Tuesday, November 17, 2026

ಬಾಲ್ಯದ ಕ್ರಿಕೆಟ್ ಅಂಗಳದಿಂದ ಉರಿಯುವ ಚಿತೆಯವರೆಗೆ: ಊರ ಮಗನ ಅಗಲಿಕೆಗೆ ಮಿಡಿದ ಪತ್ರಕರ್ತನ ಅಕ್ಷರಗಳು!

ಏಕೈಕ ಪುತ್ರನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಕಂಡು ಮನಕಲಕಿದ ಪತ್ರಕರ್ತನ ಭಾವನಾತ್ಮಕ ಬರಹ

ಕುಂದಾಪುರ: ಬೆಂಗಳೂರಿನ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಪಡುಕೋಣೆಯ ಯುವ ಇಂಜಿನಿಯರ್ ಅಕ್ಷಯ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹೆತ್ತವರನ್ನು ಮಾತ್ರವಲ್ಲ, ಊರಿನ ಅನೇಕರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅದರಲ್ಲೂ ಅಕ್ಷಯ್ ಕುಟುಂಬದೊಂದಿಗೆ ಬಾಲ್ಯದಿಂದಲೂ ಆತ್ಮೀಯ ಸಂಬಂಧ ಹೊಂದಿದ್ದ ಪತ್ರಕರ್ತ ನೊಯೆಲ್ ಚುಂಗಿಗುಡ್ಡೆ ಅವರು ಅಕ್ಷಯ್ ಅಂತಿಮ ವಿದಾಯದ ಬಳಿಕ ಹಂಚಿಕೊಂಡಿರುವ ಭಾವನಾತ್ಮಕ ಬರಹ ಮನಕಲಕುವಂತಿದೆ.

ತಮ್ಮ ಪಕ್ಕದ ಮನೆಯ ನಾರಾಯಣ ಹೆಬ್ಬಾರರ ಏಕೈಕ ಪುತ್ರ ಅಕ್ಷಯ್ ಅವರ ಬಾಲ್ಯದ ನೆನಪುಗಳು, ಆತನ ಹೆತ್ತವರ ಆಕ್ರಂದನ, ಕುಟುಂಬದೊಂದಿಗಿನ ಆತ್ಮೀಯ ಒಡನಾಟ ಹಾಗೂ ಬದುಕಿನ ಅನಿಶ್ಚಿತತೆಯ ಕುರಿತು ನೊಯೆಲ್ ಅವರು ತಮ್ಮ ಫೇಸ್‌ಬುಕ್ ಬರಹದಲ್ಲಿ ಹೃದಯದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅವರ ಬರಹದ ಪೂರ್ಣಪಾಠ ಇಲ್ಲಿದೆ…

‘ಸಮಯ’ ಸರಿ ಇಲ್ಲದಿದ್ದಾಗ ಯಾರು ಕೂಡ ಬದುಕಲಾಗದು.

ಅಕ್ಷಯನ ಮನೆಗೆ ’ಅಕ್ಷಯ’ ಎಂಬ ಹೆಸರನ್ನು ನಾರಾಯಣ ಹೆಬ್ಬಾರ್ ಇಟ್ಟಿದ್ದಾರೆ. ಈ ಅಕ್ಷಯ ಪ್ರೀತಿ ಅವರನ್ನು ಮುಂದಿನ ಬದುಕಿನುದ್ದಕ್ಕೂ ಪೊರೆಯಲಿ ಎಂದಷ್ಟೇ ಹಾರೈಸಬಲ್ಲೆ.

ಈಗಷ್ಟೇ ನಮ್ಮ ಪಕ್ಕದ ಮನೆಯ ನಾರಾಯಣ ಹೆಬ್ಬಾರರ ಮಗ ಅಕ್ಷಯನಿಗೆ ಅಂತಿಮ ವಿದಾಯ ಹೇಳಿ ಬಂದೆ. ಬೈಕ್‌ನಲ್ಲಿ ಬೆಂಗಳೂರಿನ ತನ್ನ ಕಚೇರಿಗೆ ತೆರಳುವಾಗ ಅಕ್ಷಯನ ಬೈಕ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವಪ್ಪಿರುವ ಅತ್ಯಂತ ಖೇದಕರ ಸಂಗತಿ ಇದು.

