ವಾಷಿಂಗ್ಟನ್: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಟ್ಟಿರುವ ಬೆಳವಣಿಗೆಯನ್ನು ಭಾರತೀಯ-ಅಮೆರಿಕನ್ ಸಮುದಾಯದ ನಾಯಕ ಅಜಯ್ ಭುಟೋರಿಯಾ “ನಿರ್ಣಾಯಕ ಕಾನೂನು ಜಯ” ಎಂದು ಬಣ್ಣಿಸಿದ್ದಾರೆ. ಜೊತೆಗೆ, ಅದಾನಿ ಗ್ರೂಪ್‌ನ ಪ್ರಸ್ತಾವಿತ 10 ಬಿಲಿಯನ್ ಡಾಲರ್ ಹೂಡಿಕೆಯನ್ನು ಅಮೆರಿಕದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ “ಗೇಮ್ ಚೇಂಜರ್” ಎಂದು ಹೇಳಿದ್ದಾರೆ.
ಸಿಲಿಕಾನ್ ವ್ಯಾಲಿಯಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭೂಟೋರಿಯಾ, ಅಮೆರಿಕ ನ್ಯಾಯಾಂಗ ಇಲಾಖೆ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ಕೈಬಿಟ್ಟಿದೆ ಎಂದು ತಿಳಿಸಿದ್ದಾರೆ. “ವಿಸ್ತೃತ ಪರಿಶೀಲನೆಯ ನಂತರ ಆರೋಪಗಳನ್ನು ಮುಂದುವರಿಸಲು ಸಾಕಷ್ಟು ಆಧಾರಗಳಿಲ್ಲ ಎಂಬ ನಿರ್ಧಾರಕ್ಕೆ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಬಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, SEC ಸಂಬಂಧಿತ ಸಿವಿಲ್ ಪ್ರಕರಣಗಳು ಮತ್ತು ಇರಾನ್ ನಿರ್ಬಂಧ ಉಲ್ಲಂಘನೆ ಆರೋಪಗಳಿಗೆ ಸಂಬಂಧಿಸಿದಂತೆ 275 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದದ ಮೂಲಕ ವಿಷಯಗಳನ್ನು ಅಂತಿಮಗೊಳಿಸಲಾಗಿದೆ ಎಂದು ಭೂಟೋರಿಯಾ ಹೇಳಿದ್ದಾರೆ. ಯಾವುದೇ ತಪ್ಪನ್ನು ಒಪ್ಪಿಕೊಳ್ಳದೇ ಅಥವಾ ನಿರಾಕರಿಸದೇ ಈ ಒಪ್ಪಂದ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತ ಅಮೆರಿಕದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಎಂಬ ರಾಜಕೀಯ ವಾದಕ್ಕೆ ಈ ಹೂಡಿಕೆ ತಕ್ಕ ಉತ್ತರವಾಗಿದೆ ಎಂದು ಭೂಟೋರಿಯಾ ಅಭಿಪ್ರಾಯಪಟ್ಟಿದ್ದಾರೆ. “ಇದು ಭಾರತ ಉದ್ಯೋಗ ಕಸಿದುಕೊಳ್ಳುವ ವಿಷಯವಲ್ಲ; ಭಾರತೀಯ ಕಂಪನಿ ಅಮೆರಿಕದ ಅಭಿವೃದ್ಧಿಗೆ ನೇರ ಹೂಡಿಕೆ ಮಾಡುತ್ತಿದೆ” ಎಂದಿದ್ದಾರೆ.
ಈ ಹೂಡಿಕೆಯಿಂದ ಸುಮಾರು 15,000 ನೇರ ಉದ್ಯೋಗಗಳು ಮತ್ತು ಸಾವಿರಾರು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದ್ದಾರೆ. AI ಹಾಗೂ ಡೇಟಾ ಸೆಂಟರ್‌ಗಳ ವೇಗದ ವಿಸ್ತರಣೆಯಿಂದ ಅಮೆರಿಕದ ವಿದ್ಯುತ್ ಜಾಲದ ಮೇಲೆ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ, ಅದಾನಿ ಗ್ರೂಪ್‌ನ ಮೂಲಸೌಕರ್ಯ ಮತ್ತು ಹಸಿರು ಶಕ್ತಿ ಪರಿಣತಿ ಅಮೆರಿಕಕ್ಕೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
“ಈ ಬೆಳವಣಿಗೆ ಜಾಗತಿಕ ಹೂಡಿಕೆದಾರರಿಗೆ ಅಮೆರಿಕ ವ್ಯಾಪಾರಕ್ಕೆ ಮುಕ್ತವಾಗಿದೆ ಎಂಬ ಸಂದೇಶ ನೀಡುತ್ತದೆ. ಜೊತೆಗೆ ಭಾರತ-ಅಮೆರಿಕ ತಂತ್ರಾತ್ಮಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುತ್ತದೆ,” ಎಂದು ಭೂಟೋರಿಯಾ ಹೇಳಿದ್ದಾರೆ.




