ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯದ (ಬಹುತೇಕ ವಿರೋಧ ಪಕ್ಷಗಳ ಸರ್ಕಾರ ಇರುವ) ರಾಜ್ಯಪಾಲರು ತೋರುತ್ತಿರುವ ವರ್ತನೆಗಳು, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನುವ ಹೆಗ್ಗಳಿಕೆ ಹೊಂದಿದ್ದ ಭಾರತದ ರಾಜಕಾರಣ ದಿಕ್ಕು ಎತ್ತ ಕಡೆ ಸಾಗುತ್ತಿದೆ ಎಂದು ದೇಶದ ಸಾಮಾನ್ಯ ನಾಗರಿಕರು ಪ್ರಶ್ನಿಸುವ ಕಾಲಘಟ್ಟಕ್ಕೆ ಬಂದು ನಿಂತಿದೆ.
ಇದು ನಿನ್ನೆ ಮೊನ್ನೆಯದಲ್ಲ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಕಾಲದಿಂದಲೂ ರಾಜ್ಯಪಾಲರು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರುತ್ತಿರುವುದು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಾರಿಗೆ ಬಂದಿರುವ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆಯ ಪವಿತ್ರ ಗ್ರಂಥ ಎಂದು ಭಾರತೀಯರು ಹೆಮ್ಮೆ ಪಡುವ ‘ ಸಂವಿಧಾನ ‘ ಕ್ಕೆ ಖಂಡಿತಾ ಅಲ್ಲ. ನಿವೃತ್ತಿಯ ನಂತರವೂ ರಾಜಭೋಗದ ಸುಖವನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟು ರಾಜ್ಯಪಾಲರನ್ನಾಗಿಸಿದ ರಾಜಕೀಯ ಪಕ್ಷಗಳು ಮುಖಂಡರಿಗೆ ಎನ್ನುವುದು ಎಂದೂ ಗುಟ್ಟಾಗಿ ಉಳಿದಿಲ್ಲ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲರಾಗಿ ಬಂದಿದ್ದ ಹಂಸರಾಜ್ ಭಾರದ್ವಾಜ್ ಅವರೊಂದಿಗಿನ ರಾಜಕೀಯ ಸಂಘರ್ಷ ವಿರೋಧ ಪಕ್ಷಗಳಿಗೆ ಒಳ್ಳೆಯ ಆಹಾರ ಒದಗಿಸಿತ್ತು. ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಪ್ರಕರಣ ದೇಶದ ನ್ಯಾಯಾಂಗ ಚರಿತ್ರೆಯಲ್ಲಿಯೇ ದಾಖಲಾಗಿ ಉಳಿದಿದೆ. ದೇಶದ ಆಡಳಿತ ಬದಲಾವಣೆಯಾದಾಗ ಈ ಅತಿರೇಕದ ಅಧಿಕಾರ ದರ್ಪಗಳು ಬದಲಾಗುತ್ತದೆ ಎನ್ನುವ ಜನಸಾಮಾನ್ಯರ ನಂಬಿಕೆಗಳು ಹುಸಿಯಾಗಿ ‘Old wine in new bottle’ ಎನ್ನುವಂತೆ ಕೆಲ ರಾಜ್ಯಗಳಲ್ಲಿನ ರಾಜ್ಯಪಾಲರ ನಡೆಗಳು ಅಸಹ್ಯ ಹುಟ್ಟಿಸುವಂತೆ ಗಮನ ಸೆಳೆಯುತ್ತಿದೆ.
ತಮಿಳುನಾಡಿನ ರಾಜ್ಯಪಾಲರ ವಿರುದ್ಧ ಹಿಂದಿನ ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ದೆಹಲಿಯ ಕೇಜ್ರಿವಾಲ್ ಸರ್ಕಾರ, ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿತ್ತು. ಕರ್ನಾಟಕದ ರಾಜ್ಯಪಾಲರ ನಡೆಯ ಬಗ್ಗೆಯೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಪಾತಿ ಎನ್ನುವ ಆರೋಪ ಮಾಡಿತ್ತು. ಆದರೆ ಇದೆಲ್ಲವನ್ನೂ ಮೀರಿಸುವಂತೆ ತಮಿಳುನಾಡಿನ ಹಾಲಿ ರಾಜ್ಯಪಾಲರ ವರ್ತನೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರುತ್ತಿದೆ.
