Wednesday, July 1, 2026

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕಿಂಗ್‌ಪಿನ್ ಪತ್ನಿ ಪಾಟ್ನಾದಲ್ಲಿ ಬಂಧನ

ಪಾಟ್ನಾ: ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೇಂದ್ರ ಗುಪ್ತಾ ಅವರ ಪತ್ನಿ ಸುಮನ್ ಕುಮಾರಿ ಅವರನ್ನು ಪಾಟ್ನಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಪಾಟ್ನಾ ಪೊಲೀಸರ ಮಾಹಿತಿಯಂತೆ, ಸುಮನ್ ಕುಮಾರಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳಲ್ಲಿ ಅವರು ಪಾತ್ರವಹಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ತನಿಖಾಧಿಕಾರಿಗಳ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆಯ ನಂತರವೂ ಸುಮನ್ ಕುಮಾರಿ ತಮ್ಮ ಪತಿ ಬಿಜೇಂದ್ರ ಗುಪ್ತಾ ಹಾಗೂ ಜಾಲದ ಇತರ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.

ಅವರ ವಿಚಾರಣೆಯಿಂದ ಹಣದ ಹರಿವಿನ ಮಾಹಿತಿ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮಹತ್ವದ ಸುಳಿವುಗಳು ಸಿಗುವ ನಿರೀಕ್ಷೆಯಿದೆ.

ಇದಕ್ಕೂ ಮೊದಲು ಮಹಾರಾಷ್ಟ್ರ ಪೊಲೀಸರು ಪಾಟ್ನಾದ ರಾಜೀವ್ ಶಾ ಮತ್ತು ಆಕಾಶ್ ಕುಮಾರ್ ಹಾಗೂ ಹರಿಯಾಣದ ಪಾನಿಪತ್‌ನ ಧೀರಜ್ ಕುಮಾರ್ ಅವರನ್ನು ಬಂಧಿಸಿದ್ದರು.

ಈ ಮೂವರ ವಿಚಾರಣೆಯ ವೇಳೆ ಬಿಜೇಂದ್ರ ಗುಪ್ತಾ ಈ ಸಂಪೂರ್ಣ ಜಾಲದ ಕಿಂಗ್‌ಪಿನ್ ಎಂಬ ಮಾಹಿತಿ ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಹಾರ, ದೆಹಲಿ, ಹರಿಯಾಣ ಹಾಗೂ ಆಗ್ರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಜೇಂದ್ರ ಗುಪ್ತಾ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳು ದಾಳಿ ನಡೆಸುತ್ತಿವೆ. ಬಿಹಾರದ ಸಮಸ್ತಿಪುರ ಜಿಲ್ಲೆಯ ವಿದ್ಯಾಪತಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್‌ಪುರ ಗ್ರಾಮ ಮೂಲದ ಬಿಜೇಂದ್ರ ಗುಪ್ತಾ ಈ ಜಾಲವನ್ನು ಸಂಘಟಿಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಬಿಜೇಂದ್ರ ಅವರ ತಂದೆ ಬಾಲೇಶ್ವರ್ ಗುಪ್ತಾ ಪ್ರತಿಕ್ರಿಯಿಸಿ, ಉನ್ನತ ಶಿಕ್ಷಣಕ್ಕಾಗಿ ಬೇಗುಸರಾಯಿಗೆ ತೆರಳಿದ ಬಳಿಕ ಹಲವು ವರ್ಷಗಳಿಂದ ಮಗನೊಂದಿಗೆ ಸಂಪರ್ಕ ಇರಲಿಲ್ಲ ಎಂದು ಹೇಳಿದ್ದಾರೆ.

ಅವರು ಯಾವ ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆ ಕುಟುಂಬಕ್ಕೆ ಮಾಹಿತಿ ಇರಲಿಲ್ಲ. ಇದೀಗ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಗನ ಹೆಸರು ಕೇಳಿಬಂದಿರುವುದು ಕುಟುಂಬಕ್ಕೆ ಆಘಾತ ತಂದಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ಬಿಜೇಂದ್ರ ಗುಪ್ತಾ ವಿರುದ್ಧ ಈ ಹಿಂದೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

2003ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದರು ಎನ್ನಲಾಗಿದ್ದು, ನೀಟ್-ಯುಜಿ ಹಾಗೂ ಒಡಿಶಾ ಸಿಬ್ಬಂದಿ ಆಯ್ಕೆ ಆಯೋಗದ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯಲ್ಲೂ ಅವರ ಹೆಸರು ಕೇಳಿಬಂದಿದೆ. ಆದರೆ ಈ ಆರೋಪಗಳ ಬಗ್ಗೆ ತನಿಖೆ ಇನ್ನೂ ಮುಂದುವರಿದಿದೆ.

ಬಿಜೇಂದ್ರ ಗುಪ್ತಾ ಬಂಧನಕ್ಕಾಗಿ ಮಹಾರಾಷ್ಟ್ರ ಪೊಲೀಸ್ ತಂಡಗಳು ಬಿಹಾರದಲ್ಲೇ ಬೀಡುಬಿಟ್ಟಿದ್ದು, ಹಣಕಾಸು ವ್ಯವಹಾರಗಳು, ದೂರವಾಣಿ ಸಂಪರ್ಕಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಶಂಕಿತರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

More like this
Related

ರಾಮ ಮಂದಿರ ಹುಂಡಿ ಹಗರಣ ದೇಶಕ್ಕೆ ನೋವು ತಂದಿದೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಅಯೋಧ್ಯೆಯ ರಾಮ ಮಂದಿರ ಹುಂಡಿ ಹಗರಣದ ವಿಚಾರ ದೇಶದ ಜನತೆ,...

ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆ: ಸೂಕ್ತ ಕ್ರಮಕ್ಕೆ ಹಬೀಬ್ ಆಲಿ ಆಗ್ರಹ

ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ ನಾಲ್ಕನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ...

ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ : ಬಿ.ಎಲ್.ಓ ಗಳ ಮನೆ ಮನೆ ಭೇಟಿ – ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಉಡುಪಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ...

ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ;ಪ್ರಕರಣ ದಾಖಲು

ಉಡುಪಿ: ಉಡುಪಿ ಜಿಲ್ಲೆಯ ಶಂಕರಪುರದ ಸುಭಾಷ್ ನಗರದ ಇಂಡಿಯನ್ ಆಯಿಲ್ ಫಿಲ್ಲಿಂಗ್...

Copying is disabled on Udupi Digital News.