ಆರೇಳು ವರ್ಷದ ಹಿಂದೆ ನಮ್ಮ ಚುಂಗಿಗುಡ್ಡೆ ಶಾಲೆಯ ಅಂಗಳಕ್ಕೆ ನನ್ನ ಮಗನೊಂದಿಗೆ ನಾನು ಹೋಗುತ್ತಿದ್ದಾಗ ಇಲ್ಲಿನ ಇತರ ಮಕ್ಕಳ ಜೊತೆ ಕ್ರಿಕೆಟ್ ಆಡುತ್ತಿದ್ದ ಹುಡುಗ ಈ ಅಕ್ಷಯ. ಮಾತಾಡಿಸಿದರೆ ಮಾತ್ರ ಒಂದೆರಡು ಮಾತಾಡುತ್ತಿದ್ದ, ಮುಗುಳ್ನಗುತ್ತಿದ್ದ ಹುಡುಗ. ಆ ಬಳಿಕ ಆತ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ ಎಂದು ತಿಳಿಯಿತು. ಆ ಬಳಿಕ ಕೆಲಸಕ್ಕೂ ಸೇರಿದ್ದ.

ಇತ್ತೀಚೆಗೆ ಪ್ರತಿನಿತ್ಯ ತನ್ನ ತಾಯಿಯೊಡನೆ ನಮ್ಮೂರಿನ ರಸ್ತೆಗಳಲ್ಲಿ ವಾಕ್ ಮಾಡುತ್ತಿರುವುದನ್ನು ಸಂಜೆ ನೋಡುತ್ತಿದ್ದೆ. ಕೊನೆ ಬಾರಿ ಅವನನ್ನು ನಮ್ಮೂರಿನತ್ತ ಇರುವ ಪಡುಕೋಣೆ ಚರ್ಚ್ ಗೇಟ್ ಎದುರು ಅಮ್ಮನ ಜೊತೆ ನೋಡಿದ್ದೆ. ಮಾತಾಡಿಸುವ ಎಂದುಕೊಂಡೆನಾದರೂ ಅಮ್ಮನ ಜೊತೆಗೆ ಇದ್ದಾನಲ್ಲ ಎಂದು ಸುಮ್ಮನಿದ್ದೆ.

ನಾವು ಇರುವ ಈಗಿನ ಜಾಗ ಇವನ ಅಜ್ಜನಿಂದ ನಾವು ಖರೀದಿಸಿದ್ದು. ಬಾಲ್ಯದಲ್ಲಿ ಇವನ ತಂದೆ ನಾರಾಯಣ ಹೆಬ್ಬಾರರ ಮನೆಯೇ ನನಗೆ ಆಟದ ಅಂಗಳವಾಗಿತ್ತು. ಅವರ ಮನೆಯ ಮಾವಿನ ಹಣ್ಣಿನ ರಸಾಯನ, ಮನೆಯವರ ಪ್ರೀತಿ ಇಂದೂ ಮರೆತಿಲ್ಲ.

ಈ ರೀತಿ ಭಾವನಾತ್ಮಕ ಸಂಬಂಧ ಇರುವುದರಿಂದ ಇಂದು ತುಂಬ ಹೊತ್ತು ಅಲ್ಲೇ ಇದ್ದೆ. ಉರಿಯುವ ಚಿತೆಯನ್ನೇ ನೋಡುತ್ತಾ ನಿಂತೆ.

