Saturday, May 9, 2026

ಕಾಂಗ್ರೆಸ್‌ನೊಳಗಿನ ಒಳಬೇಗುದಿ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ‘ಕೈ’ ಗೆ ದಿಕ್ಕು ತೋರಿಸುವವರು ಯಾರು?

ಹಿಂದೊಮ್ಮೆ ಜಿಲ್ಲಾ ಪಂಚಾಯತ್ ನಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಆಡಳಿತ ನಡೆಸಿದ್ದ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಾಳಯ ಇಂದು ನಾವಿಕನಿಲ್ಲದ ಹಡಗಿನಂತೆ ದಿಕ್ಕುತೋಚದ ಸ್ಥಿತಿಗೆ ತಲುಪಿರುವುದು ನಿಷ್ಠಾವಂತ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ! ಅವಿಭಜಿತ ಜಿಲ್ಲೆಯ ರಾಜಕೀಯದಲ್ಲಿ ದಶಕಗಳ ಕಾಲ ಪ್ರಭಾವ ಬೀರಿದ್ದ ಕಾಂಗ್ರೆಸ್ ಇಂದು ಸಂಘಟನೆ, ನಾಯಕತ್ವ ಮತ್ತು ಕಾರ್ಯಕರ್ತರ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿರುವುದು ಏಕೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಕಾಂಗ್ರೆಸ್ ವರಿಷ್ಠ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ನಿಧನದ ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಉಂಟಾದ ನಾಯಕತ್ವದ ಶೂನ್ಯತೆ ಇನ್ನೂ ತುಂಬಿಲ್ಲ ಎನ್ನುವುದು ವಾಸ್ತವ. ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಆಸ್ಕರ್ ಅವರು ಜಿಲ್ಲೆಯ ಕಾಂಗ್ರೆಸ್‌ಗೆ ಒಂದು ಬಲಿಷ್ಠ ಕೇಂದ್ರಬಿಂದುವಾಗಿದ್ದರು. ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ರಾಜಕೀಯ ತೀರ್ಮಾನಗಳು ಅವರ ಅಂತಿಮ ಮುದ್ರೆ ಬಿದ್ದ ಬಳಿಕವಷ್ಟೇ ಹೊರ ಬೀಳುತ್ತಿದ್ದವು. ಅವರ ನಂತರ ಸಂಘಟನೆಯನ್ನು ಒಗ್ಗೂಡಿಸುವ, ಕಾರ್ಯಕರ್ತರಿಗೆ ದಿಕ್ಕು ತೋರಿಸುವ ಹಾಗೂ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಪ್ರಭಾವಿ ನಾಯಕತ್ವ ಬೆಳೆಯದಿರುವುದು ಪಕ್ಷದ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎನ್ನುವ ವಿಶ್ಲೇಷಣೆ ಇದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಪ್ರತಿನಿಧಿಗಳಿಲ್ಲ. ಜಿಲ್ಲೆಗೆ ಉಸ್ತುವಾರಿ ಸಚಿವರು, ಪಕ್ಷದಿಂದ ವಿಧಾನಪರಿಷತ್ ಸದಸ್ಯರು ಇದ್ದರೂ, ಕಾರ್ಯಕರ್ತರ ಪಾಲಿಗೆ ಅವರು ಹುಳಿ ದ್ರಾಕ್ಷಿ ಇದ್ದಂತೆ ಆಗಿದೆ. ಅಪರೂಪಕ್ಕೊಮ್ಮೆ ವೈಯಕ್ತಿಕ ಹಿತಾಸಕ್ತಿಗಾಗಿ (ಈ ಕುರಿತು ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ) ಭೇಟಿ ಮತ್ತು ಆಪ್ತ ಬಳಗದ ಹಿತಾಸಕ್ತಿಯ ರಾಜಕಾರಣ ಮಾತ್ರ ನಡೆಯುತ್ತಿದೆಯೇ ಹೊರತು, ಸೋತಿರುವ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕು, ದಶಕಗಳ ಕಾಲ ಅಧಿಕಾರ ಕೇಂದ್ರದಿಂದ ವಂಚಿತರಾಗಿರುವ ಕಾರ್ಯಕರ್ತರಿಗೆ ಸ್ಪಂದಿಸಿ, ಉತ್ಸಾಹ ತುಂಬುವ  ಗಂಭೀರ ಪ್ರಯತ್ನಗಳು ಕಾಣಿಸುತ್ತಿಲ್ಲ. ಮರಳು ಲಾಬಿ, ಕಾಂಟ್ರಾಕ್ಟ್ , ವರ್ಗಾವಣೆ ದಂಧೆ, ಲೆಟರ್ ಹೆಡ್ ರಾಜಕಾರಣ ಮತ್ತು ಗುಂಪುಗಾರಿಕೆಗಳೇ ಪಕ್ಷದ ಘೋಷಿತ ನಾಯಕರುಗಳ ಪ್ರಮುಖ ಅಜೆಂಡವಾಗಿಬಿಟ್ಟಿದೆ ಎನ್ನುವ ಟೀಕೆಗಳು ಬಹಿರಂಗವಾಗಿ ಕೇಳಿಬರುತ್ತಿವೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಅವರು ವೈಯಕ್ತಿಕವಾಗಿ ಸಜ್ಜನ ಹಾಗೂ ಪಕ್ಷ ನಿಷ್ಠರಾಗಿದ್ದರೂ, ಸಂಘಟನೆ ಮಾತ್ರ ನೆಲಮಟ್ಟದಲ್ಲಿ ದುರ್ಬಲವಾಗಿದೆ ಎಂಬುದು ಕಾರ್ಯಕರ್ತರ ಅಸಮಾಧಾನ. ವಿದ್ಯಾರ್ಥಿ, ಯುವ, ಮಹಿಳಾ ಕಾಂಗ್ರೆಸ್, ಸೇವಾದಳ, ಇಂಟೆಕ್, ಎಸ್‌ಸಿ/ಎಸ್‌ಟಿ ಮೊದಲಾದ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳು ಕಾರ್ಯಕರ್ತರ ನಡುವೆ ಸಕ್ರಿಯವಾಗಿಲ್ಲ. ಹಿರಿಯ ನಾಯಕರ ನೆರಳಿನಾಶ್ರಯದಲ್ಲಿ ದಶಕಗಳ ಕಾಲ ಅಧಿಕಾರದ ಕೇಂದ್ರ ಸ್ಥಾನದಲ್ಲಿ ಕುಳಿತಿರುವ ಮಹಿಳಾಮಣಿಗಳು ಜಪ್ಪಯ್ಯ ಎಂದರೂ ಅಧಿಕಾರ ಗದ್ದುಗೆಯಿಂದ ಇಳಿಯುತ್ತಿಲ್ಲ. ಜಿಲ್ಲೆಯ ಯುವ ಕಾಂಗ್ರೆಸ್ ಸಂಘಟನೆಯನ್ನು ಇನ್ನಿಲ್ಲದಂತೆ ದುರ್ಬಲಗೊಳಿಸಿದ ಯುವ ನಾಯಕ ಪ್ರಸ್ತುತ ವಿಧಾನಪರಿಷತ್ ಸದಸ್ಯರ ಆಪ್ತ ವಲಯದ ಮಹಾ ನಾಯಕ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಜೀವ ತುಂಬುವ ಚೈತನ್ಯ ಕಾಣಿಸದಿರುವುದು ವಿಚಿತ್ರವಾದರೂ ಸತ್ಯ ಸಂಗತಿ.

ಕುಂದಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸವೇ ಕಾಂಗ್ರೆಸ್ ಪಕ್ಷದ ಕುಸಿತಕ್ಕೆ ಜೀವಂತ ಉದಾಹರಣೆ. ಜನತಾ ಪಕ್ಷದಿಂದ ಕಾಂಗ್ರೆಸ್‌ಗೆ ಬಂದ ಕಾಪು ಸಂಜೀವ ಶೆಟ್ಟರ ಕಾಲದಿಂದ, ಹುಯ್ಯಾರು ಹುಲಿ ಎಂದು ಖ್ಯಾತರಾಗಿದ್ದ ಶುದ್ಧ ಹಸ್ತದ ಕೆ.ಪ್ರತಾಪಚಂದ್ರ ಶೆಟ್ಟಿಯವರ ದರ್ಬಾರಿನವರೆಗೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 90ರ ದಶಕದಲ್ಲಿ ಕಾಂಗ್ರೆಸ್‌ನೊಳಗೆ ಹುಟ್ಟಿದ ಸಣ್ಣ ಕಿಚ್ಚು ಪಕ್ಷದ ಅಡಿಗಲ್ಲನ್ನೇ ಅಲುಗಾಡಿಸಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ರಾಜಕೀಯ ಭೀಷ್ಮ ಎ.ಜಿ. ಕೊಡ್ಗಿ ಅವರ ಬಂಡಾಯ, ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ರಾಜಕೀಯ ಪ್ರವೇಶ ಮತ್ತು ನಿರಂತರ ಗುಂಪುಗಾರಿಕೆಗಳು ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮೇಲೇಳಲು ಅವಕಾಶವೇ ನೀಡಲಿಲ್ಲ. 1999ರಿಂದ ಇಲ್ಲಿವರೆಗೂ ಪ್ರತೀ ಚುನಾವಣೆಯಲ್ಲೂ ಕಾಂಗ್ರೆಸ್ ಹೊಸ ಮುಖಗಳನ್ನೇ ಕಣಕ್ಕಿಳಿಸಿದೆ. ಅಭ್ಯರ್ಥಿಗಳನ್ನು ಪದೆ ಪದೆ ಬದಲಾಯಿಸುವ ಹಿಡನ್ ಅಜೆಂಡಾ ಏನು ಎನ್ನುವುದರ ಮರ್ಮ ತಿಳಿಯದೇ ಇದ್ದರೂ, ಚುನಾವಣೆಯಿಂದ ಚುನಾವಣೆಗೆ ಪಕ್ಷದ ಸೋಲಿನ ಅಂತರ ಮಾತ್ರ ಕಡಿಮೆಯಾಗಿಲ್ಲ. ಪ್ರತೀ ಸೋಲಿನ ನಂತರ ಆತ್ಮಾವಲೋಕನ ಮಾಡುವ ಬದಲು ಮತ್ತೊಂದು ಹೊಸ ಅಭ್ಯರ್ಥಿಯನ್ನು ತಂದು ನಿಲ್ಲಿಸುವ ಸಂಸ್ಕೃತಿ ಪಕ್ಷದ ಬಲಿಷ್ಠ ನೆಲೆಯನ್ನೇ ದುರ್ಬಲಗೊಳಿಸಿದೆ.

ಇದೀಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲೂ ಇದೇ ಒಳಬೇಗುದಿ ಬಹಿರಂಗವಾಗುತ್ತಿದೆ. ಕೆಲ ವರ್ಷಗಳಿಂದ ಬದಲಾಗದೆ ಇದ್ದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷರ ಬದಲಾವಣೆ ಮಾಡಿ, ಪಕ್ಷ ಸಂಘಟನೆಯ ಕಾಯಕಲ್ಪಕ್ಕೆ ಮುಂದಾಗಿದ್ದ ಕೆಪಿಸಿಸಿ, ಕುಂದಾಪುರಕ್ಕೆ ಕೆ.ವಿಕಾಸ್ ಹೆಗ್ಡೆ ಮತ್ತು ಕೋಟ ಬ್ಲಾಕ್ ಗೆ ಮಣೂರು ತಿಮ್ಮ ಪೂಜಾರಿಯವರನ್ನು ನೂತನ ಅಧ್ಯಕ್ಷರಾಗಿ ಘೋಷಿಸಿದ ಬಳಿಕ ಪಕ್ಷದೊಳಗಿನ ವಿರೋಧದ ಧ್ವನಿಗಳು ಜೋರಾಗಿವೆ. ನೂತನ ಅಧ್ಯಕ್ಷರ ನೇಮಕಕ್ಕೆ ಶಿಫಾರಸು ಮಾಡಿದವರೇ ಪುನರ್ ಪರಿಶೀಲನೆ ಮಾಡುವಂತೆ ಕೇಳಿರುವುದು ಸಂಘಟನೆಯ ಗೊಂದಲಕ್ಕೆ ಸಾಕ್ಷಿಯಾಗಿದೆ. ಎರಡು ಬ್ಲಾಕ್ ಆಯ್ಕೆಯನ್ನು ತಡೆ ಹಿಡಿದು, ಕಾರ್ಯಕರ್ತರ ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಪಕ್ಷ ಮುಂದಾಗಿದೆ.

