Wednesday, October 7, 2026

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಎಂ, ಡಿಸಿಎಂ ಸನ್ಮಾನ: ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ, ₹1 ಕೋಟಿ ನಗದು ಬಹುಮಾನ

ಬೆಂಗಳೂರು: 2026ರ ಏಷ್ಯನ್ ಗೇಮ್ಸ್‌ನಲ್ಲಿ ದೇಶ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದ ರಾಜ್ಯದ ಪದಕ ವಿಜೇತ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಜಿ. ಪರಮೇಶ್ವರ ಮಂಗಳವಾರ ವಿಧಾನಸೌಧದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಮೋಹಿತ್ ಎಚ್.ಎಸ್., ಅದಿತಿ ಅಶೋಕ್, ಎಂ.ಆರ್. ಪೂವಮ್ಮ, ಆಯುಷ್ ಶೆಟ್ಟಿ, ತಿಲೋತ್ತಮಾ ಸೇನ್, ಶ್ರೇಯಾಂಕಾ ಪಾಟೀಲ್ ಹಾಗೂ ಸ್ನೇಹಾ ಎಸ್.ಎಸ್. ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ ಸಿಎಂ ಶಿವಕುಮಾರ್, ಅವರ ಪರಿಶ್ರಮ, ದೃಢಸಂಕಲ್ಪ ಮತ್ತು ಕ್ರೀಡೆಯ ಮೇಲಿನ ಬದ್ಧತೆ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.

ಡಿಸಿಎಂ ಪರಮೇಶ್ವರ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ನೆರವು, ಗುಣಮಟ್ಟದ ತರಬೇತಿ, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಿದ್ಧತೆ ಹಾಗೂ ಉದ್ಯೋಗಾವಕಾಶಗಳ ಮೂಲಕ ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡುವ ನಗದು ಬಹುಮಾನವನ್ನು ಸರ್ಕಾರ ಹೆಚ್ಚಿಸಿದೆ. ಚಿನ್ನದ ಪದಕಕ್ಕೆ ಈ ಹಿಂದೆ ₹35 ಲಕ್ಷ ನೀಡಲಾಗುತ್ತಿದ್ದು, ಇದೀಗ ₹1 ಕೋಟಿ ನೀಡಲಾಗುತ್ತದೆ. ಬೆಳ್ಳಿಗೆ ₹25 ಲಕ್ಷದಿಂದ ₹75 ಲಕ್ಷ ಹಾಗೂ ಕಂಚಿಗೆ ₹15 ಲಕ್ಷದಿಂದ ₹50 ಲಕ್ಷಕ್ಕೆ ಬಹುಮಾನ ಹೆಚ್ಚಿಸಲಾಗಿದೆ.

ಈ ಬಾರಿ ಪದಕ ಗೆದ್ದ ಎಂಟು ಕರ್ನಾಟಕದ ಕ್ರೀಡಾಪಟುಗಳಿಗೆ ಪರಿಷ್ಕೃತ ಬಹುಮಾನ ಮೊತ್ತ ದೊರೆಯಲಿದೆ. ಇದರ ಜೊತೆಗೆ ಪ್ರತಿಯೊಬ್ಬರಿಗೂ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಹೆಚ್ಚುವರಿಯಾಗಿ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.

ಅಲ್ಲದೆ, ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದು ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಎಲ್ಲ 20 ಕ್ರೀಡಾಪಟುಗಳಿಗೂ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ.

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರಿ ಸೇವೆಯ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಆಯ್ಕೆ ಸಮಿತಿ ಮೂಲಕ ಅರ್ಹ ಹಾಗೂ ಆಸಕ್ತ ಕ್ರೀಡಾಪಟುಗಳನ್ನು ನೇಮಕ ಮಾಡಲಾಗುವುದು ಎಂದು ಪರಮೇಶ್ವರ ತಿಳಿಸಿದರು.

‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಮತ್ತು ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿಗೆ ಆಯ್ಕೆ ಮಾಡಲಾಗಿದೆ. ಒಲಿಂಪಿಕ್ಸ್ ಸಿದ್ಧತೆ, ತರಬೇತಿ ಸೇರಿದಂತೆ ಅಗತ್ಯ ವೆಚ್ಚಗಳಿಗೆ ಪ್ರತಿಯೊಬ್ಬರಿಗೂ ₹10 ಲಕ್ಷ ನೆರವು ನೀಡಲಾಗುತ್ತದೆ.

ಇದಲ್ಲದೆ, ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಗ್ರೂಪ್-ಎ, ಬಿ, ಸಿ ಮತ್ತು ಡಿ ಸೇರಿದಂತೆ ಎಲ್ಲ ಹಂತಗಳಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಕುರಿತು ಅಕ್ಟೋಬರ್ 3ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಪರಮೇಶ್ವರ ಹೇಳಿದರು.

More like this
Related

ಉಡುಪಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಫಾರಂ -7 ದುರ್ಬಳಕೆ ತಡೆಯುವಂತೆ ಮುಸ್ಲಿಮ್ ಒಕ್ಕೂಟ ಮನವಿ

ಉಡುಪಿ: ಕರ್ನಾಟಕ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ...

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಕರ್ನಾಟಕದ ಭರ್ಜರಿ ಬಹುಮಾನ: ಚಿನ್ನಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ

ಬೆಂಗಳೂರು: 2026ರ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ...

ತಮಿಳುನಾಡಿನಲ್ಲಿ ಚಿನ್ನದ ಸಾಲದ ಮಿತಿ ಹೆಚ್ಚಳ: ಪ್ರತಿ ಗ್ರಾಂಗೆ ₹10 ಸಾವಿರ; ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಯೋಜನೆ ಬೆನ್ನಲ್ಲೇ ನಿರ್ಧಾರ

ಚೆನ್ನೈ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಾಂಸ್ಥಿಕ ಸಾಲ ಸುಲಭವಾಗಿ ದೊರೆಯುವಂತೆ ಮಾಡಲು...

Copying is disabled on Udupi Digital News.