ಹಾಗೂ ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಅಮೀನ್ ಉಪಸ್ಥಿತರಿದ್ದರು.

ಸೋಮವಾರದ ಕಾರ್ಯಕ್ರಮಗಳು
ಉಚ್ಚಿಲ ದಸರಾ ಮಹೋತ್ಸವದ ಒಂಬತ್ತನೇ ದಿನವಾದ ಸೋಮವಾರ ಸಿದ್ಧಿಧಾತ್ರಿ ದೇವಿಯ ಆರಾಧನೆ ನಡೆಯಲಿದೆ. ದೇವಸ್ಥಾನದಲ್ಲಿ ಉದಯಪೂಜೆ, ಬೆಳಿಗ್ಗೆ 9ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ನವದುರ್ಗೆಯರಿಗೆ ಮಹಾಮಂಗಳಾರತಿ, 12.30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ನವದುರ್ಗೆಯರಿಗೆ ಮಹಾಪೂಜೆ ಹಾಗೂ 8.30ಕ್ಕೆ ವಾಗೀಶ್ವರಿ ಕಲ್ಲೋಕ್ತ ಪೂಜೆ ನೆರವೇರಲಿದೆ.

ದಸರಾ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.30ರಿಂದ ಭಕ್ತಿಗಾನ ಸುಧೆ, 2.30ರಿಂದ ಭಜನಾ ಸಂಕೀರ್ತನೆ, ಸಂಜೆ 4ಕ್ಕೆ ಕೊಳಲು ವಾದನ, 5ಕ್ಕೆ ಧಾರ್ಮಿಕ ಪ್ರವಚನ, 5.45ಕ್ಕೆ ಸಾಮೂಹಿಕ ಕುಂಕುಮಾರ್ಚನೆ, 6.30ರಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 8ರಿಂದ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ.

More like this
Related

ಉಡುಪಿ | ಅ.21 (ನಾಳೆ) ಆಭರಣ ಜುವೆಲ್ಲರ್ಸ್ ನ ನವೀಕೃತ ಶೋರೂಂ ಲೋಕಾರ್ಪಣೆ

ಉಡುಪಿ: 1935ರಲ್ಲಿ ಉಡುಪಿ ನಗರದ ಸಿಬಿ ರಸ್ತೆಯಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಚಿನ್ನಾಭರಣ...

ಅ. 21ರಂದು ಉಚ್ಚಿಲ ದಸರಾ ಶೋಭಾಯಾತ್ರೆಗೆ ಸಕಲ ಸಿದ್ಧತೆ ಪೂರ್ಣ: 2 ಲಕ್ಷಕ್ಕೂ ಅಧಿಕ ಭಕ್ತರ ನಿರೀಕ್ಷೆ

ಉಡುಪಿ: ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ-2026 ಮಹೋತ್ಸವದ ಅಂತಿಮ ಹಂತ...

ಕಬ್ಬು ಬೆಳೆಗಾರರ ಹೋರಾಟಕ್ಕೆ ತೆರೆ ಎಳೆಯಲು ಪ್ರಧಾನಿ ಮಧ್ಯಪ್ರವೇಶಿಸಿ: ಮೋದಿ ಅವರಿಗೆ ಡಿಕೆ ಶಿವಕುಮಾರ್ ಪತ್ರ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದ್ದು, ಸಕ್ಕರೆ ಕಾರ್ಖಾನೆಗಳಲ್ಲಿ...

Copying is disabled on Udupi Digital News.