Friday, July 3, 2026

ಬೆಂಗಳೂರು ಕ್ವಾರಿ ದುರಂತ: ಮೃತ ಕಾರ್ಮಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ ಸಿಎಂ ಶಿವಕುಮಾರ್

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಮಡಪಟ್ಟಣದ ಕಲ್ಲು ಕ್ರಷರ್ ಘಟಕದಲ್ಲಿ ಬಂಡೆ ಕುಸಿದು ಏಳು ಕಾರ್ಮಿಕರು ಮೃತಪಟ್ಟಿರುವ ದುರಂತಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಈ ದುರಂತಕ್ಕೆ ಅಕ್ರಮ ಕ್ವಾರಿ ಚಟುವಟಿಕೆಗಳೇ ಕಾರಣ ಎಂದು ಆರೋಪಿಸಿ, ಸಂಬಂಧಿತ ಇಲಾಖೆ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುರುವಾರ ಬೆಳಗ್ಗೆ ಬೆಂಗಳೂರು ದಕ್ಷಿಣ ತಾಲೂಕಿನ ಮಡಪಟ್ಟಣ ಗ್ರಾಮದ ಕಾವೇರಿ ಕ್ರಷರ್ ಘಟಕದಲ್ಲಿ ಭಾರೀ ಬಂಡೆ ಕುಸಿದ ಪರಿಣಾಮ ಬಿಹಾರ ಹಾಗೂ ಉತ್ತರ ಕರ್ನಾಟಕ ಮೂಲದ ಕನಿಷ್ಠ ಏಳು ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿಎಂ ಸಂತಾಪ

ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,

“ಬೆಂಗಳೂರು ದಕ್ಷಿಣ ತಾಲೂಕಿನ ಮಡಪಟ್ಟಣದ ಕ್ರಷರ್ ಘಟಕದಲ್ಲಿ ಬಂಡೆ ಕುಸಿದು ಏಳು ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ತಿಳಿಸಿದ್ದಾರೆ.

“ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ಮತ್ತು ರಕ್ಷಣೆ ಕ್ವಾರಿ ಮಾಲೀಕರ ಜವಾಬ್ದಾರಿಯಾಗಿದೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ,” ಎಂದು ಅವರು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದಲೇ ದುರಂತ: ಸೋಮಶೇಖರ್

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಈ ದುರಂತಕ್ಕೆ ಅಕ್ರಮ ಗಣಿಗಾರಿಕೆಯೇ ಕಾರಣ ಎಂದು ಆರೋಪಿಸಿದರು.

“ಈ ಪ್ರದೇಶದಲ್ಲಿ ಅಕ್ರಮ ಕ್ವಾರಿ ಬಗ್ಗೆ ನಾನು ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದೆ. ಗರ್ಭಿಣಿ ಚಿರತೆ ಸಾವನ್ನಪ್ಪಿದ ಸಂದರ್ಭದಲ್ಲೂ ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನು ಪ್ರಶ್ನಿಸಿದ್ದೆ. ವಿಧಾನಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಿದ್ದೆ,” ಎಂದು ಹೇಳಿದರು.

ಅವರ ಪ್ರಕಾರ, ಸ್ಫೋಟ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದ ಸುಮಾರು 10 ಕಾರ್ಮಿಕರ ಮೇಲೆ ಮೇಲ್ಭಾಗದಲ್ಲಿದ್ದ ಮತ್ತೊಂದು ಕ್ವಾರಿಯಿಂದ ಭಾರೀ ಬಂಡೆ ಹಾಗೂ ಹಿಟಾಚಿ ಯಂತ್ರ ಕುಸಿದು ಬಿದ್ದಿದೆ.

“ಹತ್ತು ಕಾರ್ಮಿಕರಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಕೂಡ ಮೃತಪಟ್ಟಿರುವ ಮಾಹಿತಿ ಬರುತ್ತಿದೆ,” ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು

ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ಸಹಕಾರವಿದೆ ಎಂದು ಆರೋಪಿಸಿದ ಸೋಮಶೇಖರ್,

“ಇದು ಸಂಪೂರ್ಣ ಅಕ್ರಮ ವ್ಯವಹಾರ. ಈ ಬಗ್ಗೆ ನಾನು ವಿಧಾನಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಕ್ವಾರಿ ಮಾಲೀಕರ ಸಭೆ ಕರೆದು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದೆ. ಅಕ್ರಮ ಸ್ಫೋಟ ನಡೆಸಬಾರದು ಎಂದು ಎಚ್ಚರಿಸಿದ್ದೆ. ಆದರೆ ಈ ವಿಷಯವನ್ನು ಮುಚ್ಚಿಹಾಕಲಾಯಿತು,” ಎಂದು ಆರೋಪಿಸಿದರು.

ಈ ಹಿಂದೆ ಇದೇ ಪ್ರದೇಶದಲ್ಲಿ ಚಿರತೆ ಸಾವಿನ ಪ್ರಕರಣವೂ ಮುಚ್ಚಿಹಾಕಲಾಗಿದೆ ಎಂದು ಅವರು ದೂರಿದರು.

