ಉಡುಪಿ: ಯುವತಿಯೊಬ್ಬಳ ಮನೆಗೆ ತೆರಳಿ ಗಲಾಟೆ ನಡೆಸಿದ ವೇಳೆ ಹಲ್ಲೆಗೊಳಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹಿಂದೂ ಜಾಗರಣ ವೇದಿಕೆಯ ನಾಯರ್ಕೂಡಿ ಘಟಕದ ಕಾರ್ಯಕರ್ತ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
ಪ್ರದೀಪ್ ಕಳೆದ ಏಳು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಪ್ರದೀಪ್, 2025ರಲ್ಲಿ ಯುವತಿಯನ್ನು ಅಡ್ಡಗಟ್ಟಿ ಗಲಾಟೆ ನಡೆಸಿದ್ದ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಅಕ್ಟೋಬರ್ 27ರಂದು ಮತ್ತೆ ಯುವತಿಯ ಮನೆಗೆ ತೆರಳಿದ್ದ ಪ್ರದೀಪ್ ಗಲಾಟೆ ನಡೆಸಿ, ಮೆಣಸಿನಪುಡಿ ಎರಚಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಯುವತಿಯ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಯುವತಿಯ ಮನೆಯವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರದೀಪ್ ಕೂಡ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಎನ್ನಲಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರದೀಪ್ ಪೂಜಾರಿಯನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಡುಪಿ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ಯುವಕನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




