ಹೈದರಾಬಾದ್: ಹೈದರಾಬಾದ್ನಲ್ಲಿ ನಡೆಯುತ್ತಿರುವ ಭಾರತ್ ಶೃಂಗಸಭೆಯಲ್ಲಿ (Bharat Summit) ಭಾಷಣ ಮಾಡಲು ಆಹ್ವಾನಿಸಲಾಗಿದ್ದ ವಿದೇಶಿ ಗಣ್ಯರ ಪೈಕಿ 115 ಮಂದಿಗೆ ಭಾರತ ಪ್ರವೇಶ ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಅವರು, ಪ್ರಜಾಪ್ರಭುತ್ವ ರಾಷ್ಟ್ರವೊಂದು ಟೀಕಾತ್ಮಕ ಧ್ವನಿಗಳಿಗೆ ಹೆದರುವ ಸ್ಥಿತಿಗೆ ತಲುಪಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಗುರುವಾರ ಆರಂಭವಾಗಿರುವ ಮೂರು ದಿನಗಳ ಶೃಂಗಸಭೆ ಶನಿವಾರ ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಭಾಗವಹಿಸಿರುವ ತರೂರ್, ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆದಿದ್ದ 315 ಭಾಷಣಕಾರರ ಪೈಕಿ 115 ಮಂದಿಗೆ ಪ್ರವೇಶ ನಿರಾಕರಿಸಲಾಗಿದೆ ಅಥವಾ ವೀಸಾ ರದ್ದುಗೊಳಿಸಲಾಗಿದೆ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
“ಭಾರತ್ ಶೃಂಗಸಭೆಯ ಕಲಾಪಗಳಿಗೆ ನಿರಾಶಾದಾಯಕ ಅಡ್ಡಟಿಪ್ಪಣಿ ಎದುರಾಗಿದೆ. ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆದಿದ್ದ 315 ಭಾಷಣಕಾರರ ಪೈಕಿ 115 ಮಂದಿಗೆ ಭಾರತ ಪ್ರವೇಶ ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂಬ ವಿಷಯ ಹೈದರಾಬಾದ್ಗೆ ಬಂದಾಗ ತಿಳಿಯಿತು. ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೋರುತ್ತಿದೆ. ಯಾವ ಕಾನೂನುಬದ್ಧ ನಿಬಂಧನೆಯಡಿ ಸರ್ಕಾರ ಇಂತಹ ಕಠಿಣ ನಿರ್ಧಾರ ಕೈಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ. ಶೃಂಗಸಭೆ ನಾಳೆಯೇ ಮುಕ್ತಾಯಗೊಳ್ಳುವುದರಿಂದ ಈ ನಿರ್ಧಾರವನ್ನು ಹಿಂಪಡೆಯುವುದು ಕೂಡ ಅಸಾಧ್ಯವಾಗಿದೆ” ಎಂದು ತರೂರ್ ಹೇಳಿದ್ದಾರೆ.
“ಹೆಮ್ಮೆಯ ಪ್ರಜಾಪ್ರಭುತ್ವ ರಾಷ್ಟ್ರವೊಂದು ತನ್ನನ್ನು ಟೀಕಿಸಬಹುದಾದ ಧ್ವನಿಗಳನ್ನು ಹತ್ತಿಕ್ಕುವಷ್ಟು ಅಭದ್ರತೆಯಿಂದ ಕೂಡಿರುವುದು ಎಂತಹ ನಾಚಿಕೆಗೇಡಿನ ಸಂಗತಿ!” ಎಂದೂ ಅವರು ಟೀಕಿಸಿದ್ದಾರೆ.
ಇದಕ್ಕೂ ಮುನ್ನ ಶೃಂಗಸಭೆಯ ಉದ್ಘಾಟನಾ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ್ದ ತರೂರ್, 70 ದೇಶಗಳ ತಜ್ಞರು ಜಾಗತಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು, ಭಾರತದ ಕಾರ್ಯತಂತ್ರದ ಪ್ರತಿಕ್ರಿಯೆ, ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಚುನಾವಣಾ ಸಮಗ್ರತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದ್ದರು.
ವಿವಿಧ ದೇಶಗಳ ಅಂತರರಾಷ್ಟ್ರೀಯ ಚಿಂತಕರ ವೇದಿಕೆಗಳ ಪ್ರತಿನಿಧಿಗಳೊಂದಿಗೆ ನಡೆದ ಮಧ್ಯಾಹ್ನದ ಚರ್ಚೆಯಲ್ಲಿ ಭಾಗವಹಿಸಿದ್ದಾಗಿ ಹಾಗೂ ಉದ್ಘಾಟನಾ ಔತಣಕೂಟದಲ್ಲಿ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯ ಕುರಿತು ಮುಖ್ಯ ಭಾಷಣ ಮಾಡಿದುದಾಗಿ ಅವರು ಹೇಳಿದ್ದರು.
ಶೃಂಗಸಭೆಯಲ್ಲಿ ಜಾಗತಿಕ ನೀತಿ ನಿರೂಪಕರು, ಪ್ರಗತಿಪರ ನಾಯಕರು ಸೇರಿದಂತೆ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇದಲ್ಲದೆ, ‘ಅವರ್ ವರ್ಲ್ಡ್ ಇನ್ಸ್ಟಿಟ್ಯೂಟ್’ (Our World Institute) ಎಂಬ ಚಿಂತಕರ ವೇದಿಕೆಯನ್ನು ಸ್ಥಾಪಿಸುವುದು ಹಾಗೂ ಜಾಗತಿಕ ದಕ್ಷಿಣ ಮತ್ತು ಜಾಗತಿಕ ಉತ್ತರದ ರಾಷ್ಟ್ರಗಳ ನಡುವೆ ಸಂವಾದಕ್ಕೆ ವೇದಿಕೆ ರೂಪಿಸುವ ಉದ್ದೇಶವೂ ಶೃಂಗಸಭೆಯಲ್ಲಿದೆ. ಸುಮಾರು 70 ದೇಶಗಳ ಹಿರಿಯ ನೀತಿ ನಿರೂಪಕರು ಮತ್ತು ರಾಜಕೀಯ ನಾಯಕರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ.




