ಕಿರುಕುಳ ನೀಡಿದವರ ವಿರುದ್ಧ ಪ್ರತಿರೋಧ ತೋರಿದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಮನೆಗೆ ನುಗ್ಗಿ ಹಲ್ಲೆ; ಆರೋಪಿಗಳ ಬಂಧನಕ್ಕೆ ಪೊಲೀಸರ ಬಲೆ
ಚಿಕ್ಕಬಳ್ಳಾಪುರ: ಈವ್ ಟೀಸಿಂಗ್ (ಮಹಿಳೆಯರಿಗೆ ಕಿರುಕುಳ) ವಿರುದ್ಧ ಧೈರ್ಯವಾಗಿ ಪ್ರಶ್ನೆ ಎತ್ತಿದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಗುಂಪೊಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಎಸ್. ಮೇಘನಾ ಎಂದು ಗುರುತಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು ಬಳಿಕ ಹೆಚ್ಚಿನ ಚಿಕಿತ್ಸೆಗೆ ಚಿಂತಾಮಣಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪೊಲೀಸರು ಹಾಗೂ ವಿದ್ಯಾರ್ಥಿನಿ ನೀಡಿರುವ ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಸುಮಾರು 4.30 ಗಂಟೆಗೆ ಈ ಘಟನೆಗೆ ಕಾರಣವಾದ ಮೊದಲ ಘಟನೆ ನಡೆದಿದೆ. ಚಿಂತಾಮಣಿಯ ಸ್ಥಳೀಯ ಪ್ರೌಢಶಾಲೆಯಲ್ಲಿ ನೃತ್ಯ ತರಬೇತಿ ನೀಡುವ ಮೇಘನಾ, ಶಾಲೆ ಮುಗಿದ ಬಳಿಕ ತಮ್ಮ ತಂಗಿಯರನ್ನು ಕರೆತರಲು ದ್ವಿಚಕ್ರ ವಾಹನದತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯನ್ನು ವಿವರಿಸಿದ ಮೇಘನಾ, “ನಾನು ನನ್ನ ತಂಗಿಯರನ್ನು ಕರೆತರಲು ಶಾಲೆಯತ್ತ ಹೋಗುತ್ತಿದ್ದೆ. ಮದ್ಯದ ಅಮಲಿನಲ್ಲಿದ್ದಂತೆ ಕಂಡ ಇಬ್ಬರು ವ್ಯಕ್ತಿಗಳು ನನ್ನನ್ನು ಕರೆಯಲು ಆರಂಭಿಸಿದರು. ಯಾಕೆ ಕರೆಯುತ್ತಿದ್ದೀರಿ ಎಂದು ಕೇಳಿದಾಗ, ಅವರು ಅಸಭ್ಯವಾಗಿ ಮುಟ್ಟಲು ಪ್ರಯತ್ನಿಸಿದರು ಮತ್ತು ನನ್ನತ್ತ ಬರುತ್ತಲೇ ಇದ್ದರು. ನಾನು ಅವರನ್ನು ತಳ್ಳಿದರೂ ಅವರು ಮತ್ತೆ ಮುಂದುವರಿದರು. ಆತ್ಮರಕ್ಷಣೆಗಾಗಿ ನಾನು ಅವರಿಗೆ ಕಪಾಳಮೋಕ್ಷ ಮಾಡಿದೆ,” ಎಂದು ಹೇಳಿದ್ದಾರೆ.
ಮನೆಗೆ ಮರಳಿದ ಬಳಿಕ ಮೇಘನಾ ಈ ವಿಚಾರವನ್ನು ತಮ್ಮ ತಾಯಿಗೆ ತಿಳಿಸಿದ್ದಾರೆ.
ದೂರಿನ ಪ್ರಕಾರ, ಅದೇ ದಿನ ರಾತ್ರಿ ಸುಮಾರು 8.30 ಗಂಟೆಗೆ ಕಾರ್ತಿಕ್, ವಿನೋದ್, ಶಾಲಿನಿ ಹಾಗೂ ಕಾವ್ಯ ಸೇರಿದಂತೆ ಸುಮಾರು 10ರಿಂದ 20 ಜನರ ಗುಂಪು ಚಿಂತಾಮಣಿ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಮೇಘನಾ ಅವರ ಮನೆಗೆ ನುಗ್ಗಿದೆ.
ಇಬ್ಬರು ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಪ್ರಶ್ನಿಸಿದ ಆರೋಪಿಗಳು ಮೇಘನಾ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮನೆಗೆ ಕಲ್ಲು ತೂರಿ ನಂತರ ಒಳನುಗ್ಗಿದ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ.
ದೂರಿನಲ್ಲಿ, ಆರೋಪಿಗಳು ಮೇಘನಾ ಅವರ ಬಟ್ಟೆ ಹರಿದು, ಚಾಕು ಹಾಗೂ ಬ್ಲೇಡ್‌ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವೇಳೆ ಮೇಘನಾ ಗಾಯಗೊಂಡಿದ್ದು, ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಿದ್ದಾರೆ.
“‘ನಮಗೆ ಹೊಡೆದ ಧೈರ್ಯ ಹೇಗೆ ಬಂತು?’ ಎಂದು ಕೇಳುತ್ತಾ ಅವರು ಮನೆಗೆ ನುಗ್ಗಿದರು. ಚಾಕುವಿನಿಂದ ಹಲ್ಲೆ ಮಾಡಿ, ನನ್ನ ಬಟ್ಟೆ ಹರಿದು ಗಾಯಗೊಳಿಸಿದರು. ಈ ಘಟನೆಗೂ ಮುನ್ನ ಅವರಲ್ಲಿ ಹಲವರನ್ನು ನಾನು ನೋಡಿರಲಿಲ್ಲ,” ಎಂದು ಮೇಘನಾ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿದ ಬಳಿಕವೂ ತಮ್ಮ ಕುಟುಂಬಕ್ಕೆ ಬೆದರಿಕೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
“ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಎಫ್‌ಐಆರ್ ದಾಖಲಾಗಿದೆ. ದೂರು ನೀಡಿದ್ದಕ್ಕೆ ನನ್ನ ತಾಯಿಯನ್ನೂ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ,” ಎಂದು ಅವರು ಹೇಳಿದ್ದಾರೆ.
ಮೇಘನಾ ನೀಡಿದ ದೂರಿನ ಆಧಾರದ ಮೇಲೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆಯ ವೇಳೆ ಮೊಬೈಲ್ ಫೋನ್‌ನಲ್ಲಿ ದಾಖಲಾಗಿರುವ ವಿಡಿಯೋ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.




