Wednesday, June 17, 2026

NEET ಹೋರಾಟಕ್ಕೆ ಬನ್ನಿ: ಬೆಂಬಲಿಗರಿಗೆ ಅಭಿಜೀತ್ ದೀಪ್ಕೆ ಕರೆ

ಯುಡಿ ನ್ಯೂಸ್ ಡಾಟ್ ಕಾಮ್

ನವದೆಹಲಿ: ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಯುವಕರ ಆಕ್ರೋಶ ಮತ್ತೊಮ್ಮೆ ತೀವ್ರಗೊಂಡಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ವೇದಿಕೆ ಸಿದ್ಧವಾಗಿದೆ.

ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಿದ್ದಾರೆ ಎಂದು ಘೋಷಿಸಿ, ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಬೆಂಬಲಿಗರು ನೇರವಾಗಿ ಜಂತರ್ ಮಂತರ್‌ಗೆ ಬರುವಂತೆ ಮನವಿ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಅಮೆರಿಕದಿಂದ ದೆಹಲಿಗೆ ಆಗಮಿಸಿದ ದೀಪ್ಕೆ, ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.

“ಜಂತರ್ ಮಂತರ್‌ನಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ಕಾತರನಾಗಿದ್ದೇನೆ. ಪುಸ್ತಕ ಮತ್ತು ರಾಷ್ಟ್ರಧ್ವಜವನ್ನು ಜೊತೆಯಲ್ಲಿ ತರಲು ಮರೆಯಬೇಡಿ. ಪೊಲೀಸರಿಗೆ ಹೂವು ನೀಡಿ ಗೌರವ ಸಲ್ಲಿಸಿ. ನಮ್ಮ ಹೋರಾಟ ಶಾಂತಿ, ಪ್ರೀತಿ ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ನಡೆಯಬೇಕು” ಎಂದು ಕರೆ ನೀಡಿದ್ದಾರೆ.

ಈ ಮೊದಲು ಪ್ರತಿಭಟನೆಗೆ ಅನುಮತಿ ಪಡೆಯುವ ಉದ್ದೇಶದಿಂದ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎದುರು ಸೇರಲು ಬೆಂಬಲಿಗರಿಗೆ ಸೂಚಿಸಲಾಗಿತ್ತು. ಆದರೆ, ಇದೀಗ ಜಂತರ್ ಮಂತರ್‌ನಲ್ಲಿ ನೇರವಾಗಿ ಪ್ರತಿಭಟನೆ ನಡೆಸಲು ಅನುಮತಿ ದೊರೆತಿರುವುದರಿಂದ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಿಜೆಪಿ ತಿಳಿಸಿದೆ.

“ಕಾಕ್‌ರೋಚಸ್ ಆ ರಹೇ ಹೈ, ಧರ್ಮೇಂದ್ರ ಪ್ರಧಾನ್ ಜಾ ರಹೇ ಹೈ (ಜಿರಳೆಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ್ ಹೊರಡುತ್ತಿದ್ದಾರೆ)” ಎಂಬ ಘೋಷಣೆಯೊಂದಿಗೆ ಸಂಘಟನೆ ತನ್ನ ಪ್ರತಿಭಟನಾ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಿದೆ. NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದ್ದ CJP ಚಳವಳಿ, ಕಳೆದ ಕೆಲವು ತಿಂಗಳಲ್ಲಿ ಯುವಜನತೆಯ ಅಸಮಾಧಾನದ ಪ್ರತೀಕವಾಗಿ ಬೆಳೆಯತೊಡಗಿದೆ.

ಮೊದಲಿಗೆ ವ್ಯಂಗ್ಯಾತ್ಮಕ ಆನ್‌ಲೈನ್ ವೇದಿಕೆಯಾಗಿದ್ದ ಈ ಗುಂಪು, ಈಗ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒತ್ತಾಯಿಸುವ ಸಂಘಟಿತ ಜನಾಂದೋಲನದ ರೂಪ ಪಡೆದುಕೊಳ್ಳುತ್ತಿದೆ. ಸಂಘಟನೆ ಕೇವಲ ನೀಟ್ ಅಕ್ರಮಗಳ ಬಗ್ಗೆ ಮಾತ್ರವಲ್ಲದೆ, CBSE, CUET ಹಾಗೂ SSC ಪರೀಕ್ಷೆಗಳಲ್ಲಿಯೂ ನಡೆದಿವೆ ಎನ್ನಲಾದ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿದೆ. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆ ಕುಸಿದಿದ್ದು, ಇದಕ್ಕೆ ರಾಜಕೀಯ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಯಾಗಬೇಕು ಎಂದು CJP ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.

ಈ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕ ಜೀವನದ ಹಲವು ಗಣ್ಯರು ಬೆಂಬಲ ಸೂಚಿಸಿದ್ದಾರೆ. ಹೋರಾಟಗಾರ ಸೋನಂ ವಾಂಗ್ಚುಕ್ ಕೂಡ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಅಭಿಜೀತ್ ದೀಪ್ಕೆ ಅವರನ್ನು ಬಂಧಿಸಿದರೆ ಆರು ವಾರಗಳ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಪ್ರತಿಭಟನೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗತೊಡಗಿದೆ.

ಇತ್ತ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ದೆಹಲಿ ಗಡಿಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಾಹನಗಳ ತಪಾಸಣೆ, ನಿಗಾ ವ್ಯವಸ್ಥೆ ಹಾಗೂ ಗುಪ್ತಚರ ಮೇಲ್ವಿಚಾರಣೆಯನ್ನು ಬಲಪಡಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪ್ರತಿಭಟನೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

More like this
Related

ಸುಕೇಶ್ ಚಂದ್ರಶೇಖರ್ ಪತ್ನಿ ಲೀನಾ ಮಾರಿಯಾ ಪಾಲ್ ಜಾಮೀನು ಅರ್ಜಿಗೆ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ರೂ.200 ಕೋಟಿ ವಂಚನೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ...

ಗ್ರೈಂಡರ್‌ನಿಂದ ವಿದ್ಯುತ್ ಶಾಕ್: ಚಾಮರಾಜನಗರದಲ್ಲಿ ನಾಲ್ಕು ವರ್ಷದ ಬಾಲಕಿ ದುರ್ಮರಣ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕಳ್ಳಿಗೌಡನಹಳ್ಳಿ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿ ಮನೆಯ...

ಕೋಟ : ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಐರೋಡಿಯ ಯುತಿಗೆ 10.83 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕೋಟ : ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ....

Copying is disabled on Udupi Digital News.