ಅಹಮದಾಬಾದ್: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಮರುಪರೀಕ್ಷೆಗೆ ಕೇವಲ ಮೂರು ದಿನ ಬಾಕಿ ಇರುವಾಗ, 17 ವರ್ಷದ ನೀಟ್ ಪರೀಕ್ಷಾರ್ಥಿಯೊಬ್ಬರು ಅಹಮದಾಬಾದ್‌ನ ನ್ಯೂ ರಾಣಿಪ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದನು. ಆತ ಅರಿಸ್ಟೋ ಆನಂದಂ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಬಾಲ್ಕನಿ ಭಾಗದಿಂದ ಕೆಳಗೆ ಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬೆಳಗಿನ ಜಾವ ಸುಮಾರು 4.30 ಗಂಟೆಗೆ ಘಟನೆ ಕುರಿತು ಮಾಹಿತಿ ಪಡೆದ ಸಬರಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದರು. ಹೆಚ್ಚಿನ ತನಿಖೆ ನಡೆಯುವವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ.
ಸಬರಮತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯುವರಾಜ್‌ಸಿಂಗ್ ವಾಘೇಲಾ ಮಾತನಾಡಿ, “ಘಟನೆ ರಾತ್ರಿ 2 ರಿಂದ 3 ಗಂಟೆಯ ನಡುವೆ ನಡೆದಿದೆ. ಬೆಳಗ್ಗೆ 4.30ಕ್ಕೆ ಮಾಹಿತಿ ಲಭಿಸಿದೆ. ಇದುವರೆಗೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ವಿದ್ಯಾರ್ಥಿ ಮಾನಸಿಕ ಒತ್ತಡದಲ್ಲಿದ್ದನೇ ಅಥವಾ ಬೇರೆ ಕಾರಣವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಯ ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಘಟನೆಯ ಸುತ್ತಲಿನ ಎಲ್ಲಾ ಪರಿಸ್ಥಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾವಿಗೆ ಕಾರಣ ಏನು ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ತೀರ್ಮಾನಕ್ಕೆ ಬಂದಿಲ್ಲ.
ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೇ 3ರಂದು ನಡೆದಿದ್ದ ಮೂಲ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಿರ್ಧರಿಸಿತ್ತು.
ಪರೀಕ್ಷೆ ರದ್ದಾದ ಪರಿಣಾಮ ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಅವರ ಪೋಷಕರಲ್ಲಿ ಅನಿಶ್ಚಿತತೆ ಉಂಟಾಗಿತ್ತು. ಮರುಪರೀಕ್ಷೆಗಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದ್ದು, ಪರೀಕ್ಷೆಯ ಪಾವಿತ್ರ್ಯ ಕಾಪಾಡಲು ಸೂಕ್ತ ಕ್ರಮಗಳನ್ನು ಜಾರಿಗೊಳಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೂ ಮಾಹಿತಿ ನೀಡಲಾಗಿದೆ.
ವಿದ್ಯಾರ್ಥಿಯ ಸಾವಿಗೆ ಪರೀಕ್ಷೆಯೊಂದಿಗಿನ ಯಾವುದೇ ನೇರ ಸಂಬಂಧವಿದೆ ಎಂದು ಪೊಲೀಸರು ಇದುವರೆಗೆ ಹೇಳಿಲ್ಲ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.




