ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್. ರವಿ ಅವರು ವಿಧಾನಸಭೆ ವಿಸರ್ಜನೆ ಘೋಷಿಸಿದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅಧಿಕೃತವಾಗಿ ಈಗ “ಮಾಜಿ ಮುಖ್ಯಮಂತ್ರಿ” ಆಗಿದ್ದಾರೆ. ವಿಧಾನಸಭೆ ವಿಸರ್ಜನೆಯೊಂದಿಗೆ ಅವರ ನೇತೃತ್ವದ ಸಚಿವ ಸಂಪುಟವೂ ಸ್ವಯಂಚಾಲಿತವಾಗಿ ರದ್ದುಗೊಂಡಿದೆ.
ರಾಜ್ಯಪಾಲರು ಗುರುವಾರ ಸಂಜೆ ಈ ಘೋಷಣೆ ಮಾಡಿದರು. ಆದರೆ ಮಮತಾ ಬ್ಯಾನರ್ಜಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಾದ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಇನ್ನೂ “ಪಶ್ಚಿಮ ಬಂಗಾಳ ಮುಖ್ಯಮಂತ್ರಿ” ಎಂಬ ಗುರುತನ್ನೇ ಉಳಿಸಿಕೊಂಡಿದ್ದಾರೆ.
ಅವರ ಎಕ್ಸ್ ಹಾಗೂ ಫೇಸ್‌ಬುಕ್ ಖಾತೆಗಳ ‘About’ ವಿಭಾಗದಲ್ಲಿ “Founder Chairperson All India Trinamool Congress. Honourable Chief Minister, West Bengal” ಎಂದು ಉಲ್ಲೇಖಿಸಲಾಗಿದೆ.
ಈ ನಡೆ ಮೇ 5ರಂದು ಚುನಾವಣಾ ಫಲಿತಾಂಶಗಳ ಬಳಿಕ ಮಮತಾ ಬ್ಯಾನರ್ಜಿ ನಡೆಸಿದ್ದ ಪತ್ರಿಕಾಗೋಷ್ಠಿಯ ಹೇಳಿಕೆಗೆ ಹೊಂದಿಕೆಯಾಗುತ್ತಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ತೆರೆ ಬಿದ್ದಿದ್ದರೂ, ತಾವು ರಾಜೀನಾಮೆ ಸಲ್ಲಿಸುವ ಪರಂಪರೆಯನ್ನು ಅನುಸರಿಸುವುದಿಲ್ಲ ಎಂದು ಅವರು ಘೋಷಿಸಿದ್ದರು.
ಅಧಿಕೃತ ಫಲಿತಾಂಶಗಳು ಜನರ ನಿಜವಾದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಸೋಲನ್ನೂ, ಭವಾನಿಪುರ ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶ ನೀಡಿದ್ದರು.
ಭವಾನಿಪುರ ಕ್ಷೇತ್ರದಲ್ಲಿ ಅವರು ಮಾಜಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು.
ಈ ಬೆಳವಣಿಗೆ 2011ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಂತರದ ಘಟನೆಗಳನ್ನು ನೆನಪಿಗೆ ತರುತ್ತಿದೆ. ಆ ಸಂದರ್ಭದಲ್ಲಿ ಎಡಪಂಥೀಯ ಸರ್ಕಾರದ ಕೊನೆಯ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಫಲಿತಾಂಶದ ಟ್ರೆಂಡ್ ಸ್ಪಷ್ಟವಾದ ಕೂಡಲೇ ರಾಜ್ಯಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದರು.
ರಾಜೀನಾಮೆ ಸಲ್ಲಿಸುವ ವೇಳೆ ಮುಖ್ಯಮಂತ್ರಿಯಾಗಿ ಬಳಸುತ್ತಿದ್ದ ಸರ್ಕಾರಿ ಬುಲೆಟ್‌ಪ್ರೂಫ್ ವಾಹನದಲ್ಲಿ ರಾಜ್ಯಭವನಕ್ಕೆ ತೆರಳಿದ್ದ ಅವರು, ರಾಜೀನಾಮೆಯ ನಂತರ ಪಕ್ಷದ ಕಾರಿನಲ್ಲಿ ಅಲ್ಲಿಂದ ತೆರಳಿದ್ದರು. ಅಲ್ಲದೆ, ತಮ್ಮ ಭದ್ರತಾ ಸಿಬ್ಬಂದಿಗೆ ಧನ್ಯವಾದ ತಿಳಿಸಿ, ಇನ್ನು ಮುಂದೆ ತಮ್ಮ ಭದ್ರತಾ ಕರ್ತವ್ಯದಿಂದ ವಿನಾಯಿತಿ ಪಡೆಯುವಂತೆ ಮನವಿ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸುಕಾಂತ ಮಜುಂದಾರ್, “ಬುದ್ಧದೇವ್ ಭಟ್ಟಾಚಾರ್ಯ ಮತ್ತು ಮಮತಾ ಬ್ಯಾನರ್ಜಿ ನಡುವಿನ ಹೋಲಿಕೆ ಸಾಧ್ಯವಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಭಟ್ಟಾಚಾರ್ಯ ಅವರು ಪ್ರಾಮಾಣಿಕತೆ ಮತ್ತು ನೈತಿಕತೆಯ ವ್ಯಕ್ತಿಯಾಗಿದ್ದರು. ಅಧಿಕಾರಾಸೆ ಇಲ್ಲದ ನಾಯಕ ಎಂಬುದನ್ನು ಅವರು ಜೀವನದ ಕೊನೆಯವರೆಗೂ ಸಾಬೀತುಪಡಿಸಿದ್ದರು,” ಎಂದು ಹೇಳಿದ್ದಾರೆ.