ನಾರಾಯಣ ಹೆಬ್ಬಾರರು ಏಕೈಕ ಮಗನನ್ನು ಕಳೆದುಕೊಂಡ ದುಃಖ ಸಹಿಸಲಾಗದೇ ’ಇನ್ನು ನಮ್ಮದು ಏನೂ ಇಲ್ಲ, ಎಲ್ಲವನ್ನೂ ಅವನಿಗಾಗಿಯೇ ಮಾಡಿದೆ’ ಎನ್ನುತ್ತಿದ್ದರು. ಅವರ ಕೈಗಳನ್ನು ಮುಟ್ಟಿ ಹೆಬ್ಬಾರರೇ ಸಮಾಧಾನ ತಂದುಕೊಳ್ಳಿ ಎಂದೆ.

ನಾರಾಯಣ ಹೆಬ್ಬಾರ್ ನಾನು ಎಲ್ಲೇ ಸಿಗಲಿ ಬಾಯ್ತುಂಬಾ ನಗುವ ಸಮಾಧಾನದ ಮನುಷ್ಯರಾಗಿದ್ದರು. ಇನ್ನು ಮುಂದೆ ಆ ಸಮಾಧಾನವನ್ನು ಅವರು ತಂದುಕೊಳ್ಳಬೇಕಿದೆ.

ಹೆಬ್ಬಾರರ ಪತ್ನಿ, ಒಬ್ಬನೇ ಮುದ್ದು ಮಗನನ್ನು ಕಳೆದುಕೊಂಡ ತಾಯಿ ’ನಾವು ಒಂದೇ ಒಂದು ಪೆಟ್ಟು ಕೊಡದೇ ನಿನ್ನನ್ನು ಬೆಳೆಸಿದವು. ಈಗ ಅಮ್ಮನನ್ನು ಬಿಟ್ಟು ಹೊರಟೆಯಾ’ ಎಂದು ಅಳುತ್ತಿದ್ದರು.

ಇವರಿಗೆ ಸಮಾಧಾನ ಹೇಳುವ ಶಕ್ತಿ ಇರುವವರು ಯಾರು?

ಈ ನಡುವೆ ಬೈಕ್‌ನಲ್ಲಿ ಅಕ್ಷಯ ಬೆಂಗಳೂರಿಗೆ ಹೋಗಲೇ ಬಾರದಿತ್ತು. ಇಷ್ಟೊಂದು ಬಸ್ಸುಗಳು ಮತ್ತು ಇತರ ಸಾರಿಗೆ ವ್ಯವಸ್ಥೆಗಳಿವೆ ಎಂದು ಜನರು ಖೇದ ವ್ಯಕ್ತಪಡಿಸುತ್ತಿದ್ದರು.

ಅಪಘಾತ ಆಗುವುದಿದ್ದರೆ ಬೆಂಗಳೂರಲ್ಲೇ ಆಗಬೇಕಿಲ್ಲ, ಇಲ್ಲೇ ಪಡುಕೋಣೆ ರಸ್ತೆಯಲ್ಲೇ ಆಗಬಾರದು ಎಂದಿರಲಿಲ್ಲ ಅಲ್ಲವೇ? ಎಂದು ನನ್ನ ಮನಸು ಹೇಳುತ್ತಿತ್ತು.

ಅನೇಕ ಬಾರಿ ಒಬ್ಬ ಬೈಕ್ ಸವಾರನಾಗಿ ನಾನು ಅಜಾಗರೂಕತೆಯಿಂದ ಅಪಘಾತಗಳಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು ಇದೆ. ಯಾವುದೋ ಯೋಚನೆಯಲ್ಲಿ ಬೈಕ್ ಚಲಾಯಿಸಿದ ಸಂದರ್ಭಗಳು ಇಲ್ಲದಿಲ್ಲ. ಒಂದೆರಡು ಸಂದರ್ಭಗಳಲ್ಲಿ ಸಾಯಬೇಕಿದ್ದರೂ ಸಾಯಲಿಲ್ಲ, ಪಾರಾದೆ.

ಕಾರು ಮತ್ತು ಇತರ ದೊಡ್ಡ ವಾಹನಗಳಿಗೆ ಹೋಲಿಸಿದರೆ ಬೈಕ್‌ನಲ್ಲಿ ಅಪಘಾತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂಬುದೂ ನಿಜವೇ.

