Monday, May 4, 2026

2026ರ ಫಿಫಾ ವಿಶ್ವಕಪ್: ಭಾರತ, ಚೀನಾದಲ್ಲಿ ಅಧಿಕೃತ ಪ್ರಸಾರಕರಿಲ್ಲ!

ಹೊಸದಿಲ್ಲಿ : 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿ ಜೂನ್ 11ರಂದು ಆರಂಭವಾಗಲಿದ್ದು, ಭಾರತ, ಚೀನಾ, ಮಲೇಶ್ಯಾ, ಥಾಯ್ಲೆಂಡ್, ವಿಯೆಟ್ನಾಂ ಹಾಗೂ ಶ್ರೀಲಂಕಾ ದೇಶಗಳಲ್ಲಿ ಪಂದ್ಯಾವಳಿಗೆ ಅಧಿಕೃತ ಪ್ರಸಾರಕರಿಲ್ಲ.

ಮುಂಬರುವ ವಿಶ್ವಕಪ್‌ ನಲ್ಲಿ 48 ದೇಶಗಳು ಭಾಗವಹಿಸಲಿದ್ದು, ಒಟ್ಟು 104 ಪಂದ್ಯಗಳು ನಡೆಯಲಿವೆ. ಈ ಟೂರ್ನಿಯು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದಲ್ಲಿ ನಡೆಯಲಿದೆ.

ವಿಶ್ವದ ಅತಿದೊಡ್ಡ ಕ್ರೀಡಾಕೂಟವಾಗಿರುವ ವಿಶ್ವಕಪ್ ನಾಲ್ಕು ವರ್ಷಗಳಿಗೊಮ್ಮೆ ನಡೆಯುವುದರಿಂದ ಬಿಲಿಯನ್‌ ಗಟ್ಟಲೆ ಜನರನ್ನು ಆಕರ್ಷಿಸುತ್ತದೆ.

ಅಚ್ಚರಿಯ ಸಂಗತಿಯೆಂದರೆ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಮತ್ತು ಚೀನಾದಲ್ಲಿ ಪ್ರಸಾರಕ್ಕೆ ಅಧಿಕೃತ ಹಕ್ಕುದಾರರಿಲ್ಲ.

ಮುಂದಿನ ಎರಡು ಫಿಫಾ ವಿಶ್ವಕಪ್‌ ಗಳು ಹಾಗೂ 2027ರ ಫಿಫಾ ಮಹಿಳಾ ವಿಶ್ವಕಪ್‌ಗಳ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಲು ಫಿಫಾ ಜುಲೈ 2025ರಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ಬಿಡ್ ಮೌಲ್ಯವನ್ನು 100 ಮಿಲಿಯನ್ ಡಾಲರ್‌ ನಿಂದ 35 ಮಿಲಿಯನ್ ಡಾಲರ್‌ ಗೆ ಇಳಿಸಿದರೂ ಯಾವುದೇ ಖರೀದಿದಾರರು ಮುಂದೆ ಬಂದಿಲ್ಲ.

ಖತರ್‌ ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್‌ಗಾಗಿ ವಿಯಾಕಾಮ್-18 ಸಂಸ್ಥೆಯು 62 ಮಿಲಿಯನ್ ಡಾಲರ್ ಪಾವತಿಸಿತ್ತು. 2013ರಲ್ಲಿ ಸೋನಿ ಸ್ಪೋರ್ಟ್ಸ್ ಸಂಸ್ಥೆಯು 2014 ಮತ್ತು 2018ರ ವಿಶ್ವಕಪ್‌ ಗಳು ಸೇರಿದಂತೆ ಹಲವು ಟೂರ್ನಿಗಳ ಹಕ್ಕುಗಳಿಗೆ 90 ಮಿಲಿಯನ್ ಡಾಲರ್ ಖರ್ಚು ಮಾಡಿತ್ತು.

ಸ್ಟಾರ್ ಇಂಡಿಯಾ ಮತ್ತು ವಿಯಾಕಾಮ್-18 ವಿಲೀನದಿಂದ ಮಾರುಕಟ್ಟೆಯಲ್ಲಿ ಪೈಪೋಟಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಸೇರಿದಂತೆ ಹಲವು ಫುಟ್ಬಾಲ್ ಈವೆಂಟ್‌ ಗಳ ಹಕ್ಕುಗಳನ್ನು ಹೊಂದಿರುವ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಪ್ರಸಾರ ಹಕ್ಕು ಪಡೆಯುವುದರಿಂದ ದೂರ ಉಳಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ಪ್ರಮುಖ ಕಾರಣವಾಗಿದೆ.

