ರಾಮನಗರ: ದೇವಸ್ಥಾನ ಎನ್ನುವುದು ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ, ಅದು ಇಡೀ ಸಮಾಜಕ್ಕೆ ಸೇರಿದ್ದು. ದೇವಾಲಯಕ್ಕೆ ಪ್ರವೇಶ ನಿರಾಕರಿಸಿ ಬೀಗ ಹಾಕಿರುವುದು ಖಂಡನೀಯ ಎಂದು ಸಚಿವ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ರಾಮನಗರದ ಕೂಟಗಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾರೋಹಳ್ಳಿ ತಾಲ್ಲೂಕಿನ ದೊಡ್ಡಕುರುಬರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿದರು.
ದೇವಸ್ಥಾನಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಇರಬೇಕು. ಯಾರೋ ಒಬ್ಬ ಕಿಡಿಗೇಡಿ ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದೆ. ಈ ಘಟನೆ ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ನಮ್ಮ ಶಾಸಕರೂ ಈಗಾಗಲೇ ಘಟನೆಯನ್ನು ಖಂಡಿಸಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.
ಮೆಟ್ರೋ ಅನುದಾನ ವಿಚಾರ: ಬಿಜೆಪಿ ನಾಯಕರಿಗೆ ಸಚಿವರ ತಿರುಗೇಟು
ಇನ್ನು ಮೆಟ್ರೋ ಅನುದಾನ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಗ್ವಾದದ ಬಗ್ಗೆ ಮಾತನಾಡಿದ ಬಾಲಕೃಷ್ಣ, ಜಟಾಪಟಿ ಮಾಡುತ್ತಿರುವುದು ಕಾರ್ಯಕರ್ತರೇ ಹೊರತು ಮುಖ್ಯಮಂತ್ರಿ ಅಥವಾ ಪ್ರಧಾನಿಯಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಪರಿಗಣಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ರಾಜ್ಯದ ಪರವಾಗಿ ಹೋರಾಡಬೇಕಾದ ವಿರೋಧ ಪಕ್ಷದ ನಾಯಕರು ಕೇಂದ್ರದ ಬಳಿ ತೆರಳಿ ಅನುದಾನ ಬಿಡುಗಡೆಗೆ ಒತ್ತಡ ಹೇರಲಿ. ಆದರೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯವರ ಬಳಿ ಮಾತನಾಡಲು ಸಿದ್ಧರಿಲ್ಲ ಎಂದು ವ್ಯಂಗ್ಯವಾಡಿದರು.
ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆ: ಸೋಮಣ್ಣಗೆ ಸವಾಲು
ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಆರೋಪಕ್ಕೂ ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಯಾರು ಹೇಳಿದ್ದಾರೆ? ಸೋಮಣ್ಣ ಅವರು ನನಗೆ ಜವಾಬ್ದಾರಿ ನೀಡಿದರೆ ನಾನೇ ಮುಂದೆ ನಿಂತು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುತ್ತೇನೆ. ಸುಮ್ಮನೆ ಕಾಟಾಚಾರದ ಹೇಳಿಕೆ ನೀಡಬಾರದು ಎಂದು ಹೇಳಿದರು.
ಸೋಮಣ್ಣ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ತೋರಿಸಲಿ. ಪತ್ರ ನೀಡಿದ 25 ದಿನಗಳಲ್ಲೇ ಭೂಸ್ವಾಧೀನ ಪೂರ್ಣಗೊಳಿಸಲು ಸಾಧ್ಯವೇ? ಆ ಪತ್ರವನ್ನು ನನಗೆ ನೀಡಿದರೆ ನಾನೇ ನೇತೃತ್ವ ವಹಿಸಿಕೊಂಡು ಕೆಲಸ ಮಾಡಿಸಿಕೊಡುತ್ತೇನೆ ಎಂದು ಸವಾಲು ಹಾಕಿದರು.
ಜೆಡಿಎಸ್ ಶಾಸಕರಿಗೆ 500 ಕೋಟಿ ಆಫರ್ ವಿಚಾರ: ಎ.ಟಿ. ಕೃಷ್ಣಪ್ಪ ವಿರುದ್ಧ ಲೇವಡಿ
ಇದೇ ವೇಳೆ ಜೆಡಿಎಸ್ ಶಾಸಕರಿಗೆ ಮುಖ್ಯಮಂತ್ರಿ 500 ಕೋಟಿ ರೂ. ಅನುದಾನದ ಆಫರ್ ನೀಡಿದ್ದಾರೆ ಎಂಬ ಎ.ಟಿ. ಕೃಷ್ಣಪ್ಪ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಅನುದಾನ ಕೇಳಿದ್ದರು. ಅದಕ್ಕೆ ಮುಖ್ಯಮಂತ್ರಿ ಅನುದಾನ ನೀಡುವುದಾಗಿ ಹೇಳಿದ್ದರು. ಈಗ ಅದನ್ನೇ ರಾಜಕೀಯ ವಿಚಾರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ತಮಗೆ ಅನುದಾನ ಬೇಡ, ಕುಮಾರಸ್ವಾಮಿ ಅವರಿಂದ ಮಾಡಿಸಿಕೊಳ್ಳುತ್ತೇನೆ ಎಂದು ಕೃಷ್ಣಪ್ಪ ಹೇಳಿದ್ದಾರೆ. ಅವರು ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಮಸಾಲೆ ಜಯರಾಮ್ ಮತ್ತು ಕೃಷ್ಣಪ್ಪ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.
ಮಸಾಲೆ ಜಯರಾಮ್ ಅವರಿಗೆ ಟಿಕೆಟ್ ಘೋಷಣೆಯಾದರೆ ಕೃಷ್ಣಪ್ಪ ನಮ್ಮ ಬಳಿಗೆ ಬರಬಹುದು. ಕಾಂಗ್ರೆಸ್‌ನವರು ಕರೆದರೂ ನಾನು ಹೋಗಲಿಲ್ಲ ಎಂದು ತೋರಿಸಿಕೊಳ್ಳಲು ಹಾಗೂ ಕುಮಾರಸ್ವಾಮಿ ಅವರಿಂದ ಮೆಚ್ಚುಗೆ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೆಚ್.ಸಿ. ಬಾಲಕೃಷ್ಣ ಲೇವಡಿ ಮಾಡಿದರು.




