ಅಗರ್ತಲಾ: ತ್ರಿಪುರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಮೇಲೆ ನಡೆದ ಭೀಕರ ದಾಳಿ ಪ್ರಕರಣದ ಉಳಿದ ಒಂಬತ್ತು ಆರೋಪಿಗಳು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗದಂತೆ ಅಂತರರಾಷ್ಟ್ರೀಯ ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ತ್ರಿಪುರ ಪೊಲೀಸರು ಬಿಎಸ್‌ಎಫ್‌ಗೆ ಸೂಚಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಯೋಧರು ಹಾಗೂ ಓರ್ವ ಅಧಿಕಾರಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಿಎಸ್‌ಎಫ್ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಒಟ್ಟು 19 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ಪೈಕಿ ಮೂವರು ಮಹಿಳೆಯರು ಸೇರಿದಂತೆ 10 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸೋಮವಾರ ರಾತ್ರಿ ಬಿಎಸ್‌ಎಫ್ ಸಿಬ್ಬಂದಿ ಮೇಲಿನ ದಾಳಿಯ ಬಳಿಕ ಉಳಿದ ಒಂಬತ್ತು ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅಂತರರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಅಕ್ರಮ ಗಡಿ ಪ್ರವೇಶ ಮತ್ತು ನಿರ್ಗಮನ ತಡೆಯಲು ಕಟ್ಟೆಚ್ಚರ ವಹಿಸುವಂತೆ ಬಿಎಸ್‌ಎಫ್‌ಗೆ ಮಾಹಿತಿ ನೀಡಲಾಗಿದೆ” ಎಂದು ಅಧಿಕಾರಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ತ್ರಿಪುರ ಬಿಎಸ್‌ಎಫ್ ಫ್ರಾಂಟಿಯರ್‌ನ ಇನ್‌ಸ್ಪೆಕ್ಟರ್ ಜನರಲ್ ಪ್ರಿನ್ಸಿ ರಾಣಿ, ಸೆಪಹಿಜಲಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದೇಬಬರ್ಮಾ ಸೇರಿದಂತೆ ಬಿಎಸ್‌ಎಫ್ ಮತ್ತು ಪೊಲೀಸ್ ಅಧಿಕಾರಿಗಳು ಮಂಗಳವಾರ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿರುವ ಆಶಾಬರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಡಿ ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಬಿಎಸ್‌ಎಫ್ ಐಜಿ ಯೋಧರಿಗೆ ಸೂಚಿಸಿದ್ದಾರೆ. ಸೋಮವಾರದ ಘಟನೆಯ ಕುರಿತು ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರೊಂದಿಗೂ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ ಗಡಿಯ ಬಳಿ ಕೆಲವು ಭಾರತೀಯರು ಮತ್ತು ಬಾಂಗ್ಲಾದೇಶದ ಕಳ್ಳಸಾಗಣೆದಾರರು ಗಾಂಜಾ ಅಕ್ರಮ ಸಾಗಣೆಯಲ್ಲಿ ತೊಡಗಿರುವುದನ್ನು ಬಿಎಸ್‌ಎಫ್ ಸಿಬ್ಬಂದಿ ಗಮನಿಸಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಯೋಧರು ಓರ್ವ ಭಾರತೀಯ ಕಳ್ಳಸಾಗಣೆದಾರನನ್ನು ವಶಕ್ಕೆ ಪಡೆದಿದ್ದರು. ಆದರೆ, ಗಡಿ ಬೇಲಿಯ ಆಚೆಗಿದ್ದ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಪರಾರಿಯಾಗಿದ್ದರು.
