Thursday, November 12, 2026

ವಿಶ್ವದ 8ನೇ ಶ್ರೇಯಾಂಕದ ನಾರೋಕಾಗೆ ಶ್ರೀಕಾಂತ್ ಸೋಲುಣಿಕೆ: ಜಪಾನ್ ಮಾಸ್ಟರ್ಸ್ ಕ್ವಾರ್ಟರ್ ಫೈನಲ್‌ಗೆ ಲಕ್ಸ್ಯ ಸೇನ್ ಕೂಡ ಲಗ್ಗೆ

ಕುಮಾಮೊಟೊ: ಭಾರತದ ಅನುಭವಿ ಬ್ಯಾಡ್ಮಿಂಟನ್ ಆಟಗಾರ, ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಅವರು ಜಪಾನ್‌ನ ತವರಿನ ಆಟಗಾರ ಹಾಗೂ ವಿಶ್ವದ 8ನೇ ಶ್ರೇಯಾಂಕಿತ ಕೊಡೈ ನಾರೋಕಾ ಅವರನ್ನು ಮೂರು ಗೇಮ್‌ಗಳ ರೋಚಕ ಪಂದ್ಯದಲ್ಲಿ ಮಣಿಸಿ ಜಪಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೆ, ಇತ್ತೀಚೆಗೆ ಹೈಲೋ ಓಪನ್ ಪ್ರಶಸ್ತಿ ಗೆದ್ದಿದ್ದ ಭಾರತದ ಲಕ್ಷ್ಯ ಸೇನ್ ಕೂಡ ಸುಲಭ ಜಯದೊಂದಿಗೆ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಕುಮಾಮೊಟೊ ಪ್ರಿಫೆಕ್ಚರಲ್ ಜಿಮ್ನಾಷಿಯಂನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಲ್ಲಿ, ನಾರೋಕಾ ವಿರುದ್ಧ ಈ ಹಿಂದಿನ ನಾಲ್ಕೂ ಮುಖಾಮುಖಿಗಳಲ್ಲಿ ಸೋತಿದ್ದ ಶ್ರೀಕಾಂತ್ ಈ ಬಾರಿ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಗೇಮ್‌ನಲ್ಲಿ 12-14ರಿಂದ ಹಿನ್ನಡೆಯಲ್ಲಿದ್ದ ಅವರು ಸತತ ಏಳು ಅಂಕಗಳನ್ನು ಗಳಿಸಿ 21-15ರಲ್ಲಿ ಗೇಮ್ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ನಾರೋಕಾ ಪಂದ್ಯವನ್ನು ನಿರ್ಣಾಯಕ ಮೂರನೇ ಗೇಮ್‌ಗೆ ಕೊಂಡೊಯ್ದರು. ಅಂತಿಮ ಗೇಮ್‌ನ ಆರಂಭದಲ್ಲಿ ಜಪಾನ್ ಆಟಗಾರ ಮುನ್ನಡೆ ಸಾಧಿಸಿದರೂ, ಶ್ರೀಕಾಂತ್ 7-7ರಲ್ಲಿ ಸಮಬಲ ಸಾಧಿಸಿ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಂತಿಮವಾಗಿ 60 ನಿಮಿಷಗಳ ಹೋರಾಟದಲ್ಲಿ 21-18ರಿಂದ ಗೆದ್ದು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು.

ಈ ಋತುವಿನಲ್ಲಿ ಶ್ರೀಕಾಂತ್ ಸಾಧಿಸಿದ ಮತ್ತೊಂದು ಮಹತ್ವದ ಗೆಲುವು ಇದಾಗಿದೆ. ಜೂನ್‌ನಲ್ಲಿ ನಡೆದ ಯುಎಸ್ ಓಪನ್‌ನಲ್ಲಿ ಮಲೇಷ್ಯಾದ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೀ ಝಿ ಜಿಯಾ ಅವರನ್ನು ಸೋಲಿಸಿ ರನ್ನರ್ ಅಪ್ ಆಗಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ ಆಗಿನ ವಿಶ್ವದ 9ನೇ ಶ್ರೇಯಾಂಕಿತ ಕೆನಡಾದ ವಿಕ್ಟರ್ ಲಾಯ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ಮುಂದಿನ ಸುತ್ತಿನಲ್ಲಿ ಶ್ರೀಕಾಂತ್ ಮತ್ತೊಬ್ಬ ಜಪಾನ್ ಆಟಗಾರ, ವಿಶ್ವದ 15ನೇ ಶ್ರೇಯಾಂಕಿತ ಕೊಕಿ ವಟನಾಬೆ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದೆಡೆ, ಎಂಟನೇ ಶ್ರೇಯಾಂಕದ ಲಕ್ಷ್ಯ ಸೇನ್ ಚೀನಾದ ಡಾಂಗ್ ಟಿಯಾನ್ ಯಾವೊ ಅವರನ್ನು 21-8, 21-14ರ ನೇರ ಗೇಮ್‌ಗಳಿಂದ ಮಣಿಸಿದರು. ಕೇವಲ 35 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಲಕ್ಷ್ಯ, ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಯುಶಿ ತನಕಾ ಅವರನ್ನು ಎದುರಿಸಲಿದ್ದಾರೆ.

