ಉಡುಪಿ: ಸಾರಿಗೆ ನೌಕರರ ಮುಷ್ಕರದ ಎಚ್ಚರಿಕೆ ನಡುವೆಯೇ ಸರ್ಕಾರದ ನಿಲುವು ಸ್ಪಷ್ಟಪಡಿಸಿರುವ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, 26 ತಿಂಗಳ ಬಾಕಿ ವೇತನ ನೀಡುವುದರ ಜೊತೆಗೆ 12.5 ಶೇಕಡಾ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, “ವೇತನ ಪರಿಷ್ಕರಣೆ ಕುರಿತು ಸರ್ಕಾರದ ನಿಲುವನ್ನು ಈಗಾಗಲೇ ತಿಳಿಸಿದ್ದೇವೆ. ನೌಕರರು ಏನು ತೀರ್ಮಾನ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಮುಷ್ಕರದ ಮಾಹಿತಿ ಬಂದಿದೆ, ನೋಡೋಣ,” ಎಂದರು.
ಹಿಂದೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗುತ್ತಿತ್ತು. 2020ರಲ್ಲಿ ಆಗಬೇಕಿದ್ದ ಪರಿಷ್ಕರಣೆ ಕೊರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ. ಬಳಿಕ 2023ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 15 ಶೇಕಡಾ ವೇತನ ಪರಿಷ್ಕರಣೆ ಮಾಡಿ, ಏಪ್ರಿಲ್ 1, 2023ರಿಂದ ಜಾರಿಗೆ ತಂದಿತ್ತು ಎಂದು ವಿವರಿಸಿದರು.
ಸಾರಿಗೆ ನೌಕರರು ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಲೇಬೇಕು ಎಂದು ಬೇಡಿಕೆ ಇಟ್ಟಿದ್ದು, ಈ ಕುರಿತು ಅನೇಕ ಬಾರಿ ಚರ್ಚೆ ನಡೆದಿದೆ. ಹಿಂದಿನ ಸರ್ಕಾರವೂ ಕೊರೊನಾ ಸಂಕಷ್ಟದ ನಡುವೆಯೂ ಸಾಕಷ್ಟು ನೆರವು ನೀಡಿದೆ ಎಂದು ಹೇಳಿದರು.
ಖಾಸಗಿ ಬಸ್ಗಳ 20 ಶೇಕಡಾ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಪರ್ಮಿಟ್ ಹೊಂದಿರುವ ಬಸ್ಗಳು ಸ್ವಯಂಪ್ರೇರಿತವಾಗಿ ದರ ಏರಿಕೆ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಹೈಎಂಡ್ ಬಸ್ಗಳು ಮಾತ್ರ ದರ ಏರಿಕೆ ಮಾಡುತ್ತಿವೆ. ಅವು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯಕ್ಕೆ ಸರ್ಕಾರಿ ಬಸ್ ದರ ಏರಿಕೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ರಾಮಲಿಂಗ ರೆಡ್ಡಿ ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 130-140 ಡಾಲರ್ ಇದ್ದರೂ ಸಬ್ಸಿಡಿ ಮೂಲಕ ಕಡಿಮೆ ದರದಲ್ಲಿ ಇಂಧನ ನೀಡಲಾಗುತ್ತಿತ್ತು ಎಂದು ಹೇಳಿದರು.
ಈಗ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಗ್ರಾಹಕರಿಗೆ ಅದರ ಲಾಭ ಸಿಗುತ್ತಿಲ್ಲ. ಮೋದಿ ಸರ್ಕಾರ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸಬ್ಸಿಡಿಗಳನ್ನು ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಮತ್ತೆ ಸಬ್ಸಿಡಿ ನೀಡಿ ಜನರಿಗೆ ಕಡಿಮೆ ದರದಲ್ಲಿ ಇಂಧನ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಸಚಿವ ಸಂಪುಟ ರೀಶಫಲ್ ಆಗಬಹುದು. ಆದರೆ ನಾಯಕತ್ವ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ,” ಎಂದರು.
ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿ ಫ್ಲೆಕ್ಸ್ ಹಾಕಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಆ ವಿಚಾರ ನನಗೆ ಗೊತ್ತಿಲ್ಲ,” ಎಂದು ಹೇಳಿದರು.




