ರಾಮನಗರ: ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ 26 ವರ್ಷದ ನವವಿವಾಹಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕನಕಪುರದಲ್ಲಿ ನಡೆದಿದೆ.
ಕನಕಪುರ ಟೌನ್‌ನ ಕುಲುಮೆ ಬೀದಿ ನಿವಾಸಿ ಜಿ. ಚಂದನ್ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಮಾರು ಆರು ತಿಂಗಳ ಹಿಂದೆಯಷ್ಟೇ ಚಂದನ್, ರಕ್ಷಿತಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಮದುವೆಯಾದ ಕೆಲವು ತಿಂಗಳಿನಿಂದ ದಂಪತಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಕಳೆದ ಕೆಲವು ದಿನಗಳ ಮುನ್ನ ಪತ್ನಿ ರಕ್ಷಿತಾ, ಚಂದನ್ ಜೊತೆ ಗಲಾಟೆ ಮಾಡಿಕೊಂಡು ಚನ್ನಪಟ್ಟಣ ತಾಲೂಕಿನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು.
ಅಲ್ಲಿಂದ ರಕ್ಷಿತಾ ಹಾಗೂ ಆಕೆಯ ಪೋಷಕರು ಚಂದನ್ ಅವರಿಗೆ ನಿರಂತರವಾಗಿ ಫೋನ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ನಿನ್ನ ಹಾಗೂ ನಿನ್ನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಚಂದನ್ ಅವರ ಕಿರಿಯ ಸಹೋದರ ಹಲವು ಬಾರಿ ಫೋನ್ ಮಾಡಿದರೂ ಚಂದನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಚಂದನ್ ಶವವಾಗಿ ಪತ್ತೆಯಾಗಿದ್ದಾರೆ.
ಮೃತದೇಹದ ಬಳಿ ಚಂದನ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ “ನನ್ನ ಸಾವಿಗೆ ಪತ್ನಿ ರಕ್ಷಿತಾ ಹಾಗೂ ಆಕೆಯ ಕುಟುಂಬದವರೇ ಕಾರಣ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆನ್ನಲಾಗಿದೆ.




