Wednesday, November 18, 2026

ರಾಜ್ಯದ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್!

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಹಾಸನ, ಬಾಗಲಕೋಟೆ, ಬೀದರ್, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಮುಂಜಾನೆಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದ್ದು, ಆಸ್ತಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು, ನಗದು ಮತ್ತು ಚಿನ್ನಾಭರಣಗಳ ಪರಿಶೀಲನೆ ನಡೆಸಲಾಗುತ್ತಿದೆ.

ಜಿಲ್ಲಾವಾರು ಲೋಕಾಯುಕ್ತ ದಾಳಿಯ ವಿವರ

ಹಾಸನ:
ಅರಣ್ಯ ಇಲಾಖೆಯ ಅಧಿಕಾರಿ ಹೇಮಂತ್ ಕುಮಾರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ನಂದಿನಿ ಹಾಗೂ ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಚಿಕ್ಕ ಹೊನ್ನೇನಹಳ್ಳಿಯಲ್ಲಿರುವ ನಿವಾಸ, ಸಕಲೇಶಪುರದ ಬಾಡಿಗೆ ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಮಾವನ ಮನೆ ಹಾಗೂ ಆಪ್ತ ಗುತ್ತಿಗೆದಾರ ಹರೀಶ್ ಅವರ ಕುವೆಂಪು ನಗರದ ನಿವಾಸದಲ್ಲೂ ಶೋಧ ನಡೆಸಲಾಗಿದೆ.

ಬಾಗಲಕೋಟೆ:
ಜಮಖಂಡಿ ತಾಲೂಕು ಪಂಚಾಯತ್‌ನ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ ಸಂಜೀವ ಅಲಿಯಾಸ್ ಸಂಜು ಹಿಪ್ಪರಗಿ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ಹಿಂದೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಯ ಮನೆ ಮತ್ತು ಕುಟುಂಬದವರ ನಿವಾಸದಲ್ಲಿ ಪರಿಶೀಲನೆ ನಡೆದಿದೆ. ಜಮಖಂಡಿಯ ವಿಜಯನಗರ ಬಡಾವಣೆಯ ಮನೆ ಹಾಗೂ ಮೈಗೂರು ರಸ್ತೆಯಲ್ಲಿರುವ ತಂದೆಯ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ಮಹಾಲಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ಬೀದರ್:
ಬೀದರ್ ನಗರದ ಬ್ರಿಮ್ಸ್ (BRIMS) ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ರಾಜ್‌ಕುಮಾರ್ ಮಾಳಗೆ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆದಿದೆ. ಮನೆ, ಕಾಲೇಜು ಕಚೇರಿ ಹಾಗೂ ಶೆಡ್ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಚಿತ್ರದುರ್ಗ:
ಸಶಸ್ತ್ರ ಮೀಸಲು ಪಡೆಯ (DAR) ಅಧಿಕಾರಿ ರವೀಂದ್ರ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ತುಮಕೂರು:
ತೂಕ ಮತ್ತು ಅಳತೆ ಇಲಾಖೆಯ ಇನ್ಸ್‌ಪೆಕ್ಟರ್‌ಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಅಧಿಕಾರಿಗಳ ಆಸ್ತಿ ವಿವರಗಳು ಮತ್ತು ದಾಖಲೆಗಳನ್ನು ಲೋಕಾಯುಕ್ತ ತಂಡ ಪರಿಶೀಲಿಸುತ್ತಿದೆ.

ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದಿರುವ ಈ ಕಾರ್ಯಾಚರಣೆಯಿಂದ ಸರ್ಕಾರಿ ಅಧಿಕಾರಿಗಳ ವಲಯದಲ್ಲಿ ಆತಂಕ ಮೂಡಿದೆ. ದಾಳಿಯ ವೇಳೆ ಪತ್ತೆಯಾಗಿರುವ ಆಸ್ತಿ ಹಾಗೂ ದಾಖಲೆಗಳ ಸಂಪೂರ್ಣ ವಿವರಗಳು ಲೋಕಾಯುಕ್ತ ತನಿಖೆಯ ಬಳಿಕ ತಿಳಿದುಬರಬೇಕಿದೆ.

More like this
Related

ಬ್ಯಾಟರ್‌ಗಳಿಗಿಂತ ಬೌಲರ್‌ಗಳಿಗೇ ಗಾಳಿಯ ಕಾಟ: ನ್ಯೂಜಿಲೆಂಡ್‌ನಲ್ಲಿ ಟೀಂ ಇಂಡಿಯಾಗೆ ಹೊಸ ಸವಾಲು

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನವೆಂಬರ್ 19ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಭಾರತ...

ಕುಲ್ಗಾಮ್ ಎನ್‌ಕೌಂಟರ್: ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ...

ನ. 22: ಉಡುಪಿ ಧರ್ಮಪ್ರಾಂತ್ಯದ ಪರಮ ಪ್ರಸಾದ ಮೆರವಣಿಗೆ

ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ...

ಒಡಿಶಾ: ಆತ್ಮಹತ್ಯೆಗೆ ಯತ್ನಿಸಿ ಬೆಂಕಿ ಹಚ್ಚಿಕೊಂಡ ಯುವತಿಗೆ ಗಂಭೀರ ಗಾಯ; ಮಾಜಿ ಪ್ರಿಯಕರ ಪೊಲೀಸ್ ವಶಕ್ಕೆ

ಭುವನೇಶ್ವರ: ಒಡಿಶಾದ ಭುವನೇಶ್ವರದ ಇನ್ಫೋಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 21 ವರ್ಷದ...

Copying is disabled on Udupi Digital News.