“ಈ ಪ್ರಕರಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನೂ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಸೇರಿಸಬೇಕು. ಅಧಿಕಾರಿಗಳನ್ನು ಆರೋಪಿ ಸಂಖ್ಯೆ 1, 2 ಎಂದು ದಾಖಲಿಸಿದಾಗ ಮಾತ್ರ ಇಂತಹ ದುರಂತಗಳು ನಿಲ್ಲುತ್ತವೆ,” ಎಂದು ಆಗ್ರಹಿಸಿದರು.

ಕ್ವಾರಿ ಮಾಲೀಕರ ಬಂಧನಕ್ಕೆ ಒತ್ತಾಯ

ಅಪಘಾತ ಸಂಭವಿಸಿದ ಕ್ವಾರಿ ಕರ್ನಾಟಕ ಸ್ಟೋನ್ ಕ್ವಾರಿಯಿಂಗ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರ ಕುಟುಂಬಕ್ಕೆ ಸೇರಿದೆ ಎಂದು ಆರೋಪಿಸಿದ ಸೋಮಶೇಖರ್,

“ಅವರು ಪ್ರಭಾವಿ ವ್ಯಕ್ತಿಗಳು. ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಬಹುದು. ಯಾರೇ ಆಗಿರಲಿ, ಅಕ್ರಮ ನಡೆದಿದ್ದರೆ ತಕ್ಷಣ ಬಂಧಿಸಬೇಕು. ಮೃತರ ಕುಟುಂಬಗಳಿಗೆ ನ್ಯಾಯ ಸಿಗಬೇಕು,” ಎಂದು ಹೇಳಿದರು.

“ಸರ್ಕಾರದ ಪರಿಹಾರಕ್ಕಿಂತ ಮುಖ್ಯವಾಗಿ ಅಕ್ರಮ ಹಾಗೂ ನಿರ್ಲಕ್ಷ್ಯಪೂರ್ಣ ಗಣಿಗಾರಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ವಾರಿ ಮಾಲೀಕರನ್ನು ಬಂಧಿಸಿ, ಪರಿಹಾರದ ಮೊತ್ತವನ್ನೂ ಅವರಿಂದಲೇ ವಸೂಲಿ ಮಾಡಬೇಕು,” ಎಂದು ಒತ್ತಾಯಿಸಿದರು.

ವರದಿ ಪಡೆದು ಕ್ರಮ: ಪರಮೇಶ್ವರ್

ಘಟನೆ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್,

“ಘಟನೆಯ ಸಂಪೂರ್ಣ ವರದಿ ಪಡೆದುಕೊಳ್ಳುತ್ತೇನೆ. ನನ್ನ ಇಲಾಖೆಗೆ ಸಂಬಂಧಿಸಿದ ವಿಷಯಗಳಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಕ್ವಾರಿ ಪರವಾನಗಿಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡುತ್ತವೆ. ರಾಜ್ಯದಲ್ಲಿ ಅನೇಕ ಅಕ್ರಮ ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿರುವ ಎಲ್ಲ ಅಕ್ರಮ ಕ್ವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

More like this
Related

ಗಾಂಜಾ ಸೇವನೆ ಆರೋಪ: ಯುವಕನ ಬಂಧನ

ಮಂಗಳೂರು: ನಗರದ ಹೊಯ್ಗೆ ಬಜಾರ್ ಸಮೀಪ ಗಾಂಜಾ ಸೇವನೆ ಮಾಡಿದ ಆರೋಪದ...

ಇಡಿ ಮೇಲಿನ ದಾಳಿ ಪ್ರಕರಣ: ಸಿಬಿಐ ತನಿಖೆಗೆ ಕೇರಳ ಹೈಕೋರ್ಟ್ ನಿರಾಕರಣೆ

ಕೊಚ್ಚಿ: ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಪುತ್ರಿಯ ಬಾಡಿಗೆ...

ರಾಮನಗರದಲ್ಲಿ ಎಸ್‌ಐಆರ್‌ ನಿಯಮ ಉಲ್ಲಂಘನೆ ಆರೋಪ: ಕುಮಾರಸ್ವಾಮಿ ಆರೋಪ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ವಿಶೇಷ ಮತದಾರರ ಪಟ್ಟಿಯ...

ಭಾರತೀಯ ಕಿರಿಯ ಮಹಿಳಾ ಹಾಕಿ ತಂಡ ಯುಕೆ ಪ್ರವಾಸಕ್ಕೆ ಪ್ರಯಾಣ; ಜುಲೈ 5ರಿಂದ ಏಳು ಪಂದ್ಯಗಳು

ಬೆಂಗಳೂರು: ಭಾರತೀಯ ಕಿರಿಯ ಮಹಿಳಾ ಹಾಕಿ ತಂಡವು 2026ರ ಜುಲೈ 5ರಿಂದ...

Copying is disabled on Udupi Digital News.