ಮೊನ್ನೆ ಮೊನ್ನೆ ನಡೆದ ತಮಿಳುನಾಡು ರಾಜ್ಯದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ( 107+01) ಪಡೆದ ಟಿವಿಕೆ ಪಕ್ಷದ ಮುಖಂಡ ಜೋಸೆಫ್ ವಿಜಯ್ ಹಾಗೂ ಅಲ್ಲಿನ ರಾಜ್ಯಪಾಲರ ನಡುವೆ ಸರ್ಕಾರ ರಚನೆಗಾಗಿ ನಡೆದ ಚೌಕಾಸಿ ಸಾಂವಿಧಾನಿಕ ಬದ್ಧತೆಯನ್ನೇ ಪ್ರಶ್ನೆ ಮಾಡಿದೆ.
ರಾಜಕೀಯ ಪಕ್ಷ ಅಥವಾ ಚುನಾವಣೆ ಮೊದಲೇ ಮಾಡಿಕೊಂಡ ಗುಂಪಿಗೆ ಸರ್ಕಾರ ರಚನೆಗೆ ಅಗತ್ಯವಾಗಿರುವ ಸಂಖ್ಯೆಗಳು ಬಾರದೆ ಇದ್ದಾಗ, ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷ/ಗುಂಪಿನ ಮುಖಂಡರನ್ನು ಆಹ್ವಾನಿಸಿ, ಸರ್ಕಾರ ರಚಿಸಲು ಸೂಚಿಸಿ, ವಿಧಾನಸಭೆಯಲ್ಲಿ ಕಾಲಮಿತಿಯೊಳಗೆ ಬಹುಮತ ತೋರಿಸಲು ಸೂಚಿಸುವುದು ಸಾಮಾನ್ಯವಾದ ಸಾಮಾಜಿಕ ನ್ಯಾಯ. ಆದರೆ ತಮಿಳುನಾಡಿನಲ್ಲಿ ನಡೆದದ್ದೆ ಬೇರೆ. ಪದೆ ಪದೆ ಸಂಖ್ಯೆಗಳನ್ನು ಹೊಂದಿಸಿಕೊಳ್ಳುತ್ತಾ, ರಾಜ್ಯಪಾಲರನ್ನು ಭೇಟಿಯಾದ ವಿಜಯ್ ತಮ್ಮ ನೇತೃತ್ವದ ಸರ್ಕಾರದ ರಚನೆಗೆ ಹಕ್ಕು ಮಂಡಿಸಿ, ಅವಕಾಶ ನೀಡಿ ಎನ್ನುವ ವಿನಂತಿ ಮಾಡಿದರೂ, ಬಹುಮತಕ್ಕೆ ಅಗತ್ಯವಾಗಿರುವ ಮ್ಯಾಜಿಕ್ ಸಂಖ್ಯೆ 118 ಶಾಸಕರ ಬೆಂಬಲ ಪತ್ರದೊಂದಿಗೆ ಬನ್ನಿ ಎಂದು ಕಡ್ಡಿ ಮುರಿದಂತೆ ಅವರ ಅಹವಾಲನ್ನು ತಿರಸ್ಕರಿಸಿರುವ ಸರ್ವಾಧಿಕಾರಿ ನಡೆಯ ಬಗ್ಗೆ ಹಾಗೂ ಹಿಂದಿರುವ ರಾಜಕೀಯ ಅಜೆಂಡಾದ ಬಗ್ಗೆ ಸಾರ್ವಜನಿಕ ಚರ್ಚೆಗಳೇ ನಡೆಯುತ್ತಿಲ್ಲ ಎನ್ನುವುದು ಬೇಸರದ ಸಂಗತಿ.