ವಶಕ್ಕೆ ಸಿಗದೆ ತಪ್ಪಿಸಿಕೊಂಡ ಮತ್ತೊಬ್ಬ ಭಾರತೀಯ ಕಳ್ಳಸಾಗಣೆದಾರ, ಬಿಎಸ್‌ಎಫ್ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಇದರಿಂದ ಸುಮಾರು 50 ಮಂದಿ ಪುರುಷರು ಮತ್ತು ಮಹಿಳೆಯರು ಸ್ಥಳದಲ್ಲಿ ಜಮಾಯಿಸಿ ಬಿಎಸ್‌ಎಫ್ ವಾಹನವನ್ನು ಸುತ್ತುವರಿದು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಕಂಪನಿ ಕಮಾಂಡರ್ ಸೇರಿದಂತೆ ಮೂವರು ಬಿಎಸ್‌ಎಫ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರರು ಓರ್ವ ಯೋಧನಿಂದ ಪಂಪ್ ಆಕ್ಷನ್ ಗನ್ (ಪಿಎಜಿ) ಕಸಿದುಕೊಂಡಿದ್ದು, ಬಿಎಸ್‌ಎಫ್ ವಾಹನಕ್ಕೂ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ದಾಳಿಕೋರನೂ ಗಾಯಗೊಂಡಿದ್ದಾನೆ.
ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಪಥಸಂಚಲನ
ಘಟನೆ ಬಳಿಕವೂ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಎಸ್‌ಎಫ್, ತ್ರಿಪುರ ಸ್ಟೇಟ್ ರೈಫಲ್ಸ್ ಮತ್ತು ಪೊಲೀಸರು ಜಂಟಿಯಾಗಿ ಪ್ರದೇಶದಲ್ಲಿ ಪಥಸಂಚಲನ ನಡೆಸಿ ಭದ್ರತಾ ಪರಿಶೀಲನೆ ಕೈಗೊಂಡಿದ್ದಾರೆ.
ಭಾರತ-ಬಾಂಗ್ಲಾದೇಶ ಗಡಿಯನ್ನು ರಕ್ಷಿಸುವುದು ಮತ್ತು ಗಡಿ ದಾಟಿ ನಡೆಯುವ ಕಳ್ಳಸಾಗಣೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಬಿಎಸ್‌ಎಫ್ ಬದ್ಧವಾಗಿದೆ ಎಂದು ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಗಡಿ ಪ್ರದೇಶಗಳಲ್ಲಿ ಶಾಂತಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆ ಕಾಪಾಡಲು ಸ್ಥಳೀಯರು ಸಂಪೂರ್ಣ ಸಹಕಾರ ನೀಡಬೇಕು ಎಂದು ಬಿಎಸ್‌ಎಫ್ ಮನವಿ ಮಾಡಿದೆ. ಕಾನೂನುಬದ್ಧ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯನ್ನು ಬೆದರಿಸುವ ಅಥವಾ ತಡೆಯುವ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂದು ಎಚ್ಚರಿಸಿದೆ.
“ಇಂತಹ ಹಿಂಸಾಚಾರ ಮತ್ತು ಬೆದರಿಕೆಗಳು ಬಿಎಸ್‌ಎಫ್ ತನ್ನ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಸಾಧ್ಯವಿಲ್ಲ. ದಾಳಿಗೆ ಒಳಗಾದರೂ ಸಿಬ್ಬಂದಿ ಅಸಾಧಾರಣ ಸಂಯಮ ಪ್ರದರ್ಶಿಸಿದ್ದು, ಮಾರಕ ಬಲಪ್ರಯೋಗಕ್ಕೆ ಮುಂದಾಗಿಲ್ಲ. ಮಾನವ ಜೀವ ರಕ್ಷಣೆಗೆ ಆದ್ಯತೆ ನೀಡುತ್ತಲೇ ವೃತ್ತಿಪರವಾಗಿ ಕರ್ತವ್ಯ ನಿರ್ವಹಿಸಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.
