Tuesday, July 7, 2026

₹23 ಲಕ್ಷ ವಂಚನೆ ಪ್ರಕರಣ: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಸಹಿತ ಇಬ್ಬರ ಬಂಧನ

ಉಡುಪಿ: ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಹಣವನ್ನು ದುರ್ಬಳಕೆ ಮಾಡಿಕೊಂಡು ಸುಮಾರು ₹23 ಲಕ್ಷ ವಂಚನೆ ಎಸಗಿದ ಆರೋಪದಡಿ ಮುಖ್ಯ ಪುಸ್ತಕ ಬರಹಗಾರ್ತಿ ಹಾಗೂ ಆಕೆಯ ಪತಿಯನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್ ಎಂದು ಗುರುತಿಸಲಾಗಿದೆ. ಇವರು ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ (ರಿ.)ದಲ್ಲಿ ನಡೆದಿರುವ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸುಗಂಧಿ ಅವರು ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ, 2023ರಿಂದ 2025ರವರೆಗೆ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್ನಲ್ಲಿ ದಾಖಲಿಸಿ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದರ ಜೊತೆಗೆ ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್ಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಹಾಕಿ ಬ್ಯಾಂಕ್ನಿಂದ ಹಣವನ್ನು ಹಿಂಪಡೆದಿರುವುದು, ಲೆಕ್ಕಪರಿಶೋಧನೆ ವೇಳೆ ಅಕ್ರಮ ಬಯಲಾಗದಂತೆ ಪ್ರತ್ಯೇಕ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಿಸಿರುವುದು ಹಾಗೂ ಕಾರ್ಯಕಾರಿ ಸಮಿತಿಗೆ ಅನುಮಾನ ಬಾರದಂತೆ ವಿವಿಧ ದಾಖಲೆಗಳನ್ನು ಸೃಷ್ಟಿಸಿ ಸುಮಾರು ₹23 ಲಕ್ಷ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 39/2026 ದಾಖಲಿಸಿಕೊಂಡು ಬಿಎನ್ಎಸ್ ಕಲಂ 316(4), 318, 336(3) ಹಾಗೂ 340(2)ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಹಾಗೂ ಹಿರಿಯಡಕ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ಪುನೀತ್ ಕುಮಾರ್ ಬಿ.ಇ. ಹಾಗೂ ಪಿಎಸ್ಐ (ತನಿಖೆ) ವಿಠ್ಠಲ ಮಲವಡಕರ ನೇತೃತ್ವದ ತಂಡವು ಜುಲೈ 6ರಂದು ಆರೋಪಿತರಾದ ಸುಗಂಧಿ ಮತ್ತು ಸಂತೋಷ್ ಅವರನ್ನು ವಶಕ್ಕೆ ಪಡೆದು ಬಂಧಿಸಿ ವಿಚಾರಣೆ ನಡೆಸಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿತೆ ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್ ಸೇರಿಕೊಂಡು ಸಂಘದ ವಿವಿಧ ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಹಿರಿಯಡಕ ಪೊಲೀಸರು ಮುಂದುವರಿಸಿದ್ದಾರೆ.

More like this
Related

‘ವಾಲ್ಬೆಲ್ಲ’ ಸಮಾರೋಪ: ಸುಜ್ಞಾನ ಅಂಗಳದಲ್ಲಿ ಸಾಂಸ್ಕೃತಿಕ ವೈಭವ

ಕುಂದಾಪುರ: ಕೇರಳದ ತ್ರಿಶೂರ್ ನನ್ನ ಹುಟ್ಟೂರಾದರೂ, ಕುಂದಾಪುರದ ಜನರು ನನ್ನನ್ನು ತಮ್ಮವನಾಗಿ...

ರೆಡ್ ಅಲರ್ಟ್ ಹಿನ್ನೆಲೆ: ಜು. 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ...

ಉಡುಪಿ ಜಿಲ್ಲೆಯಲ್ಲಿ ಶಾಲಾ ವಾಹನಗಳ ವಿಶೇಷ ತಪಾಸಣೆ: 203 ಪ್ರಕರಣ ದಾಖಲು; ₹71 ಸಾವಿರ ದಂಡ ವಸೂಲಿ

ಉಡುಪಿ: ಶಾಲಾ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪರಿಣಾಮಕಾರಿ...

ಕರ್ನಾಟಕ SIR ವಿವಾದ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಶಾಲಾ ಮಕ್ಕಳ ಬಳಕೆ ಆರೋಪ; ತನಿಖೆಗೆ ಬೆಳಗಾವಿ ಡಿಸಿ ಆದೇಶ

ಬೆಳಗಾವಿ: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special...

Copying is disabled on Udupi Digital News.