ಎಐ ಚಿತ್ರದಲ್ಲಿ ಅರಳಿದ ತ್ರಾಸಿ–ಮರವಂತೆ ಕನಸು; ಅಭಿವೃದ್ಧಿಯಾದರೆ ಇನ್ನಷ್ಟು ಮನಮೋಹಕ!
ಯುಡಿ ನ್ಯೂಸ್ ವಿಶೇಷ ವರದಿ
ಕುಂದಾಪುರ: ಒಂದೆಡೆ ವಿಶಾಲವಾದ ಅರಬ್ಬೀ ಸಮುದ್ರ, ಇನ್ನೊಂದೆಡೆ ಶಾಂತವಾಗಿ ಹರಿಯುವ ಸೌಪರ್ಣಿಕಾ ನದಿ. ಇವೆರಡರ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ–66. ಪ್ರಕೃತಿಯೇ ತನ್ನ ಕೈಚಳಕದಿಂದ ಸೃಷ್ಟಿಸಿದ ಈ ಅಪರೂಪದ ದೃಶ್ಯ ವೈಭವವೇ ವಿಶ್ವವಿಖ್ಯಾತ ತ್ರಾಸಿ–ಮರವಂತೆ ಬೀಚ್. ದೇಶ–ವಿದೇಶದ ಪ್ರವಾಸಿಗರನ್ನು ಸೆಳೆಯುವ ಈ ತಾಣಕ್ಕೆ ಅಭಿವೃದ್ಧಿಯ ಅಪಾರ ಅವಕಾಶಗಳಿದ್ದರೂ, ಸಮಗ್ರ ಯೋಜನೆ ರೂಪಿಸಿ ಅಂತಿಮ ಸ್ಪರ್ಶ ನೀಡುವ ಕೆಲಸ ಇದುವರೆಗೆ ಸರ್ಕಾರದ ಮಟ್ಟದಲ್ಲಿ ಸಾಕಾರಗೊಂಡಿಲ್ಲ.

ಆದರೆ, ಒಬ್ಬ ಸಾಮಾನ್ಯ ವರ್ತಕನ ಮನಸ್ಸಿನಲ್ಲಿ ಮೂಡಿದ ಕಲ್ಪನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಎಐ ತಂತ್ರಜ್ಞಾನದ ನೆರವಿನಿಂದ ತನ್ನ ಕನಸಿನ ತ್ರಾಸಿ–ಮರವಂತೆ ಬೀಚ್ ಹೇಗಿರಬೇಕು ಎಂಬ ಚಿತ್ರಣವನ್ನು ರೂಪಿಸಿ ಹಂಚಿಕೊಂಡಿರುವ ಅವರು, ಸಾವಿರಾರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಂಬದಕೋಣೆ ಸಮೀಪದ ಗಾಯಾಡಿ ನಿವಾಸಿಯಾಗಿರುವ ಹಾಗೂ ಹೆಮ್ಮಾಡಿ ಪೇಟೆಯಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ದಿನೇಶ್ ಕೊಠಾರಿ, ತ್ರಾಸಿ–ಮರವಂತೆ ಬೀಚ್‌ನ ಭವಿಷ್ಯದ ರೂಪುರೇಷೆಯನ್ನು ಎಐ ಚಿತ್ರದ ಮೂಲಕ ಜೀವಂತಗೊಳಿಸಿದ್ದಾರೆ. ಅವರ ಕಲ್ಪನೆಯಲ್ಲಿನ ಬೀಚ್ ಅಭಿವೃದ್ಧಿ ಮಾದರಿ ನೋಡುಗರ ಕಣ್ಮನ ಸೆಳೆಯುವಂತಿದ್ದು, ಇಂತಹ ಅಭಿವೃದ್ಧಿ ನಡೆದರೆ ತ್ರಾಸಿ-ಮರವಂತೆ ಇನ್ನಷ್ಟು ವಿಶ್ವಮಟ್ಟದ ಪ್ರವಾಸಿ ತಾಣವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಏನಿದು ದಿನೇಶ್ ಕೊಠಾರಿಯವರ ಕಲ್ಪನೆ?:
ಬೀಚ್‌ನ ಎರಡೂ ಬದಿಗಳಲ್ಲಿ, ಎನ್‌ಎಚ್‌ಎಐ ಅನುಮತಿ ಪಡೆದು ಹೆದ್ದಾರಿಗೆ ಅಡ್ಡಿಯಾಗದ ರೀತಿಯಲ್ಲಿ ಸುಮಾರು 12 ಅಡಿ ಅಗಲ ಹಾಗೂ 3,500 ಅಡಿ ಉದ್ದದ ಇಂಟರ್‌ಲಾಕ್ ಪಾದಚಾರಿ ಮತ್ತು ಪಾರ್ಕಿಂಗ್ ವಲಯ ನಿರ್ಮಿಸುವುದು. ಇದರಿಂದ ಪ್ರವಾಸಿಗರು ತಮ್ಮ ವಾಹನಗಳನ್ನು ಸುರಕ್ಷಿತವಾಗಿ ನಿಲ್ಲಿಸಬಹುದು. ಇದರ ಜೊತೆಗೆ ಬೀಚ್ ಬದಿಯಲ್ಲಿ ಸುಮಾರು ಆರು ಇಂಚು ಎತ್ತರ ಹಾಗೂ ಮೂರು ಅಡಿ ಅಗಲದ ಕಾಂಕ್ರೀಟ್ ವಾಕ್‌ವೇ ನಿರ್ಮಿಸಿ, ಸಮುದ್ರಕ್ಕೆ ಅಭಿಮುಖವಾಗಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಆಸನಗಳ ವ್ಯವಸ್ಥೆ ಮಾಡಬೇಕು ಎಂಬುದು ಅವರ ಅಭಿಪ್ರಾಯ. ರಾತ್ರಿ ವೇಳೆಯಲ್ಲೂ ಸುರಕ್ಷಿತ ಮತ್ತು ಆಕರ್ಷಕ ವಾತಾವರಣ ನಿರ್ಮಾಣಕ್ಕಾಗಿ ಸೋಲಾರ್ ದೀಪಗಳ ಅಳವಡಿಕೆ, ಬೀಚ್‌ಗೆ ಇಳಿದು ಹೋಗಲು ಸುಸಜ್ಜಿತ ಮೆಟ್ಟಿಲುಗಳ ನಿರ್ಮಾಣ, ಕುಟುಂಬ ಸಮೇತರಾಗಿ ಸಮಯ ಕಳೆಯಲು ಅನುಕೂಲವಾಗುವ ಮೂಲಸೌಕರ್ಯ ಕಲ್ಪಿಸುವುದು ಅವರ ಯೋಜನೆಯ ಪ್ರಮುಖ ಅಂಶಗಳಾಗಿವೆ.