ಪಂದ್ಯಗಳ ಸಮಯವೂ ಮತ್ತೊಂದು ಕಾರಣವಾಗಿದೆ. ಉದ್ಘಾಟನಾ ಪಂದ್ಯವು ಮೆಕ್ಸಿಕೊ ನಗರದಲ್ಲಿ ರಾತ್ರಿ 12:30ಕ್ಕೆ ಆರಂಭವಾಗಲಿದೆ. ಒಟ್ಟು 104 ಪಂದ್ಯಗಳಲ್ಲಿ ಕೇವಲ 14 ಪಂದ್ಯಗಳು ಮಾತ್ರ ಭಾರತದಲ್ಲಿ ಮಧ್ಯರಾತ್ರಿಯ ಮೊದಲು ಆರಂಭವಾಗಲಿವೆ.

ಜುಲೈ 19ರಂದು ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯವೂ ರಾತ್ರಿ 12:30ಕ್ಕೆ ಆರಂಭವಾಗಲಿದೆ.

2022ರಲ್ಲಿ ಖತರ್‌ ನಲ್ಲಿ ನಡೆದ ವಿಶ್ವಕಪ್‌ನಲ್ಲಿ 64 ಪಂದ್ಯಗಳ ಪೈಕಿ 44 ಪಂದ್ಯಗಳು ಮಧ್ಯರಾತ್ರಿಯ ಮೊದಲು ಆರಂಭವಾಗಿದ್ದವು. 2018ರಲ್ಲಿ ರಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಬಹುತೇಕ ಪಂದ್ಯಗಳು ಮಧ್ಯರಾತ್ರಿಯ ನಂತರ ಆರಂಭವಾಗಿದ್ದವು.

‘‘ವಿಶ್ವಕಪ್ ಸಮಯ ನಮಗೆ ತೊಡಕಾಗಿದೆ. ಅಮೆರಿಕದ ಸಮಯಗಳು ಭಾರತಕ್ಕೆ ಕಠಿಣವಾಗಿವೆ. ನೇರ ಪ್ರಸಾರಕ್ಕಿಂತ ಹೈಲೈಟ್ಸ್‌ಗಳಿಗೆ ಹೆಚ್ಚಿನ ವೀಕ್ಷಣೆ ಸಿಗುತ್ತದೆ’’ ಎಂದು ವಾರ್ನರ್ ಬ್ರದರ್ಸ್ ಡಿಸ್ಕವರಿಯ ಕ್ರೀಡಾ ವಿಭಾಗದ ಮುಖ್ಯಸ್ಥ ನೀರಜ್ ಝಾ ಹೇಳಿದ್ದಾರೆ.

More like this
Related

ಬಾಗಲಕೋಟೆ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ

ಬಾಗಲಕೋಟೆ : ಆಡಳಿತಾರೂಢ ಕಾಂಗ್ರೆಸ್ಗೆ ಪ್ರತಿಷ್ಠೆಯ ಕಣವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ...

ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚಿಸುತ್ತೇವೆ: ವಿಜಯ್ ನೇತೃತ್ವದ ಟಿವಿಕೆ ವಿಶ್ವಾಸ

ಚೆನ್ನೈ: ತಮಿಳುನಾಡಿನಲ್ಲಿ ಸೂಪರ್ ಸ್ಟಾರ್‌ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ...

ಪಂಚ ರಾಜ್ಯ ಚುನಾವಣಾ ಫಲಿತಾಂಶ | ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ರ‍್ಯಾಲಿ ನಿಷೇಧಿಸಿದ ಚುನಾವಣಾ ಆಯೋಗ

ಕೋಲ್ಕತ್ತಾ: ಪಂಚ ರಾಜ್ಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ....

ಕರ್ನಾಟಕ ಉಪ ಚುನಾವಣೆ: ಬಾಗಲಕೋಟೆಯಲ್ಲಿ ಕಾಂಗ್ರೆಸ್, ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ

Kerala Election Results 2026: ಬಹುಮತದ ಗಡಿ ದಾಟಿದ ಯುಡಿಎಫ್ ಮೈತ್ರಿಕೂಟಕೇರಳ...

Copying is disabled on Udupi Digital News.