ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯುತ್ತಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿರುವ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನದಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ‘ರೋಜರಿ ವಾಯ್ಸಸ್’ ತಂಡವು ಭಾಗವಹಿಸಿ ಒಂದು ಗಂಟೆಗಳ ಕಾಲ ನಿರಂತರವಾಗಿ ಕೊಂಕಣಿ ಗೀತೆಗಳನ್ನು ಹಾಡುವ ಮೂಲಕ ತನ್ನ ಗಾಯನ ಪ್ರತಿಭೆಯನ್ನು ಮೆರೆದು ಎಲ್ಲರ ಗಮನ ಸೆಳೆಯಿತು.

ನವೆಂಬರ್ 11ರಂದು ನಡೆದ ಈ ಪ್ರದರ್ಶನವು ಮತ್ತೊಂದು ವಿಶೇಷತೆಗೆ ಸಾಕ್ಷಿಯಾಯಿತು. ನಿರಂತರ ಕೊಂಕಣಿ ಗಾಯನ ಕಾರ್ಯಕ್ರಮವು ಯಶಸ್ವಿಯಾಗಿ 200 ಗಂಟೆಗಳನ್ನು ಪೂರೈಸಿದ ಐತಿಹಾಸಿಕ ಸಂದರ್ಭದಲ್ಲಿ ರೋಜರಿ ವಾಯ್ಸಸ್ ತಂಡವು ವೇದಿಕೆಯಲ್ಲಿ ಪ್ರದರ್ಶನ ನೀಡುವ ಮೂಲಕ ಈ ಸಂಭ್ರಮದ ಭಾಗವಾಯಿತು.
200 ಗಂಟೆಗಳ ಮೈಲಿಗಲ್ಲು ತಲುಪಿದ ಸಂಭ್ರಮವನ್ನು ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷರಾದ ಲೂಯಿಸ್ ಜೆ. ಪಿಂಟೋ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಡ್ ವಾದನ ಹಾಗೂ ಪಟಾಕಿಗಳೊಂದಿಗೆ ಸಂಭ್ರಮಾಚರಣೆ ನಡೆಯಿತು. ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಉಳಿವು ಹಾಗೂ ಜಾಗತಿಕ ಮಟ್ಟದಲ್ಲಿ ಅದರ ಪ್ರಚಾರಕ್ಕಾಗಿ ಮಾಂಡ್ ಸೊಭಾಣ್ ಸಂಸ್ಥೆಯು ಕೈಗೊಂಡಿರುವ ಈ ಮಹತ್ವದ ಪ್ರಯತ್ನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಂಗೀತಾಸಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಐತಿಹಾಸಿಕ ಪ್ರದರ್ಶನಕ್ಕೆ ತಂಡವನ್ನು ಹಿಂದಿನ ದಿನಗಳಲ್ಲಿ ಸಿದ್ಧಪಡಿಸಿ ಗಾಯನ ಅಭ್ಯಾಸ ನೀಡಿದ ಮಾರ್ಕೋಸ್ ಡಿ’ಅಲ್ಮೇಡಾ ಹಾಗೂ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡು ತಂಡಕ್ಕೆ ಮಾರ್ಗದರ್ಶನ ನೀಡಿದ ಮೇಬಲ್ ಡಿ’ಅಲ್ಮೇಡಾ ಅವರ ಪರಿಶ್ರಮ ಮತ್ತು ಸಹಕಾರ ವಿಶೇಷವಾಗಿ ಶ್ಲಾಘನೀಯವಾಗಿದೆ.
ಅಲ್ಲದೆ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಇಂತಹ ಬೃಹತ್ ಹಾಗೂ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಿ, ರೋಜರಿ ವಾಯ್ಸಸ್ ತಂಡಕ್ಕೆ ಭಾಗವಹಿಸುವ ಅವಕಾಶ ಕಲ್ಪಿಸಿದ ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಸಂಘಟಕರು ಹಾಗೂ ಸಂಪೂರ್ಣ ತಂಡದ ಪರಿಶ್ರಮವನ್ನು ಶ್ಲಾಘಿಸಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಸಂಸ್ಥೆಯ ಪರವಾಗಿ ಇಂತಹ ಐತಿಹಾಸಿಕ ವಿಶ್ವ ದಾಖಲೆಯ ಪ್ರಯತ್ನದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ರೋಜರಿ ವಾಯ್ಸಸ್ ತಂಡದ ಈ ಭಾಗವಹಿಸುವಿಕೆಯು ಸಂಸ್ಥೆಯ ಸಾಂಸ್ಕೃತಿಕ ಬದ್ಧತೆ ಮತ್ತು ಕೊಂಕಣಿ ಭಾಷೆ ಹಾಗೂ ಸಂಗೀತದ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸಿದೆ.




