ನವದೆಹಲಿ: ತಮ್ಮ ಗುರುತು, ವ್ಯಕ್ತಿತ್ವ ಹಾಗೂ ಪ್ರಚಾರ ಹಕ್ಕುಗಳನ್ನು ಅನುಮತಿಯಿಲ್ಲದೆ ಬಳಸುತ್ತಿರುವುದರ ವಿರುದ್ಧ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರ ಏಕಸದಸ್ಯ ಪೀಠವು ಕಂಗನಾ ಸಲ್ಲಿಸಿರುವ ಮೊಕದ್ದಮೆಯಲ್ಲಿ ಸಮನ್ಸ್ ನೀಡಿದ್ದು, ಮಧ್ಯಂತರ ತಡೆಯಾಜ್ಞೆ ಕೋರಿ ಸಲ್ಲಿಸಿದ ಅರ್ಜಿಯ ಮೇಲೂ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ ಕಂಗನಾ ಪರ ವಕೀಲರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಕ್ಷಿದಾರರ ವಿರುದ್ಧ ಅಶ್ಲೀಲ ಮತ್ತು ಅಸಭ್ಯ ವಿಷಯಗಳನ್ನು ಪ್ರಕಟಿಸಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಗುರುತನ್ನು ಅಶ್ಲೀಲ ಹಾಗೂ ಅಸಭ್ಯ ವಿಷಯಗಳೊಂದಿಗೆ ಜೋಡಿಸಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಂಗನಾ ಆರೋಪಿಸಿದ್ದಾರೆ.
ತಕ್ಷಣದ ವಿಷಯ ತೆರವು ಆದೇಶ ಕೋಲಾಗಿರುವ ಪ್ರತಿವಾದಿಗಳ ಹೆಸರುಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕಂಗನಾ ಪರ ವಕೀಲರಿಗೆ ಸೂಚಿಸಿತು. ಅಗತ್ಯ ವಿವರಗಳನ್ನು ಸಲ್ಲಿಸಿದ ಬಳಿಕ ಮಧ್ಯಂತರ ತಡೆಯಾಜ್ಞೆ ಅರ್ಜಿಯ ಕುರಿತು ಸೂಕ್ತ ಆದೇಶ ನೀಡುವುದಾಗಿ ಪೀಠ ತಿಳಿಸಿತು.
ಇದಲ್ಲದೆ, ಕೆಲವು ಪ್ರತಿವಾದಿಗಳನ್ನು ಪ್ರಕರಣದಿಂದ ಕೈಬಿಡಲಾಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ‘ಮೆಮೊ ಆಫ್ ಪಾರ್ಟೀಸ್’ ಸಲ್ಲಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಫೆಬ್ರವರಿ 3ಕ್ಕೆ ನಿಗದಿಪಡಿಸಲಾಗಿದೆ.
ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ನಕಲಿ ವಿಡಿಯೊಗಳು, ಡೀಪ್‌ಫೇಕ್‌ಗಳು, ನಕಲಿ ಜಾಹೀರಾತುಗಳು ಮತ್ತು ಸಾರ್ವಜನಿಕ ವ್ಯಕ್ತಿಗಳ ಗುರುತಿನ ವಾಣಿಜ್ಯ ದುರುಪಯೋಗದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಗೌತಮ್ ಗಂಭೀರ್, ಸುನಿಲ್ ಗವಾಸ್ಕರ್, ಶ್ರೀ ಶ್ರೀ ರವಿಶಂಕರ್, ಅರ್ಜುನ್ ಕಪೂರ್, ಅಲ್ಲು ಅರ್ಜುನ್, ನಾಗಾರ್ಜುನ, ವರುಣ್ ಧವನ್, ಕಾಜೋಲ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಜುಬಿನ್ ನಾಟಿಯಾಲ್, ಕರಣ್ ಜೋಹರ್, ರಾಜ್ ಶಮಾಣಿ, ಶಶಿ ತರೂರ್ ಮತ್ತು ನಾಗ ಚೈತನ್ಯ ಸೇರಿದಂತೆ ಹಲವು ಗಣ್ಯರು ತಮ್ಮ ಗುರುತು, ಹೋಲಿಕೆ ಅಥವಾ AI ಮೂಲಕ ಸೃಷ್ಟಿಸಲಾದ ನಕಲುಗಳ ಅನಧಿಕೃತ ಬಳಕೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ನಟಿ ತಬು ಸಲ್ಲಿಸಿದ್ದ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳ ಅರ್ಜಿಯ ವಿಚಾರಣೆಯಲ್ಲೂ ದೆಹಲಿ ಹೈಕೋರ್ಟ್ ಆನ್‌ಲೈನ್‌ನಲ್ಲಿ ಪ್ರಕಟವಾಗಿದ್ದ ಆಕ್ಷೇಪಾರ್ಹ ವಿಷಯಗಳನ್ನು ತೆರವುಗೊಳಿಸುವಂತೆ ಮಧ್ಯಂತರ ಆದೇಶ ನೀಡಿತ್ತು.




