Monday, September 14, 2026

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರು ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಿದರು. ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.

ಬಳಿಕ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ವೇಳೆ ದೇವಸ್ಥಾನದಲ್ಲಿ ಭಕ್ತರ ಸಂಚಾರವನ್ನು ನಿಯಂತ್ರಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಜಯ್ ಅವರನ್ನ ರಾಜ್ಯ ಸರ್ಕಾರದ ಪರವಾಗಿ ಸಚಿವ ಯು.ಟಿ. ಖಾದರ್ ಆತ್ಮೀಯವಾಗಿ ಸ್ವಾಗತಿಸಿದ್ರು. ಸ್ವಾಮಿ ವಿವೇಕಾನಂದರ ಪುಸ್ತಕ ಹಾಗೂ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯ್ತು. ಬಳಿಕ ಮಾತನಾಡಿದ ಯು.ಟಿ. ಖಾದರ್, ವಿಜಯ್ ಅವರು ಕರ್ನಾಟಕ ಮತ್ತು ಮಂಗಳೂರು ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ವಿಚಾರದಲ್ಲಿ ಇಬ್ಬರು ಸಿಎಂಗಳು ದೆಹಲಿಯಲ್ಲಿ ಮಾತುಕತೆ ನಡೆಸಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ’ ಅಂತ ಮಾಹಿತಿ ನೀಡಿದರು.

ಮಂಗಳೂರು-ಉಡುಪಿ-ಕೊಲ್ಲೂರು ಮಾರ್ಗದುದ್ದಕ್ಕೂ ರಸ್ತೆಯ ಬದಿಯಲ್ಲಿ ನೆರೆದಿದ್ದ ಅಭಿಮಾನಿಗಳು ಮುಖ್ಯಮಂತ್ರಿ ವಿಜಯ್ ಅವರಿಗೆ ಜೈಕಾರ ಹಾಕಿ ಸ್ವಾಗತಿಸಿದರು. ಹಲವೆಡೆ ಅಭಿಮಾನಿಗಳು ಕೈಬೀಸಿ ಶುಭ ಕೋರಿದರೆ, ವಿಜಯ್ ಕೂಡ ವಾಹನದಿಂದಲೇ ಅಭಿಮಾನಿಗಳತ್ತ ಕೈಬೀಸಿ ಪ್ರತಿಕ್ರಿಯಿಸಿದರು.

ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗರು ಪೂಜೆಗೆ ಸಂಕಲ್ಪ ನೆರವೇರಿಸಿದ್ದು, ದೇವಸ್ಥಾನದ ಅರ್ಚಕರು ಸಿಎಂ ವಿಜಯ್ ಕೈಗೆ ರಕ್ಷಾ ದಾರ ಕಟ್ಟಿದರು. ಮಧ್ಯಾಹ್ನ 3 -30 ಗಂಟೆ ಸುಮಾರಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದ ವಿಜಯ್ ಅವರಿಗೆ ಕುಂದಾಪುರ ಎಸಿ ರಶ್ಮಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಹೆಗ್ಡೆ ಹಾಗೂ ಪ್ರಧಾನ ಅರ್ಚಕ ರಾಮಚಂದ್ರ ಅಡಿಗರು ಪೂರ್ಣಕುಂಭ ಸ್ವಾಗತ ಕೋರಿದರು.

ಇದೇ ವೇಳೆ ಅವರು ಮೂಕಾಂಬಿಕಾ ದೇವಿಗೆ ಭಕ್ತಿಯಿಂದ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದರು. ದೇಗುಲಕ್ಕೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿದ್ದ ವಿಜಯ್, ಸ್ತಂಭ ಗಣಪತಿಗೆ ಪ್ರಾರ್ಥನೆ ಸಲ್ಲಿಸಿ, ಗರ್ಭಗುಡಿಯೊಳಗೆ ದೀಪಾರಾಧನೆ ಕಣ್ತುಂಬಿಕೊಂಡರು. ಪ್ರಧಾನ ಅರ್ಚಕರ ಪ್ರಕಾರ, ವಿಜಯ್ ಯಾವುದೇ ವಿಶೇಷ ಸಂಕಲ್ಪ ಮಾಡದೇ,ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿ ಕೈಮುಗಿದು ದೇವಿಯ ದರ್ಶನ ಪಡೆದರು. ಪ್ರಸಾದ ಸ್ವೀಕರಿಸಿ ಹೊರಬಂದ ದಳಪತಿ, ಸುಮಾರು 10 ಮೀಟರ್ ನಡೆದುಕೊಂಡು ಹೋಗಿ ಕಾಯುತ್ತಿದ್ದ ಅಭಿಮಾನಿಗಳತ್ತ ಕೈಬೀಸಿದರು. ಇದಾದ ಬಳಿಕ ಅಲ್ಲಿಂದ ನಿರ್ಗಮಿಸುವಾಗ ವಿಜಯ್ ಯಾರಿಗೂ ಡ್ರೈವಿಂಗ್ ಬಿಟ್ಟುಕೊಡದೇ, ಚಾಲಕನ ಸೀಟಿನಲ್ಲಿ ಕುಳಿತು ತಮ್ಮ ಕಾರನ್ನ ತಾವೇ ಚಲಾಯಿಸಿಕೊಂಡು ಹೋಗುವ ಮೂಲಕ ನೆರೆದಿದ್ದವರ ಗಮನ ಸೆಳೆದರು.

ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಎಂ.ಜಿ. ರಾಮಚಂದ್ರನ್ (MGR) ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು. ತಮಗಿಂತ ಮುಂಚೆ ತಮಿಳುನಾಡನ್ನು ಆಳಿದ ಧೀಮಂತ ನಾಯಕ ನೀಡಿದ್ದ ಆ ಐತಿಹಾಸಿಕ ಚಿನ್ನದ ಖಡ್ಗವನ್ನು ಸಿಎಂ ವಿಜಯ್ ಅವರು ಕುತೂಹಲದಿಂದ ವೀಕ್ಷಿಸಿ, ಅದರ ಹಿನ್ನೆಲೆಯನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು. ತಮಿಳುನಾಡು ಮುಖ್ಯಮಂತ್ರಿ ಬರುವ ವಿಷಯ ತಿಳಿದು ಕೊಲ್ಲೂರು ದೇಗುಲದ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಮಾರ್ಗಗಳಲ್ಲಿಯೂ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ದೇವಸ್ಥಾನದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ವಿಜಯ್ ಅವರನ್ನು ಕಂಡು ಸಂಭ್ರಮಿಸಿದರು.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

Copying is disabled on Udupi Digital News.