ನವದೆಹಲಿ: ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನ ಮಾರಣಾಂತಿಕ ದಾಳಿಯನ್ನು ಎದುರಿಸಿ, 170 ಪ್ರಯಾಣಿಕರ ಜೀವ ಉಳಿಸಲು ಹೋರಾಡಿದ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶುಕ್ರವಾರ ವಿಡಿಯೋ ಕರೆ ಮೂಲಕ ಮಾತನಾಡಿದ್ದಾರೆ. ಈ ವೇಳೆ ದಾಳಿಯ ಭೀಕರ ಕ್ಷಣಗಳನ್ನು ನೆನಪಿಸಿಕೊಂಡ ಅವರು, ಹೋರಾಟದ ಸಂದರ್ಭದಲ್ಲಿ ನಿರಂತರವಾಗಿ ‘ಹನುಮಾನ್ ಚಾಲೀಸಾ’ ಪಠಿಸುತ್ತಿದ್ದುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುವಾಗ ಭಾವುಕರಾದ ಕ್ಯಾಪ್ಟನ್ ಮಚ್ಚಾರ್, ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ ಪ್ರಯಾಣಿಕರನ್ನು ಸುರಕ್ಷಿತವಾಗಿಡಬೇಕೆಂಬ ಜವಾಬ್ದಾರಿ ತಮ್ಮನ್ನು ಹೋರಾಟ ಮುಂದುವರಿಸಲು ಪ್ರೇರೇಪಿಸಿತು ಎಂದು ವಿವರಿಸಿದ್ದಾರೆ.
“ನಾನು ಎಚ್ಚರಕ್ಕೆ ಬರದಿದ್ದರೆ ಯಾರೂ ಬದುಕುಳಿಯುವುದಿಲ್ಲ ಎಂಬುದು ನನಗೆ ತಿಳಿದಿತ್ತು. ಕಾಕ್‌ಪಿಟ್ ಬಾಗಿಲು ತೆರೆಯಲು ನನ್ನಿಂದಾದ ಪ್ರಯತ್ನ ಮಾಡಿದೆ. ಕಷ್ಟದ ಸಂದರ್ಭಗಳಲ್ಲಿ ನಾನು ಯಾವಾಗಲೂ ಮಾಡುವಂತೆ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ,” ಎಂದು ಅವರು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ.
170 ಪ್ರಯಾಣಿಕರ ಜೀವ ಉಳಿಸಲೇಬೇಕು ಎಂಬ ಆಲೋಚನೆಯೇ ತಮ್ಮನ್ನು ಮುನ್ನಡೆಸಿತು ಎಂದು ಅವರು ಹೇಳಿದ್ದಾರೆ. ಮಾತುಕತೆಯ ವೇಳೆ ಕಣ್ಣೀರಿಟ್ಟ ಪೈಲಟ್‌ಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದರು. “ನನ್ನ ಮುಂದೆ ಭಾವುಕರಾಗದಿದ್ದರೆ, ಇನ್ನೆಲ್ಲಿ ಭಾವುಕರಾಗುತ್ತೀರಿ?” ಎಂದು ಹೇಳಿ ಅವರ ಬೆನ್ನು ತಟ್ಟಿದರು.
ಕ್ಯಾಪ್ಟನ್ ಮಚ್ಚಾರ್ ಅವರ ತಂದೆ-ತಾಯಿ ಗೀತಾ ಬೆನ್ ಮತ್ತು ಭೂಪೇಂದ್ರ ಭಾಯಿ ಅವರನ್ನು ಪ್ರಧಾನಿ ಅಭಿನಂದಿಸಿದರು. ಉತ್ತಮ ಮೌಲ್ಯಗಳೊಂದಿಗೆ ಮಗನನ್ನು ಬೆಳೆಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ವೃತ್ತಿಜೀವನದ ಕುರಿತು ಮಾತನಾಡಿದ ಮಚ್ಚಾರ್, ಕಳೆದ 17 ವರ್ಷಗಳಿಂದ ವಿಮಾನ ಹಾರಿಸುತ್ತಿದ್ದು, 11 ವರ್ಷಗಳಿಂದ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಎಲ್ಲ ಸಂದರ್ಭಗಳಲ್ಲೂ ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ತಾನು ಅರಿತಿರುವುದಾಗಿ ಹೇಳಿದರು.
ತಮ್ಮ ಎರಡು ವರ್ಷದ ಮಗುವನ್ನು ಪ್ರತಿದಿನ ಮಡಿಲಲ್ಲಿ ಕೂರಿಸಿಕೊಂಡು ಹನುಮಾನ್ ಚಾಲೀಸಾ ಹೇಳಿಕೊಡುವುದಾಗಿಯೂ ಅವರು ಹಂಚಿಕೊಂಡರು. “ನಾವು ತಾಯ್ನಾಡಿನಿಂದ ದೂರವಿರಬಹುದು. ಆದರೆ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯಿಂದ ದೂರವಿರಲು ಸಾಧ್ಯವಿಲ್ಲ,” ಎಂದು ಹೇಳಿದರು.
ತಮಗೆ ದೊರೆಯುತ್ತಿರುವ ವೈದ್ಯಕೀಯ ಆರೈಕೆಯ ಬಗ್ಗೆಯೂ ಮಾಹಿತಿ ನೀಡಿದರು. ಸೌದಿ ಅರೇಬಿಯಾ ಮತ್ತು ಯುಎಇ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು. ಅಗತ್ಯವಿದ್ದಾಗ ತಮ್ಮನ್ನು ಸಂಪರ್ಕಿಸಬಹುದು ಎಂದು ಪೈಲಟ್‌ಗೆ ಭರವಸೆ ನೀಡಿದರು.
ಪ್ರಧಾನಿಯವರೊಂದಿಗೆ ಮಾತನಾಡಿದ್ದು ತಮ್ಮ ಜೀವನದ ಹೆಮ್ಮೆಯ ಕ್ಷಣ ಎಂದು ಮಚ್ಚಾರ್ ಭಾವುಕರಾಗಿ ಹೇಳಿದ್ದಾರೆ.




