ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿ ಶನಿವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸರ್ಕಾರಿ ಗೆಜೆಟ್ ಅಧಿಸೂಚನೆ ನಕಲಿ ಎಂದು ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಘಟಕ ಗುರುವಾರ ಸ್ಪಷ್ಟಪಡಿಸಿದೆ.
ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪಿಐಬಿ ಫ್ಯಾಕ್ಟ್ ಚೆಕ್, ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು ಇಂತಹ ಯಾವುದೇ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ತಿಳಿಸಿದೆ.
ಹಣಕಾಸು ಸಚಿವಾಲಯದ ಹೆಸರಿನಲ್ಲಿ ಹರಿದಾಡುತ್ತಿರುವ ಗೆಜೆಟ್ ಪ್ರತಿ ನಕಲಿಯಾಗಿದ್ದು, ಅದಕ್ಕೂ ಅಧಿಕೃತ ಸರ್ಕಾರಿ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಘಟಕ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ದಾಖಲೆಗಳನ್ನು ನಂಬಬಾರದು ಎಂದು ಸಾರ್ವಜನಿಕರಿಗೆ ಪಿಐಬಿ ಮನವಿ ಮಾಡಿದೆ. ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅಧಿಕೃತ ಮೂಲಗಳ ಮೂಲಕ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸಲಹೆ ನೀಡಿದೆ.
ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿ ಶನಿವಾರ ಸಾರ್ವಜನಿಕ ರಜೆ ಘೋಷಿಸಿ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಪಿಐಬಿ ಪುನರುಚ್ಚರಿಸಿದೆ. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಅನುಮಾನಾಸ್ಪದ ಮಾಹಿತಿಗಳು ಕಂಡುಬಂದಲ್ಲಿ ಅವುಗಳನ್ನು ಪಿಐಬಿ ಫ್ಯಾಕ್ಟ್ ಚೆಕ್ ಘಟಕದ ಗಮನಕ್ಕೆ ತರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೇಂದ್ರ ಸರ್ಕಾರದ ನಿರ್ಧಾರದ ಮೇರೆಗೆ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಇನ್ನು ಮುಂದೆ ಪ್ರತಿ ಶನಿವಾರ ಮುಚ್ಚಿರಲಿವೆ ಎಂಬ ಹೇಳಿಕೆಯೊಂದಿಗೆ ಈ ನಕಲಿ ದಾಖಲೆ ವ್ಯಾಪಕವಾಗಿ ಹರಿದಾಡಿದ ಹಿನ್ನೆಲೆಯಲ್ಲಿ ಪಿಐಬಿ ಈ ಸ್ಪಷ್ಟನೆ ನೀಡಿದೆ.
ಇದೇ ವೇಳೆ, ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನಡುವೆ ನಡೆದ ಮಾತುಕತೆಯ ಬಳಿಕ, ಮುಂದಿನ ವಾರದ ಆರಂಭದಲ್ಲಿ ನಡೆಸಲು ಉದ್ದೇಶಿಸಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಯುಎಫ್‌ಬಿಯು ಕಳೆದ ವಾರ ಮುಂದೂಡಿತ್ತು.
ಬ್ಯಾಂಕ್ ಸಂಘಟನೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಭಾನುವಾರ ಐಬಿಎ ಮತ್ತು ಯುಎಫ್‌ಬಿಯು ನಡುವೆ ಸಭೆ ನಡೆದಿತ್ತು. ಮಾತುಕತೆಯ ಬಳಿಕ ಎರಡೂ ಕಡೆಯವರು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲು ಒಪ್ಪಿಕೊಂಡಿದ್ದರು.