ಕೆಪಿಸಿಸಿ ಹಿರಿಯ ಮುಖಂಡರಾದ ಆರ್.ಸುದರ್ಶನ ಹಾಗೂ ನಾರಾಯಣಸ್ವಾಮಿ ಅವರ ಉಪಸ್ಥಿತಿಯಲ್ಲಿ ಕೋಟೇಶ್ವರದಲ್ಲಿ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕಾರ್ಯಕರ್ತರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿರುವುದು ಗಮನಾರ್ಹ. ಇದರ ನಡುವೆ ಒಂದು ಬಣದ ಕೆಲ ಮುಖಂಡರು ಬೆಂಗಳೂರಿಗೆ ತೆರಳಿ ಇನ್ನೊಂದು ಬಣದವರ ಮೇಲೆ ಸುಳ್ಳು ಆರೋಪ ಪತ್ರಗಳನ್ನು ಸಲ್ಲಿಸುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿರುವುದು ಪಕ್ಷದ ಆಂತರಿಕ ಆರೋಗ್ಯ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ. ಪಕ್ಷದ ಹಿತಕ್ಕಿಂತ ವೈಯಕ್ತಿಕ ಪ್ರಭಾವ ಉಳಿಸಿಕೊಳ್ಳುವ ರಾಜಕಾರಣವೇ ಮೇಲುಗೈ ಸಾಧಿಸುತ್ತಿರುವುದು ನೋವಿನ ಸಂಗತಿ ಎಂದು ನಿಷ್ಠಾವಂತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿ ಕಾಂಗ್ರೆಸ್ ದಿನಗಳಿಂದಲೇ ಪಕ್ಷಕ್ಕಾಗಿ ದುಡಿದಿರುವ ಕೆ.ವಿಕಾಸ್ ಹೆಗ್ಡೆ ಅವರಂತಹ ಪಕ್ಷ ನಿಷ್ಠೆಯ ಕಾರ್ಯಕರ್ತರನ್ನೇ ಅನುಮಾನದಿಂದ ನೋಡುವ ಪ್ರವೃತ್ತಿ ಬಹಿರಂಗವಾಗುತ್ತಿದೆ. ವಿರೋಧ ಪಕ್ಷದ ವಿರುದ್ಧ ತೀಕ್ಷ್ಣವಾಗಿ ಮಾತನಾಡಿದರೆ ಸಮಸ್ಯೆ, ರೈತರ ಪರ ನಿಂತರೆ ಮತ್ತೊಂದು ಆರೋಪ!  ಇಂತಹ ವಾತಾವರಣದಲ್ಲಿ ಹೊಸ ನಾಯಕತ್ವ ಬೆಳೆಯುವುದಾದರೂ ಹೇಗೆ ?

ಕಾಂಗ್ರೆಸ್‌ಗೆ ಇಂದು ಬೇಕಾಗಿರುವುದು ಗುಂಪುಗಾರಿಕೆ, ಅಡ್ಜಸ್ಟ್‌ಮೆಂಟ್ ರಾಜಕಾರಣ ಅಲ್ಲ. ಕಾಂಟ್ರಾಕ್ಟ್ ರಾಜಕಾರಣವೂ ಅಲ್ಲ. ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗಿಂತ ಪಕ್ಷದ ಭವಿಷ್ಯ ಹಾಗೂ ಒಗ್ಗಟ್ಟು ಮುಖ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಇನ್ನಷ್ಟು ಕುಸಿಯುವ ಅಪಾಯವಿದೆ. ಸಜ್ಜನ ಪಕ್ಷದ ಮುಖಂಡರು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪಕ್ಷವನ್ನು ಪುನಶ್ಚೇತನಗೊಳಿಸುವ ಅವಕಾಶ ಇನ್ನೂ ಸಂಪೂರ್ಣವಾಗಿ ಕೈತಪ್ಪಿಲ್ಲ. ಆದರೆ ಅದಕ್ಕಾಗಿ ಮೊದಲು ಕಾಂಗ್ರೆಸ್ ತನ್ನೊಳಗಿನ ಅಸಹಿಷ್ಣುತೆ, ಅಹಂಕಾರ ಮತ್ತು ಒಳರಾಜಕಾರಣವನ್ನು ಬದಿಗಿಟ್ಟು ಕಾರ್ಯಕರ್ತರ ವಿಶ್ವಾಸವನ್ನು ಮರಳಿ ಗೆಲ್ಲಬೇಕು.

ಇಲ್ಲವಾದರೆ ಒಮ್ಮೆ ಕರಾವಳಿಯಲ್ಲಿ ಗರ್ಜಿಸಿದ್ದ ಕೈ ಪಾಳಯ ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯುವ ಪರಿಸ್ಥಿತಿ ದೂರವಿಲ್ಲ.

ಶ್ರೀಕಾಂತ ಹೆಮ್ಮಾಡಿ
ಸಂಪಾದಕ

More like this
Related

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಶನಿವಾರ...

ಬಹುಮತ ಸಾಬೀತುಪಡಿಸಲು ವಿಫಲ: ವಿಜಯ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರಿಂದ ಇನ್ನೂ ಆಹ್ವಾನವಿಲ್ಲ

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಸಿ. ಜೋಸೆಫ್ ವಿಜಯ್...

ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹಬೀಬ್ ಆಲಿ ಆಗ್ರಹ

ಉಡುಪಿ: ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯ ಸಚೇತಕರಾದ ಸಲೀಂ...

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ,...

Copying is disabled on Udupi Digital News.