ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಸರ್ಕಸ್ ಬಗೆಹರಿದಂತಾಗಿದೆ. ಸರ್ಕಾರ ರಚಿಸಲು ಟಿವಿಕೆಗೆ (TVK) ವಿಸಿಕೆ ನಾಯಕ ತಿರುಮಾವಲವನ್ ಬೆಂಬಲ ಪತ್ರವನ್ನು ನೀಡಿದ್ದಾರೆ. ಹಾಗೇ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕೂಡ ಬೇಷರತ್ತಾದ ಬೆಂಬಲ ನೀಡಿದೆ.ಇದರಿಂದ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಹಾದಿ ಸುಗಮವಾದಂತಾಗಿದೆ.
ಬೆಳಗ್ಗೆಯಿಂದ ಟಿವಿಕೆ ಮತ್ತು ವಿಸಿಕೆ ನಾಯಕರು ಪ್ರತ್ಯೇಕವಾಗಿ ತಮ್ಮ ಶಾಸಕರ ಜೊತೆ ಸಭೆ ನಡೆಸಿದ್ದರು. ವಿಸಿಕೆ ಟಿವಿಕೆಗೆ ಬೆಂಬಲ ನೀಡಿರುವುದರಿಂದಾಗಿ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಈಗಾಗಲೇ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆ ಶುರು ಮಾಡಿದ್ದಾರೆ.
ಟಿವಿಕೆ ನಾಯಕ ಅಧವ್ ಅರ್ಜುನ ಈ ಬಗ್ಗೆ ಮಾಹಿತಿ ನೀಡಿದ್ದು, ವಿಸಿಕೆ ವಿಜಯ್ ಅವರ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಸರ್ಕಾರ ರಚನೆ ಕುರಿತು ವಿಸಿಕೆ ಬೆಂಬಲ ನೀಡುವ ಪತ್ರವನ್ನೂ ಟಿವಿಕೆಗೆ ನೀಡಿದೆ. ಇದಕ್ಕಾಗಿ ಟಿವಿಕೆ ನಾಯಕ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಬೆಂಬಲಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಟಿವಿಕೆ 234 ಸದಸ್ಯರ ಸದನದಲ್ಲಿ 108 ಸ್ಥಾನಗಳನ್ನು ಗೆದ್ದಿತು. ಡಿಎಂಕೆ 59 ಸ್ಥಾನಗಳನ್ನು, ಎಐಎಡಿಎಂಕೆ 47, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2 ಮತ್ತು ಸಿಪಿಐ(ಎಂ) 2 ಸ್ಥಾನಗಳನ್ನು ಗೆದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದವು. ಕಾಂಗ್ರೆಸ್ ನಂತರ ಟಿವಿಕೆಗೆ ಬೆಂಬಲ ನೀಡಿತು. ಇದೀಗ ಸಿಪಿಎಂ, ಸಿಪಿಐ, ವಿಸಿಕೆ ಹಾಗೂ ಮುಸ್ಲಿಂ ಲೀಗ್ ಕೂಡ ಟಿವಿಕೆಗೆ ಬೆಂಬಲ ಘೋಷಿಸಿರುವುದರಿಂದ ಸರ್ಕಾರ ರಚನೆಗೆ ಬೇಕಾದ ಬಹುಮತ ಸಿಕ್ಕಂತಾಗಿದೆ.




