ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಬು ಭಖ್ರು ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಪ್ರವಾಸೋದ್ಯಮ ಹಾಗೂ ಇಂದನ ಸಚಿವ ಕೆ.ಜೆ. ಜಾರ್ಜ್, ಗೃಹ ಸಚಿವ ಪ್ರಿಯಂಕ್ ಖರ್ಗೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್ ಶಾಸಕರು, ರಾಜ್ಯಸಭೆ ಮತ್ತು ಲೋಕಸಭೆ ಸಂಸದರು, ಗಣ್ಯರು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳು, ಉಪಸ್ಥಿತರಿದ್ದರು.
ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲೆ: ಸುಧಾ ಯಾದವ್ ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ಅಲಂಕರಿಸಿದ್ದು, ಈ ಹಿಂದೆ 1999ರಲ್ಲಿ ವಿ.ಎಸ್. ರಮಾದೇವಿ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು.
ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ: ಇವರ ಪತಿ ಸುಖಬೀರ್ ಸಿಂಗ್ ಯಾದವ್ ಗಡಿ ಭದ್ರತಾ ಪಡೆಯ (BSF) ಉಪ ಕಮಾಂಡೆಂಟ್ ಆಗಿದ್ದು, 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.
ಉನ್ನತ ಶಿಕ್ಷಣ ಹಾಗೂ ಸಾಧನೆ: ಸುಧಾ ಯಾದವ್ ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಮುಗಿಸಿ ಚಿನ್ನದ ಪದಕ ಗಳಿಸಿದ್ದು, ಪಿಎಚ್ಡಿ ಪದವೀಧರೆಯಾಗಿದ್ದಾರೆ.
ರಾಜಕೀಯ ಅನುಭವ: 1999ರಿಂದ 2004ರವರೆಗೆ ಹರ್ಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದ ಸುಧಾ ಯಾದವ್ ,ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆಯಾದ 2ನೇ ಮಹಿಳೆ (ಸುಷ್ಮಾ ಸ್ವರಾಜ್ ಅವರ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಹಾಗೂ ಕೇಂದ್ರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.




