ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಹಾಗೂ ಖ್ಯಾತ ನಟ ಧನುಷ್ ಅವರು, ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಅವರನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಧನುಷ್ ಮತ್ತು ಮೃಣಾಲ್ ಪ್ರೇಮಿಗಳ ದಿನದಂದೇ ಮದುವೆಯಾಗಲಿದ್ದಾರೆ ಎಂಬ ವದಂತಿ ಇಂಟರ್ನೆಟ್ ತುಂಬ ಹರಿದಾಡುತ್ತಿದೆ.
ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬ ಗುಸುಗುಸು ಕಳೆದ ಕೆಲ ಸಮಯಗಳಿಂದ ಕೇಳಿಬರುತ್ತಿದ್ದರೂ, ಈ ಬಗ್ಗೆ ಧನುಷ್ ಅಥವಾ ಮೃಣಾಲ್ ಯಾರೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳುವ ಸ್ವಭಾವ ಹೊಂದಿರುವ ಈ ಜೋಡಿ, ವದಂತಿಗಳ ಕುರಿತು ಮೌನ ವಹಿಸಿದ್ದಾರೆ.
ಧನುಷ್ ಮತ್ತು ಮೃಣಾಲ್ ಇದುವರೆಗೆ ಯಾವುದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ ಕಳೆದ ಆಗಸ್ಟ್‌ನಲ್ಲಿ ಅಜಯ್ ದೇವಗನ್ ಅಭಿನಯದ ಸನ್ ಆಫ್ ಸರ್ದಾರ್ 2 ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಮೃಣಾಲ್ ಹಾಜರಾಗಿದ್ದ ವೇಳೆ, ಅಲ್ಲಿಗೆ ಧನುಷ್ ಕೂಡ ಆಗಮಿಸಿದ್ದರು. ಈ ಸಂದರ್ಭ ಇಬ್ಬರ ನಡುವೆ ಏನೋ ವಿಶೇಷ ನಡೆಯುತ್ತಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಡಿದ್ದವು.
ಇದಾದ ಬಳಿಕ, ಮೃಣಾಲ್ ಅಭಿನಯದ ದೋ ದಿವಾನೆ ಶಹರ್ ಮೇ ಚಿತ್ರದ ಕುರಿತು ಧನುಷ್ ಸಾಮಾಜಿಕ ಜಾಲತಾಣದಲ್ಲಿ “ನೋಡಲು ಮತ್ತು ಕೇಳಲು ಸೊಗಸಾಗಿದೆ” ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಮೃಣಾಲ್ ಹಾರ್ಟ್ ಮತ್ತು ಸೂರ್ಯಕಾಂತಿ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದರು. ಅಲ್ಲದೆ ಧನುಷ್ ಅವರ ತೇರೆ ಇಷ್ಕ್ ಮೇ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೂ ಮೃಣಾಲ್ ಹಾಜರಾಗಿದ್ದರು. ಈ ಎಲ್ಲ ಘಟನೆಗಳು ಇಬ್ಬರ ನಡುವಿನ ಸಂಬಂಧದ ಬಗ್ಗೆ ಕುತೂಹಲ ಹೆಚ್ಚಿಸಿವೆ.
ಇನ್ನು ಧನುಷ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ರಜನಿಕಾಂತ್ ಅವರನ್ನು ವಿವಾಹವಾಗಿದ್ದರು. 18 ವರ್ಷಗಳ ದಾಂಪತ್ಯ ಜೀವನದ ನಂತರ 2022ರಲ್ಲಿ ಇಬ್ಬರೂ ಬೇರ್ಪಡುವುದಾಗಿ ಘೋಷಿಸಿ, 2024ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಈ ದಾಂಪತ್ಯದಿಂದ ಲಿಂಗಾ ಮತ್ತು ಯಾತ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಧನುಷ್–ಮೃಣಾಲ್ ಮದುವೆ ಕುರಿತ ವದಂತಿ ನಿಜವೇ ಅಥವಾ ಕೇವಲ ಊಹಾಪೋಹವೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.




