ಜೈಪುರ: ರಾಜಸ್ಥಾನದ ಬಹುಕೋಟಿ ರೂಪಾಯಿ ಮೌಲ್ಯದ ಜಲ ಜೀವನ ಮಿಷನ್ (JJM) ಹಗರಣದಲ್ಲಿ ಪ್ರಮುಖ ಮಧ್ಯವರ್ತಿ ಹಾಗೂ ಮಾಸ್ಟರ್‌ಮೈಂಡ್ ಎಂದು ಆರೋಪಿಸಲ್ಪಟ್ಟಿರುವ ಸಂಜಯ್ ಬಡಾಯ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಸೋಮವಾರ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಸಂಜಯ್ ಬಡಾಯ ಥೈಲ್ಯಾಂಡ್‌ಗೆ ಮದುವೆ ಸಮಾರಂಭಕ್ಕೆ ತೆರಳಿದ್ದರು. ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ವಲಸೆ ಇಲಾಖೆ (Bureau of Immigration) ಎಸಿಬಿಗೆ ಮಾಹಿತಿ ನೀಡಿತು. ಬಳಿಕ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಎಸಿಬಿ ತಂಡ ಅವರನ್ನು ವಶಕ್ಕೆ ಪಡೆದುಕೊಂಡಿತು.
ಈ ಮೊದಲು ಮೇ 10ರಂದು ಬಡಾಯ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಪ್ರಕರಣದ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳ ಪ್ರಕಾರ, ಸಂಜಯ್ ಬಡಾಯ ಜಲ ಜೀವನ ಮಿಷನ್ ಹಗರಣದಲ್ಲಿ ಪ್ರಮುಖ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಮಾಜಿ ಜಲ ಸರಬರಾಜು ಸಚಿವ ಮಹೇಶ್ ಜೋಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸುಬೋಧ್ ಅಗರವಾಲ್ ಅವರ ಆಪ್ತ ಸಹಚರರಾಗಿದ್ದರು ಎನ್ನಲಾಗಿದೆ. ಈ ಇಬ್ಬರೂ ಈಗಾಗಲೇ ಬಂಧಿತರಾಗಿದ್ದಾರೆ.
ಹಣಕಾಸು ವ್ಯವಹಾರಗಳು, ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಪ್ರಕ್ರಿಯೆಗಳು, ಹೊಸ ವ್ಯಕ್ತಿಗಳನ್ನು ಸೇರಿಸಿಕೊಳ್ಳುವುದು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳಿಗೆ ಸಹಾಯ ಮಾಡುವ ಕೆಲಸಗಳಲ್ಲಿ ಬಡಾಯ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ಅವರು ಜೈಪುರದ ಬನಿ ಪಾರ್ಕ್ ನಿವಾಸಿಯಾಗಿದ್ದಾರೆ.
ಜಾರಿ ನಿರ್ದೇಶನಾಲಯ (ED) ಸಂಜಯ್ ಬಡಾಯ ಅವರನ್ನು 2024ರ ಜುಲೈ 16ರಂದು ಬಂಧಿಸಿತ್ತು. ಬಳಿಕ 2024ರ ಡಿಸೆಂಬರ್ 17ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ತನಿಖೆ ವೇಳೆ 2022ರವರೆಗೆ ಬಡಾಯ ವಿಮಾ ಕಂಪನಿಯೊಂದರಲ್ಲಿ ವಾರ್ಷಿಕ ಸುಮಾರು 7 ಲಕ್ಷ ರೂಪಾಯಿ ವೇತನದಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ. ಆದರೆ ಜಲ ಜೀವನ ಮಿಷನ್ ಹಗರಣದ ನಂತರ ಅವರು ಅಲ್ಪಾವಧಿಯಲ್ಲೇ ಅಪಾರ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ತಮ್ಮ ಪತ್ನಿ ನೈನಾ ಬಡಾಯ ಭಾಗಿಯಾಗಿದ್ದ ಕಂಪನಿಯೊಂದನ್ನು ಸ್ಥಾಪಿಸಿ, ಜೈಪುರದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಲಾಗಿದೆ ಎಂದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ನಕಲಿ ದಾಖಲೆಗಳ ಮೂಲಕ ಜೈಪುರ ಅಭಿವೃದ್ಧಿ ಪ್ರಾಧಿಕಾರ (JDA) ಭೂಮಿ ಅತಿಕ್ರಮಿಸಲು ಯತ್ನಿಸಿರುವ ಆರೋಪವೂ ಕೇಳಿಬಂದಿದೆ.
ಪ್ರಕರಣ ಸಂಬಂಧ ಮಾಜಿ ಜಲ ಸರಬರಾಜು ಸಚಿವ ಮಹೇಶ್ ಜೋಶಿ ಅವರನ್ನು ಎಸಿಬಿ ಮೇ 7ರಂದು ಬಂಧಿಸಿತ್ತು. ನ್ಯಾಯಾಲಯವು ಅವರನ್ನು ಮೇ 11ರವರೆಗೆ ಎಸಿಬಿ ವಶಕ್ಕೆ ಒಪ್ಪಿಸಿತ್ತು. ರಿಮಾಂಡ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಇದಕ್ಕೂ ಮೊದಲು, ಏಪ್ರಿಲ್ 9ರಂದು ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರವಾಲ್ ಬಂಧಿತರಾಗಿದ್ದು, ಪ್ರಸ್ತುತ ಜೈಲಿನಲ್ಲಿ ಇದ್ದಾರೆ.
ಎಸಿಬಿಯ ಪ್ರಾಥಮಿಕ ತನಿಖೆ ಹಾಗೂ ಚಾರ್ಜ್‌ಶೀಟ್ ಪ್ರಕಾರ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪ ಸಾಬೀತಾದರೆ ಮಹೇಶ್ ಜೋಶಿ, ಸುಬೋಧ್ ಅಗರವಾಲ್ ಹಾಗೂ ಇತರ ಆರೋಪಿಗಳಿಗೆ ಗರಿಷ್ಠ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಡಿಐಜಿ ಡಾ. ರಾಮೇಶ್ವರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಯಿತು. ಎಎಸ್ಪಿ ಮಹಾವೀರ್ ಪ್ರಸಾದ್ ಶರ್ಮಾ, ಎಎಸ್ಪಿ ಭೂಪೇಂದ್ರ ಸಿಂಗ್ ಹಾಗೂ ಎಎಸ್ಪಿ ಹಿಮಾಂಶು ಕುಲ್ದೀಪ್ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡಿಜಿ ಗೋವಿಂದ್ ಗುಪ್ತಾ ಹಾಗೂ ಎಡಿಜಿ ಸ್ಮಿತಾ ಶ್ರೀವಾಸ್ತವ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.