ಗುರುವಾರ ನಡೆದ ಡಬಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಭಾರತದ ಜೋಡಿಗಳ ಟೂರ್ನಿ ಪಯಣ ಅಂತ್ಯಗೊಂಡಿದೆ.

ಪುರುಷರ ಡಬಲ್ಸ್‌ನಲ್ಲಿ ಹರಿಹರನ್ ಅಂಸಕರೂಣನ್ ಮತ್ತು ಎಂ.ಆರ್. ಅರ್ಜುನ್ ಜೋಡಿ ಜಪಾನ್‌ನ ಟಕುರೊ ಹೊಕಿ ಮತ್ತು ಯುಗೊ ಕೊಬಯಾಶಿ ವಿರುದ್ಧ 21-14, 21-14ರಿಂದ ಸೋಲು ಕಂಡಿತು. 34 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಪಾನ್ ಜೋಡಿ ಮೇಲುಗೈ ಸಾಧಿಸಿತು.

ಮಹಿಳೆಯರ ಡಬಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತರಾದ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಪುಲ್ಲೇಲಾ ಜೋಡಿ ಜಪಾನ್‌ನ ಮೂರನೇ ಶ್ರೇಯಾಂಕದ ರಿನ್ ಇವನಾಗಾ ಮತ್ತು ಕೀ ನಕಾನಿಶಿ ವಿರುದ್ಧ 21-14, 21-14ರಿಂದ ಸೋಲನುಭವಿಸಿತು.

More like this
Related

‘ಸ್ವಿಂಗ್‌ಗಿಂತ ಸೀಮ್ ಚಲನೆಗೆ ಆದ್ಯತೆ ನೀಡಿ’: ರೋಹಿತ್, ಕೊಹ್ಲಿ ನೀಡಿದ ಸಲಹೆ ಬಹಿರಂಗಪಡಿಸಿದ ಆಕಿಬ್ ನಬಿ

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್‌ನಲ್ಲಿ ಬಿಳಿ ಚೆಂಡಿನೊಂದಿಗೆ ಬೌಲಿಂಗ್ ಮಾಡುವಾಗ ಸ್ವಿಂಗ್‌ಗಿಂತ ಸೀಮ್...

ಇಂದು ಮಗಳ ಅರಿಶಿನ ಶಾಸ್ತ್ರ, ಭಾನುವಾರ ಆರತಕ್ಷತೆ; ವಿಧಿಯಾಟಕ್ಕೆ ಬಲಿಯಾದ ವಧು: ಶವಾಗಾರದ ಮುಂದೆ ತಂದೆಯ ಆಕ್ರಂದನ

ಬೆಂಗಳೂರು: "ಇಂದು ನನ್ನ ಮಗಳು ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿರಬೇಕಿತ್ತು. ಆದರೆ ಈಗ...

ತಾಯಿ ಸತ್ಯ ಹೇಳುವ ಹಕ್ಕು ಹೊಂದಿದ್ದಾರೆ: ಸೋನಿಯಾ ಗಾಂಧಿ ಆತ್ಮಕಥನದ ಪರ ಪ್ರಿಯಾಂಕಾ ಗಾಂಧಿ ಬ್ಯಾಟಿಂಗ್

ವಯನಾಡ್: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಲವು ವರ್ಷಗಳಿಂದ ತಮ್ಮ ತಾಯಿ ಸೋನಿಯಾ...

200 ಗಂಟೆಗಳ ಕೊಂಕಣಿ ಗಾಯನದ ಐತಿಹಾಸಿಕ ಸಂಭ್ರಮದಲ್ಲಿ ರೋಜರಿ ವಾಯ್ಸಸ್ ತಂಡದ ವಿಶೇಷ ಪ್ರದರ್ಶನ

ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಟೌನ್‌ ಹಾಲ್‌ ನಲ್ಲಿ...

Copying is disabled on Udupi Digital News.