ಉಡುಪಿ: ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವವು ನವೆಂಬರ್ 6 ಮತ್ತು 7ರಂದು ಮಂಗಳೂರು ಹಾಗೂ ನಿಟ್ಟೆಯ ಕ್ಯಾಂಪಸ್‌ಗಳಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ ಒಟ್ಟು 3,325 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಶೈಕ್ಷಣಿಕ ಸಾಧನೆಗಾಗಿ 57 ಚಿನ್ನದ ಪದಕಗಳು ಹಾಗೂ 159 ಪ್ರಶಂಸನಾ ಪತ್ರಗಳನ್ನು ವಿತರಿಸಲಾಗುವುದು ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ.ಎಸ್. ಮೂಡಿತ್ತಾಯ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನವೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಮೈದಾನದಲ್ಲಿ ಮೊದಲ ಹಂತದ ಘಟಿಕೋತ್ಸವ ನಡೆಯಲಿದೆ. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (PGIMER) ನಿರ್ದೇಶಕ ಪ್ರೊ. ಡಾ. ವಿವೇಕ್ ಲಾಲ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ನವೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ನಿಟ್ಟೆಯ ಎನ್‌ಎಂಎಎಂ ತಾಂತ್ರಿಕ ಸಂಸ್ಥೆಯ (NMAMIT) ಆಫ್-ಕ್ಯಾಂಪಸ್ ಕೇಂದ್ರದಲ್ಲಿ ಎರಡನೇ ಹಂತದ ಘಟಿಕೋತ್ಸವ ನಡೆಯಲಿದೆ. ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿ ಹಾಗೂ ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಟೆಕ್ನಾಲಜಿಯ (DIAT) ಮಾಜಿ ಕುಲಪತಿ ಡಾ. ಪ್ರಹ್ಲಾದ ರಾಮರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ 4 ಗಂಟೆಗೆ ಮೂರನೇ ಹಂತದ ಘಟಿಕೋತ್ಸವ ನಿಟ್ಟೆಯ ಆಫ್-ಕ್ಯಾಂಪಸ್ ಕೇಂದ್ರದಲ್ಲಿ ನಡೆಯಲಿದೆ. ಪಿಎಚ್‌ಡಿ ಸಂಶೋಧಕರು, ಎನ್‌ಎಂಎಎಂಐಟಿ ಮತ್ತು ಜೆಕೆಎಸ್‌ಎಚ್‌ಐಎಂನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ಮತ್ತು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್‌ನ ಪದವಿ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಧ್ಯಕ್ಷ ಹಾಗೂ ಪ್ರಸಾರ ಭಾರತಿಯ ಮಾಜಿ ಸಿಇಒ ಶಶಿ ಶೇಖರ್ ವೆಂಪತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ಸಮಾರಂಭಗಳ ಅಧ್ಯಕ್ಷತೆಯನ್ನು ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ದ ಕುಲಾಧಿಪತಿ ವಿಶಾಲ್ ಹೆಗ್ಡೆ ವಹಿಸಲಿದ್ದಾರೆ. ಸಹ-ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಹಾಗೂ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಉಪಸ್ಥಿತರಿರಲಿದ್ದಾರೆ. ಕುಲಪತಿಗಳು ಸ್ವಾಗತ ಭಾಷಣ ಮಾಡಲಿದ್ದು, ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಕುಲಸಚಿವರು, ಪರೀಕ್ಷಾ ನಿಯಂತ್ರಕರು, ಕಾರ್ಯಕಾರಿ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು ಹಾಗೂ ವಿವಿಧ ಕಾಲೇಜುಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸಸ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಬಯೋಲಾಜಿಕಲ್ ಸೈನ್ಸಸ್, ವಾಸ್ತುಶಿಲ್ಪ, ವಾಕ್ ಮತ್ತು ಶ್ರವಣ, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್ಸ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.
ಒಟ್ಟು 3,325 ಪದವೀಧರರಲ್ಲಿ 1,455 ವಿದ್ಯಾರ್ಥಿಗಳು ಮಂಗಳೂರು ಕ್ಯಾಂಪಸ್‌ಗೆ ಹಾಗೂ 1,870 ವಿದ್ಯಾರ್ಥಿಗಳು ನಿಟ್ಟೆ ಕ್ಯಾಂಪಸ್‌ಗೆ ಸೇರಿದವರಾಗಿದ್ದಾರೆ. ಇವರಲ್ಲಿ 1,148 ಬಿ.ಟೆಕ್, 347 ವೈದ್ಯಕೀಯ, 220 ಫಾರ್ಮಸಿ, 181 ಎಂಸಿಎ, 180 ಎಂಬಿಎ ಹಾಗೂ 140 ಬಯೋಲಾಜಿಕಲ್ ಸೈನ್ಸಸ್ ವಿದ್ಯಾರ್ಥಿಗಳಿದ್ದು, ಉಳಿದವರು ವಿವಿಧ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳಾಗಿದ್ದಾರೆ.
ಶೈಕ್ಷಣಿಕ ಸಾಧನೆ ಗುರುತಿಸಿ ಒಟ್ಟು 57 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಇವುಗಳಲ್ಲಿ 39 ನಿಟ್ಟೆ ವಿಶ್ವವಿದ್ಯಾಲಯದ ಚಿನ್ನದ ಪದಕಗಳು ಹಾಗೂ 18 ದತ್ತಿ ಚಿನ್ನದ ಪದಕಗಳು ಸೇರಿವೆ. ಇದರೊಂದಿಗೆ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ 159 ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು.
ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವವು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದ ಮಹತ್ವದ ಮೈಲಿಗಲ್ಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅವರು ಸಾಧಿಸಿರುವ ಯಶಸ್ಸನ್ನು ಗುರುತಿಸುವ ವೇದಿಕೆಯಾಗಲಿದೆ. ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ವೃತ್ತಿಪರ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ಬದ್ಧವಾಗಿರುವ ವಿಶ್ವವಿದ್ಯಾಲಯದ ಆಶಯವನ್ನು ಈ ಘಟಿಕೋತ್ಸವ ಮತ್ತೊಮ್ಮೆ ಪ್ರತಿಬಿಂಬಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಡಾ. ಹರ್ಷ ಹಲಹಳ್ಳಿ, ಡಾ. ಪ್ರಸಾದ್ ಶೆಟ್ಟಿ, ಡಾ. ಕೆ. ಸುಬ್ರಹ್ಮಣ್ಯ ಭಟ್, ಡಾ. ನಿರಂಜನ್ ಎನ್. ಚಿಪ್ಳುಣ್ಕರ್ , ಡಾ. ಸುಧೀರ್ ಎಂ. ಡಾ. ವೀಣಾ ಕುಮಾರಿ ಬಿ.ಕೆ. – ಡೀನ್, ವಾಣಿಜ್ಯ ಮತ್ತು ನಿರ್ವಹಣೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗ ಮತ್ತು ಕೃಷ್ಣರಾಜ ಜೋಯಿಸ ಎ ಉಪಸ್ಥಿತರಿದ್ದರು.