ಸಂವಿಧಾನದ ಆಶಯ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಬಹುಮತ ಸಾಬೀತಾಗಿ ಬೇಕಾದುದು ವಿಧಾನಸಭೆಯಲ್ಲಿಯೇ ಹೊರತು ಲೋಕಭವನ (ಹಿಂದಿನ ರಾಜ್ಯ ಭವನ) ದಲ್ಲಿ ಅಲ್ಲ. ರಾಜ್ಯ ಸರ್ಕಾರಗಳು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಗಣತಂತ್ರದ ಆಶಯಗಳನ್ನು ಮರೆತಾಗ ಅವರಿಗೆ ತಿಳಿಹೇಳಿ ಕರ್ತವ್ಯ ಪಾಲನೆ ಮಾಡಿಸಬೇಕಾದ ರಾಜ್ಯಪಾಲರುಗಳು, ತಾವು ಚುನಾಯಿತ ಸರ್ಕಾರಕ್ಕಿಂತ ಸುಪ್ರೀಂ (ಕೆಲವರು ಮಾತ್ರ) ಎನ್ನುವಂತೆ ವರ್ತನೆ ತೋರುತ್ತಿರುವ ನಡೆಗಳು ಖಂಡನೀಯ.
1996 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸಿನ 140 ಹಾಗೂ ಎಡಪಕ್ಷಗಳು ಸೇರಿದ ತೃತೀಯ ರಂಗ ಒಟ್ಟು ಸೇರಿ 300 ಕ್ಕಿಂತಲೂ ಅಧಿಕ ಸಂಖ್ಯೆಯ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಕಾಂಗ್ರೆಸ್ ನಾಮ ನಿರ್ದೇಶನ ಮಾಡಿದ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರಿಗೆ ನೀಡಿದ್ದರೂ, ಕೇವಲ161 ಬಂದಿದ್ದ ಸ್ಥಾನ ಬಂದಿದ್ದ ಬಿಜೆಪಿ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆ ಮಾಡಲು ಅವರು ಆಹ್ವಾನ ನೀಡಿದ್ದರು.
2018 ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ 38.14% ಮತ ಪಡೆದು 80 ಸೀಟ್ ಪಡೆದುಕೊಂಡಿತ್ತು. 18.3% ಪಡೆದ ಜೆಡಿಎಸ್ 37 ಸ್ಥಾನ ಪಡೆದುಕೊಂಡಿತ್ತು. ಎರಡು ಪಕ್ಷಗಳ ಮುಖಂಡರು ರಾಜ್ಯಭವನಕ್ಕೆ ತೆರಳಿ ನಾವು ಒಟ್ಟಾಗಿ 141 ಮಂದಿ ಇದ್ದೇವೆ, ನಮಗೆ ಸರ್ಕಾರ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರೂ, ಅಂದು ರಾಜ್ಯಪಾಲರಾಗಿದ್ದ ವಜೂಭಾಯಿವಾಲ ಅವರು, 36.35% ಮತದೊಂದಿಗೆ ಕೇವಲ 104 ಸ್ಥಾನ ಪಡೆದುಕೊಂಡಿದ್ದ ಬಿಜೆಪಿ ಪಕ್ಷದ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದರು.