ಈ ಹಿಂದೆಯೂ ಭದ್ರತಾ ಸಿಬ್ಬಂದಿ ಮೇಲೆ ದಾಳಿ
ತ್ರಿಪುರದಲ್ಲಿ ಗಡಿ ಕಳ್ಳಸಾಗಣೆದಾರರಿಂದ ಬಿಎಸ್‌ಎಫ್ ಹಾಗೂ ಇತರ ಭದ್ರತಾ ಸಿಬ್ಬಂದಿ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿಗಳು ನಡೆದಿವೆ. 2017ರ ಅಕ್ಟೋಬರ್ 16ರಂದು ಸೆಪಹಿಜಲಾ ಜಿಲ್ಲೆಯ ಸೋನಾಮುರಾ ಉಪವಿಭಾಗದ ಬಲೆರ್ದೆಫಾದಲ್ಲಿ ಕಳ್ಳಸಾಗಣೆದಾರರು ಚಲಾಯಿಸುತ್ತಿದ್ದ ವಾಹನವು ಬಿಎಸ್‌ಎಫ್‌ನ 145ನೇ ಬೆಟಾಲಿಯನ್‌ನ ಡೆಪ್ಯುಟಿ ಕಮಾಂಡೆಂಟ್ ದೀಪಕ್ ಕುಮಾರ್ ಮಂಡಲ್ ಅವರಿಗೆ ಡಿಕ್ಕಿ ಹೊಡೆದಿತ್ತು. ಪಶ್ಚಿಮ ಬಂಗಾಳ ಮೂಲದ ಮಂಡಲ್ ಅವರು ಅಕ್ಟೋಬರ್ 20ರಂದು ಗಾಯಗಳಿಂದ ಮೃತಪಟ್ಟಿದ್ದರು.
ಇದೇ ಜಿಲ್ಲೆಯ ಮತ್ತೊಂದು ಘಟನೆಯಲ್ಲಿ, 2019ರ ನವೆಂಬರ್ 21ರಂದು ತ್ರಿಪುರ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ದುರ್ಗಾ ಕುಮಾರ್ ಹ್ರಾಂಗ್‌ಖಾಲ್ ಅವರು ಕರ್ತವ್ಯದಲ್ಲಿದ್ದಾಗ ಗಡಿ ಕಳ್ಳಸಾಗಣೆ ಜಾಲಕ್ಕೆ ಸೇರಿದವರು ಎನ್ನಲಾದ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ವಾಹನ ಹರಿಸಿದ ಪರಿಣಾಮ ಮೃತಪಟ್ಟಿದ್ದರು.
ಈ ಘಟನೆಗಳು ಸಂಘಟಿತ ಗಡಿ ಕಳ್ಳಸಾಗಣೆ ಚಟುವಟಿಕೆಗಳನ್ನು ನಿಯಂತ್ರಿಸುವ ಸಂದರ್ಭದಲ್ಲಿ ಭದ್ರತಾ ಮತ್ತು ಕಾನೂನು ಜಾರಿ ಸಿಬ್ಬಂದಿ ಎದುರಿಸುವ ಅಪಾಯಗಳನ್ನು ಎತ್ತಿ ತೋರಿಸಿವೆ.
ತ್ರಿಪುರ ರಾಜ್ಯವು ಬಾಂಗ್ಲಾದೇಶದೊಂದಿಗೆ 856 ಕಿಲೋಮೀಟರ್ ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಮೂರು ದಿಕ್ಕುಗಳಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿದಿರುವ ಈ ರಾಜ್ಯವು ಅಕ್ರಮ ವಲಸೆ, ಕಳ್ಳಸಾಗಣೆ ಮತ್ತು ಗಡಿಯಾಚೆಗಿನ ಅಪರಾಧಗಳ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಕೆಲವೇ ಭಾಗಗಳನ್ನು ಹೊರತುಪಡಿಸಿ ಬಹುತೇಕ ಗಡಿ ಪ್ರದೇಶಗಳಿಗೆ ಬೇಲಿ ಹಾಕಲಾಗಿದ್ದು, ಕಳ್ಳಸಾಗಣೆ, ಅಕ್ರಮ ಗಡಿ ಪ್ರವೇಶ ಹಾಗೂ ಇತರ ಅಪರಾಧ ಚಟುವಟಿಕೆಗಳನ್ನು ತಡೆಯಲು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.