ಏನೇ ಇರಲಿ, ‘ಸಮಯ’ ಸರಿ ಇಲ್ಲದಿದ್ದಾಗ ಯಾರು ಕೂಡ ಬದುಕಲಾಗದು ಎಂದು ಇಂದು ಮತ್ತೊಮ್ಮೆ ಅನಿಸಿತು. ಈ ಮಾತು ವೈಜ್ಞಾನಿಕವೋ, ಅವೈಜ್ಞಾನಿಕವೋ ನನಗೆ ತಿಳಿಯದು. ನನ್ನ ಅನುಭವದ ಮಟ್ಟಿಗೆ ಈ ಮಾತು ಸತ್ಯ.

ಅಕ್ಷಯನ ಮನೆಗೆ ’ಅಕ್ಷಯ’ ಎಂಬ ಹೆಸರನ್ನು ನಾರಾಯಣ ಹೆಬ್ಬಾರ್ ಇಟ್ಟಿದ್ದಾರೆ. ಈ ಅಕ್ಷಯ ಪ್ರೀತಿ ಅವರನ್ನು ಮುಂದಿನ ಬದುಕಿನುದ್ದಕ್ಕೂ ಪೊರೆಯಲಿ ಎಂದಷ್ಟೇ ಹಾರೈಸಬಲ್ಲೆ.

ಮತ್ತೆ ಬಾ ಅಕ್ಷಯ.

— ನೊಯೆಲ್ ಚುಂಗಿಗುಡ್ಡೆ, ನಾಗರಿಕ ಪತ್ರಕರ್ತ

More like this
Related

ಹಿಂದಿನ ಸರಕಾರಗಳು ಸ್ಥಾಪಿಸಿದ ಸಂಸ್ಥೆಗಳನ್ನು ಬಿಜೆಪಿ ಮಾರಾಟ ಮಾಡಿ ಯುವಜನರ ಉದ್ಯೋಗ ಕಸಿದುಕೊಂಡಿದೆ : ಜೆ ಪಿ ಹೆಗ್ಡೆ

ಉಡುಪಿ: ಹಿಂದಿನ ಸರಕಾರಗಳು ಸ್ಥಾಪಿಸಿದ ಸಂಸ್ಥೆಗಳು, ಉದ್ದಿಮೆಗಳನ್ನು ಮಾರಾಟ ಮಾಡಿರುವ ಬಿಜೆಪಿ...

ಓಲಾ, ಊಬರ್ ಕ್ಯಾಬ್‌ಗಳಿಗೆ ಮೀಟರ್ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ವಾಹನ ಸೀಜ್

ಬೆಂಗಳೂರು: ನಗರದಲ್ಲಿ ಓಲಾ ಮತ್ತು ಊಬರ್ ಕ್ಯಾಬ್‌ಗಳ ಸಂಚಾರಕ್ಕೆ ಸಂಬಂಧಿಸಿದಂತೆ ರಾಜ್ಯ...

ಎಸ್‌ಐಆರ್ ವಿವಾದ: ಸುಪ್ರೀಂ ಕೋರ್ಟ್‌ಗೆ ಇಂಡಿಯಾ ಮೈತ್ರಿಕೂಟದ ನಾಯಕರಿಂದ ಹೊಸ ಅಫಿಡವಿಟ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮುಖ್ಯ...

ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಶೀಘ್ರ ಆರಂಭಿಸಿ : ಕೆ ವಿಕಾಸ್ ಹೆಗ್ಡೆ

 ಮರಳು ಪೂರೈಕೆ ಇಲ್ಲದೆ ಸಾರ್ವಜನಿಕ ಹಾಗೂ ಸರ್ಕಾರಿ ನಿರ್ಮಾಣ ಕಾಮಗಾರಿಗಳಿಗೆ ತೊಂದರೆ ಕುಂದಾಪುರ:...

Copying is disabled on Udupi Digital News.