ಚಂಡೀಗಢ: ಪಂಜಾಬ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ಅಮೃತಸರ ಉತ್ತರ ಕ್ಷೇತ್ರದ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ಇಬ್ಬರು ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಶಾಸಕ ಪಕ್ಷ ತೊರೆದಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಸೋಮವಾರ ಪಂಜಾಬ್ ವಿಧಾನಸಭೆಯ ಸ್ಪೀಕರ್ಗೂ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
2025ರ ಜೂನ್ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಡಿ ಅವರನ್ನು ಎಎಪಿ ಐದು ವರ್ಷಗಳ ಕಾಲ ಅಮಾನತುಗೊಳಿಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿರೋಮಣಿ ಅಕಾಲಿದಳದ (ಎಸ್ಎಡಿ) ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಬಂಧನವನ್ನು ಅವರು ವಿರೋಧಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ರಾಜೀನಾಮೆ ವಿಚಾರ ಹಂಚಿಕೊಂಡಿರುವ ಅವರು, ರಾಜ್ಯದ ಜನರು ತಮಗೆ ತೋರಿದ ಪ್ರೀತಿ ಮತ್ತು ಗೌರವಕ್ಕೆ ಕೊನೆಯ ಉಸಿರಿರುವವರೆಗೂ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.
ಜನರ ಸಹಕಾರ ಮತ್ತು ದೇವರ ಆಶೀರ್ವಾದದೊಂದಿಗೆ ಎಲ್ಲರೂ ಒಗ್ಗೂಡಿ, ಗಲ್ಲಿ ರಾಜಕೀಯ ಹಾಗೂ ಉದ್ಘಾಟನಾ ಕಾರ್ಯಕ್ರಮಗಳ ರಾಜಕಾರಣವನ್ನು ಮೀರಿ ಚಿಂತಿಸಬೇಕು. ಮಾದಕ ವಸ್ತುಗಳು, ಸುಲಿಗೆ, ಗ್ಯಾಂಗ್ಸ್ಟರ್ಗಳ ಹಾವಳಿ ಮತ್ತು ಭ್ರಷ್ಟಾಚಾರದಿಂದ ಬಳಲುತ್ತಿರುವ ಪಂಜಾಬ್ ಅನ್ನು ಮತ್ತೆ ಪ್ರಗತಿಪರ ಹಾಗೂ ಜನಪ್ರಿಯ ರಾಜ್ಯವನ್ನಾಗಿ ರೂಪಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಅವರು ಹೇಳಿದ್ದಾರೆ.
ತಾವು ಶೇ.90ರಷ್ಟು ಗುರಿಗಳನ್ನು ಸಾಧಿಸಿದ್ದೇನೆ ಎಂದು ಹೇಳಿರುವ ಸಿಂಗ್, ರಾಜಕೀಯದಲ್ಲಿ ‘ಮೈ-ಬಾಪ್’ ಸಂಸ್ಕೃತಿಯನ್ನು ಅಂತ್ಯಗೊಳಿಸಿ, ಜನರನ್ನೇ ತಮ್ಮ ಪ್ರೇರಣೆಯ ಮೂಲವೆಂದು ಪರಿಗಣಿಸಿ ಕೆಲಸ ಮಾಡಿರುವುದು ತಮ್ಮ ದೊಡ್ಡ ಸಾಧನೆ ಎಂದು ತಿಳಿಸಿದ್ದಾರೆ.
