Wednesday, July 1, 2026

ಹಾವೇರಿಯಲ್ಲಿ ಕಾರ ಹುಣ್ಣಿಮೆ ವೇಳೆ ಘರ್ಷಣೆ: 8ಕ್ಕೂ ಹೆಚ್ಚು ಮಂದಿಗೆ ಗಾಯ, 26 ಜನರ ವಿರುದ್ಧ ಎಫ್‌ಐಆರ್

ಹಾವೇರಿ: ಕಾರ ಹುಣ್ಣಿಮೆ ಅಂಗವಾಗಿ ಹೋರಿ ಓಡಿಸುವ ಸಂಪ್ರದಾಯದ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ಬಳಿಕ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಕೆಲವರು ಹರಿತವಾದ ಆಯುಧಗಳನ್ನು ಬಳಸಿದರೆಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಎಂಟುಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 26 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘರ್ಷಣೆಯ ಬಳಿಕ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರ ಹುಣ್ಣಿಮೆ ಹಬ್ಬದ ಅಂಗವಾಗಿ ಅಲಂಕೃತ ಎತ್ತುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯುವ ವೇಳೆ ಮಸೀದಿ ಸಮೀಪ ಪಟಾಕಿ ಸಿಡಿಸಿದ ವಿಚಾರಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ಆರಂಭವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಅದು ಎರಡು ಗುಂಪುಗಳ ನಡುವಿನ ಘರ್ಷಣೆಯಾಗಿ ಮಾರ್ಪಟ್ಟಿದೆ.

ಕಾರ ಹುಣ್ಣಿಮೆ ಉತ್ತರ ಕರ್ನಾಟಕ ಭಾಗದಲ್ಲಿ ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಸಾಂಪ್ರದಾಯಿಕ ಕೃಷಿ ಹಬ್ಬವಾಗಿದ್ದು, ರೈತ ಸಮುದಾಯಕ್ಕೆ ವಿಶೇಷ ಮಹತ್ವ ಹೊಂದಿದೆ.

“ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಘಟನೆಯ ನಿಖರ ಮಾಹಿತಿ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್. ಅಶೋಕ್ ವಾಗ್ದಾಳಿ

ಈ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಹಿಂದೂಗಳ ಹಬ್ಬ-ಹರಿದಿನಗಳೇ ಏಕೆ ಪದೇಪದೇ ಗುರಿಯಾಗುತ್ತಿವೆ ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ. ಮತಾಂಧ ಕಿಡಿಗೇಡಿಗಳಿಗೆ ಕಾಂಗ್ರೆಸ್ ಸರ್ಕಾರ ಆನೆಬಲ ನೀಡಿದಂತಾಗಿದೆ ಎನ್ನುವುದಕ್ಕೆ ಹಾವೇರಿಯ ಘಟನೆ ಸಾಕ್ಷಿಯಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಓಲೈಕೆ ಮತ್ತು ತುಷ್ಟೀಕರಣ ರಾಜಕಾರಣ ಎಲ್ಲಿಗೆ ತಲುಪಿದೆ ಎಂಬುದನ್ನು ಒಮ್ಮೆ ಗಮನಿಸಬೇಕು,” ಎಂದು ಅವರು ಹೇಳಿದ್ದಾರೆ.

ಅಶೋಕ್ ಅವರು ಮುಂದುವರಿದು, “ನೆಮ್ಮದಿಯಾಗಿ ಗಣೇಶೋತ್ಸವ ಆಚರಿಸಲು ಸಾಧ್ಯವಿಲ್ಲ. ದುರ್ಗಾ ಪೂಜೆಗೆ ಪೆಂಡಾಲ್ ಹಾಕಲು ಸಾಧ್ಯವಿಲ್ಲ. ‘ಜೈ ಶ್ರೀರಾಮ್’ ಎಂದರೆ ಪೊಲೀಸರು ಅಪರಾಧಿಗಳಂತೆ ವರ್ತಿಸುತ್ತಾರೆ. ಹನುಮಾನ್ ಚಾಲೀಸಾ ಅಥವಾ ಭಜನೆ ಮಾಡಿದರೆ ಮತಾಂಧರು ಹಲ್ಲೆ ನಡೆಸುತ್ತಾರೆ. ಈಗ ನಮ್ಮ ಕೃಷಿ ಸಂಸ್ಕೃತಿಯ ಭಾಗವಾದ ಕಾರ ಹುಣ್ಣಿಮೆ ಸಂಪ್ರದಾಯಕ್ಕೂ ಧಕ್ಕೆಯಾಗಿದೆ. ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಕಾರ ಹುಣ್ಣಿಮೆ ಆಚರಣೆಯ ವೇಳೆ ನಡೆದ ಈ ಘಟನೆ ಅತ್ಯಂತ ಖಂಡನೀಯ,” ಎಂದು ಹೇಳಿದ್ದಾರೆ.

More like this
Related

ರಾಮ ಮಂದಿರ ಹುಂಡಿ ಹಗರಣ ದೇಶಕ್ಕೆ ನೋವು ತಂದಿದೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಅಯೋಧ್ಯೆಯ ರಾಮ ಮಂದಿರ ಹುಂಡಿ ಹಗರಣದ ವಿಚಾರ ದೇಶದ ಜನತೆ,...

ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆ: ಸೂಕ್ತ ಕ್ರಮಕ್ಕೆ ಹಬೀಬ್ ಆಲಿ ಆಗ್ರಹ

ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ ನಾಲ್ಕನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ...

ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ : ಬಿ.ಎಲ್.ಓ ಗಳ ಮನೆ ಮನೆ ಭೇಟಿ – ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಉಡುಪಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ...

ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ;ಪ್ರಕರಣ ದಾಖಲು

ಉಡುಪಿ: ಉಡುಪಿ ಜಿಲ್ಲೆಯ ಶಂಕರಪುರದ ಸುಭಾಷ್ ನಗರದ ಇಂಡಿಯನ್ ಆಯಿಲ್ ಫಿಲ್ಲಿಂಗ್...

Copying is disabled on Udupi Digital News.