ಪ್ರವಾಸೋದ್ಯಮಕ್ಕೆ ಹೊಸ ಆಯಾಮ:
ಸಮರ್ಪಕ ಯೋಜನೆ, ಪರಿಸರ ಸ್ನೇಹಿ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದರೆ ತ್ರಾಸಿ–ಮರವಂತೆ ಬೀಚ್ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮತ್ತಷ್ಟು ಬೆಳೆಯುವ ಸಾಮರ್ಥ್ಯ ಹೊಂದಿದೆ. ಪ್ರಕೃತಿ ನೀಡಿರುವ ಈ ಅಮೂಲ್ಯ ಕೊಡುಗೆಯನ್ನು ಉಳಿಸಿಕೊಂಡೇ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕೆಂಬ ಸಂದೇಶವನ್ನು ದಿನೇಶ್ ಕೊಠಾರಿಯವರ ಕಲ್ಪನೆ ಸಾರುತ್ತಿದೆ.
ಸಾಮಾಜಿಕ ಕಾಳಜಿಯ ವರ್ತಕ:
ವೃತ್ತಿಯಲ್ಲಿ ಬೇಕರಿ ಉದ್ಯಮಿಯಾಗಿರುವ ದಿನೇಶ್ ಕೊಠಾರಿ, ತಮ್ಮ ಪರಿಸರ ಕಾಳಜಿಯಿಂದ ಹೆಮ್ಮಾಡಿ ಭಾಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. “ಸ್ವಚ್ಛ ಹೆಮ್ಮಾಡಿ” ಪರಿಕಲ್ಪನೆಯಡಿ ಸ್ವಂತ ವೆಚ್ಚದಲ್ಲಿ ಕಬ್ಬಿಣದ ಕಸದ ಬುಟ್ಟಿಗಳನ್ನು ತಯಾರಿಸಿ ಪೇಟೆಯ ಅಂಗಡಿಗಳ ಮುಂಭಾಗಗಳಲ್ಲಿ ಅಳವಡಿಸಿ ಸ್ವಚ್ಛತೆಗೆ ಉತ್ತೇಜನ ನೀಡಿದ್ದರು. ಹಲವು ಸಾಮಾಜಿಕ ಕಾರ್ಯಗಳ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿರುವ ಅವರು, ಈಗ ತ್ರಾಸಿ–ಮರವಂತೆ ಬೀಚ್ ಅಭಿವೃದ್ಧಿಯ ಕನಸನ್ನು ಎಐ ಚಿತ್ರದ ಮೂಲಕ ಜನರ ಮುಂದಿಟ್ಟಿದ್ದಾರೆ. ಪ್ರಕೃತಿಯ ಸೌಂದರ್ಯಕ್ಕೆ ಅಭಿವೃದ್ಧಿಯ ಸ್ಪರ್ಶ ಸಿಕ್ಕರೆ, ವಿಶ್ವವಿಖ್ಯಾತ ತ್ರಾಸಿ–ಮರವಂತೆ ಬೀಚ್ ಇನ್ನಷ್ಟು ಮನಮೋಹಕವಾಗಿ ರೂಪುಗೊಳ್ಳಲಿದೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.
ತ್ರಾಸಿ–ಮರವಂತೆ ಬೀಚ್‌ನ ಸೌಂದರ್ಯ ಡ್ರೋನ್ ಚಿತ್ರಣಗಳಲ್ಲಿ ಮಾತ್ರ ಸೀಮಿತವಾಗಿರದೆ, ನೈಜವಾಗಿಯೂ ಇನ್ನಷ್ಟು ಮನಮೋಹಕವಾಗಿರಬೇಕು ಎಂಬುದು ನನ್ನ ಕಲ್ಪನೆ. ಆ ಕಲ್ಪನೆಗೆ ಎಐ ತಂತ್ರಜ್ಞಾನ ಚಿತ್ರ ರೂಪ ನೀಡಿದೆ. ಬೀಚ್‌ನ ಸ್ವಾಭಾವಿಕ ಸೌಂದರ್ಯವನ್ನು ಉಳಿಸಿಕೊಂಡೇ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು ಮತ್ತು ಆಕರ್ಷಕ ಅಭಿವೃದ್ಧಿ ಕಾಮಗಾರಿಗಳು ನಡೆದರೆ, ಇದು ವಿಶ್ವದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಬಹುದು.
-ದಿನೇಶ್ ಕೊಠಾರಿ, ಬೇಕರಿ ವರ್ತಕ