ಪಂಜಾಬ್ ವಿಧಾನಸಭೆಯಲ್ಲಿ ಅಮೃತಸರದ ಜನರ ಧ್ವನಿಯಾಗಿ ನಿರಂತರವಾಗಿ ಮಾತನಾಡಿದ್ದೇನೆ. ನೀರು, ಒಳಚರಂಡಿ ವ್ಯವಸ್ಥೆ, ಸರ್ಕ್ಯೂಟ್ ಹೌಸ್, ಕಂಪನಿ ಬಾಗ್, ಕಲುಷಿತ ಚರಂಡಿಗಳು, ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಸರ್ಕಾರಿ ವೈದ್ಯಕೀಯ ಕಾಲೇಜು, ಸರೋವರಾಣಿ ಕಾಲೇಜು ಹಾಗೂ ಬರ್ಗಾರಿ ಧಾರ್ಮಿಕ ಅಪವಿತ್ರಗೊಳಿಸುವಿಕೆ ಪ್ರಕರಣ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ವಿಧಾನಸಭೆಯಲ್ಲಿ ಮೊದಲ ಬಾರಿಗೆ ಗಲ್ಲಿಗಳು ಮತ್ತು ಬಡಾವಣೆಗಳ ಹೆಸರನ್ನೇ ಉಲ್ಲೇಖಿಸಿ ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಹೆಗ್ಗಳಿಕೆ ತಮ್ಮದಾಗಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಜನರೊಂದಿಗೆ ಸಮಾಲೋಚಿಸಿ ಭವಿಷ್ಯದ ಕಾರ್ಯತಂತ್ರ ರೂಪಿಸುವುದಾಗಿ ತಿಳಿಸಿರುವ ಅವರು, ಸ್ವಚ್ಛ ರಾಜಕೀಯ ಮತ್ತು ಪಾರದರ್ಶಕ ಆಡಳಿತ ತಮ್ಮ ಗುರಿಯಾಗಿದೆ. ‘ಪಂಜಾಬ್ ಫಸ್ಟ್’ ಎಂಬುದೇ ತಮ್ಮ ಏಕೈಕ ಉದ್ದೇಶವಾಗಿದ್ದು, ವೈಯಕ್ತಿಕ ಹಿತಾಸಕ್ತಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಂಗ್, ಪಕ್ಷವು ತನ್ನ ಸ್ಥಾಪನೆಯ ಮೂಲ ಆಶಯಗಳಿಂದ ದೂರ ಸರಿದಿದೆ ಎಂದು ಆರೋಪಿಸಿದ್ದರು.
ಸಿಂಗ್ ಅವರ ರಾಜೀನಾಮೆಗೂ ಮುನ್ನ ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಥನ್ಮಜ್ರಾ ಮತ್ತು ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಮಜ್ರಾ ಅವರು ಭಾನುವಾರ ಎಎಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಪಟಿಯಾಲ ಜಿಲ್ಲೆಯ ಸನೌರ್ ಕ್ಷೇತ್ರವನ್ನು ಪ್ರತಿನಿಧಿಸುವ ಹರ್ಮೀತ್ ಸಿಂಗ್ ಪಥನ್ಮಜ್ರಾ ಅವರು ಪಕ್ಷ ತೊರೆಯುವ ನಿರ್ಧಾರವನ್ನು ಪ್ರಕಟಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ಪತ್ರವನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ಕಳುಹಿಸಿದ್ದರು. ಈ ಹಿಂದೆ ಹಲವು ವಿವಾದಗಳಲ್ಲಿ ಸಿಲುಕಿದ್ದ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಳಿಕ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಭಾರತಕ್ಕೆ ಮರಳಿ ಪ್ರಕರಣದ ತನಿಖೆಗೆ ಹಾಜರಾಗಲು ಮುಂದಾದಾಗ ಪೊಲೀಸರು ಅವರನ್ನು ಬಂಧಿಸಿದ್ದರು.
ಸಮಾನಾ ಕ್ಷೇತ್ರದ ಶಾಸಕರಾಗಿರುವ ಹಾಗೂ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಚೇತನ್ ಸಿಂಗ್ ಜೌರಮಜ್ರಾ ಅವರು ಸಾಮಾಜಿಕ ಜಾಲತಾಣದ ಮೂಲಕ ರಾಜೀನಾಮೆ ಪ್ರಕಟಿಸಿದ್ದಾರೆ.
ಸಮಾನಾ ಕ್ಷೇತ್ರದ ಉಸ್ತುವಾರಿಯಾಗಿ ಶಿರೋಮಣಿ ಅಕಾಲಿದಳದ ಮಾಜಿ ಹಿರಿಯ ನಾಯಕ ಸುರ್ಜಿತ್ ಸಿಂಗ್ ರಖ್ರಾ ಅವರನ್ನು ಎಎಪಿ ಹೈಕಮಾಂಡ್ ನೇಮಿಸಿದ ಬಳಿಕ ಜೌರಮಜ್ರಾ ಮತ್ತು ಪಕ್ಷದ ನಾಯಕತ್ವದ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತಮ್ಮದೇ ಕ್ಷೇತ್ರಕ್ಕೆ ಮತ್ತೊಬ್ಬ ನಾಯಕರನ್ನು ಉಸ್ತುವಾರಿಯಾಗಿ ನೇಮಿಸಿರುವುದು ತಮ್ಮ ರಾಜಕೀಯ ಪ್ರಭಾವಕ್ಕೆ ಹಿನ್ನಡೆಯಾಗಿದೆ ಎಂದು ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
2027ರ ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಎಪಿಗೆ ಈ ಸರಣಿ ರಾಜೀನಾಮೆಗಳು ರಾಜಕೀಯ ಸವಾಲಾಗಿ ಪರಿಣಮಿಸಿವೆ.