ಹಾಗಾದರೆ ದೇಶಕ್ಕೊಂದು, ರಾಜ್ಯಕ್ಕೊಂದು, ತಮಿಳುನಾಡಿಗೆ ಇವೆರಡನ್ನು ಹೊರತಾದ ಇನ್ನೊಂದು ನ್ಯಾಯ ಸಂವಿಧಾನದ ಪವಿತ್ರ ಗ್ರಂಥದಲ್ಲಿ ಇದೆಯೇ ಎನ್ನುವುದನ್ನು ಸೋಕಾಲ್ಡ್ ಲೋಕಭವನದ ವಕ್ತಾರರು ಸಾರ್ವಜನಿಕಗೊಳಿಸಬೇಕು. ಸಂವಿಧಾನದ ಆಶಯಗಳನ್ನು ಪಾಲಿಸದೆ ಎಚ್ಚರ ತಪ್ಪಿದಾಗ ಎಚ್ಚರ ಹೇಳಬೇಕಾದವರೆ, ತಮ್ಮ ಮೂಗಿನ ನೇರಕ್ಕೆ ಎಚ್ಚರ ತಪ್ಪುವಂತೆ ನಡೆದರೆ, ಅವರನ್ನು ಎಚ್ಚರಿಸುವವರು ಯಾರು ? ಕೆಲವು ನಿರ್ದಿಷ್ಟ ವ್ಯಕ್ತಿಗಳ ನಡೆ ಹಾಗೂ ತೀರ್ಮಾನಗಳು ಆ ವ್ಯಕ್ತಿಯ ಘನತೆಯನ್ನು ಮಾತ್ರ ತಗ್ಗುಸುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಜಗತ್ತೇ ಮೆಚ್ಚುವ ನಮ್ಮ ದೇಶದ ಸಂವಿಧಾನದ ಆಶಯಗಳನ್ನು ಅಣಕಿಸುತ್ತದೆ ಎನ್ನುವ ಪ್ರಜ್ಞೆಗಳು ಆ ವ್ಯಕ್ತಿಗೆ ಇರಬೇಕಲ್ಲವೇ!
ರಾಜಕಾರಣದ ರಕ್ತವನ್ನೇ ತುಂಬಿಕೊಂಡಿರುವ ವ್ಯಕ್ತಿಗಳನ್ನು ತಮ್ಮ ಅಣತಿಪಾಲಕರಾಗಲೂ ಹಾಗೂ ಸಕ್ರೀಯ ರಾಜಕಾರಣದ ನಿವೃತ್ತಿಯ ಬಳಿಕ ಶೆಲ್ಟರ್ ನೀಡಲು ಲೋಕಭವನಕ್ಕೆ ಮಾಜಿ ರಾಜಕಾರಣಿಗಳನ್ನು ಹಾಗೂ ರಾಜಕೀಯ ಕೃಪಾಪೋಷಿತರನ್ನು ನೇಮಕ ಮಾಡುವ ಪ್ರವೃತ್ತಿ ಬದಲಾಗಬೇಕು. ಸೇವಾ ವೃತ್ತಿಯಲ್ಲಿ ಕಪ್ಪು ಚುಕ್ಕಿ ಇಲ್ಲದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನಿವೃತ್ತರಾದವರನ್ನು, ನಿವೃತ್ತ ಹಿರಿಯ ಸೇನಾಧಿಕಾರಿಗಳನ್ನು ಅಥವಾ ರಾಜ್ಯದ ಮುಖ್ಯ ಕಾರ್ಯದರ್ಶಿ/ತತ್ಸಮಾನ ಹುದ್ದೆಯಲ್ಲಿ ಗೌರವದಿಂದ ನಿವೃತ್ತರಾದವರನ್ನು ಮಾತ್ರ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆ ಕಾನೂನು ತಿದ್ದುಪಡಿ ಆಗಬೇಕು. ಆಗ ಮಾತ್ರ ಸಂವಿಧಾನದ ಕಾವಲುಗಾರರು, ಕಾವಲುಗಾರರಾಗಿ ಮಾತ್ರ ಉಳಿಯಲು ಸಾಧ್ಯ.
ರಾಷ್ಟ್ರೀಯತೆ, ಸಂವಿಧಾನದ ಆಶಯಗಳ ಬಗ್ಗೆ ಬದ್ಧತೆ ಮತ್ತು ಭವಿಷ್ಯದ ಭಾರತದ ಸಂವೇದನಾಶೀಲ ರಾಜಕಾರಣದ ಬಗ್ಗೆ ಆಸಕ್ತಿ ಇರುವವರು ಈ ವಿಚಾರವನ್ನು ಜಾಗೃತಿ ಗೊಳಿಸಬೇಕು ಎನ್ನುವುದು ನಮ್ಮ ಆಶಯ.





