Friday, October 30, 2026

ಬಾಡಿಗೆ ಮುಂಗಡ ಹಣದ ವಿಚಾರವಾಗಿ ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ; ತಲವಾರಿನಿಂದ ಹಲ್ಲೆಗೆ ಯತ್ನ – ಆರೋಪಿ ಬಂಧನ

ಉಡುಪಿ: ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಗಡಿಯಲ್ಲಿ ಬಾಡಿಗೆ ಮುಂಗಡ ಹಣದ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಅಂಗಡಿ ಮಾಲೀಕರ ಮೇಲೆ ಆಸಿಡ್ ದಾಳಿ ನಡೆಸಿ, ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಅಕ್ಟೋಬರ್ 28ರಂದು ಸಂಜೆ ನಡೆದಿದೆ. ಘಟನೆಯಲ್ಲಿ ಅಂಗಡಿ ಮಾಲೀಕ ನವೀನ್ ಕುಮಾರ್ (58) ಅವರು ಸುಟ್ಟ ಗಾಯಗೊಂಡಿದ್ದು, ಕೆ.ಎಂ.ಸಿ. ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರದ ಮನೋಳಿಗುಜ್ಜಿ, ಕುಂಜಿಬೆಟ್ಟು ಅಂಚೆಯ ನಿವಾಸಿ, ಪ್ರಸ್ತುತ ಶಿವಳ್ಳಿ ಗ್ರಾಮದ ಎಂ.ಜಿ.ಎಂ. ಮೈದಾನದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಆಚಾರ್ಯ (48) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚಿನ್ನಾಭರಣಗಳ ಕುಸುರಿ ಕೆಲಸ ಮಾಡಿಕೊಂಡಿದ್ದು, ಅರೆಕಾಲಿಕವಾಗಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡುತ್ತಿದ್ದಾನೆ. ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ (KA 20 EK 6450) ಹಾಗೂ ತಲವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ದೂರುದಾರ ನವೀನ್ ಕುಮಾರ್ ಅವರು ಕಲ್ಕೂರು ಬಿಲ್ಡಿಂಗ್‌ನ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದು, ವಿಷ್ಣುಮೂರ್ತಿ ನಗರದ ತಮ್ಮ ಮನೆಯ ಮೊದಲ ಮಹಡಿಯನ್ನು ಸುರೇಶ್ ಆಚಾರ್ಯನಿಗೆ ಬಾಡಿಗೆಗೆ ನೀಡಿದ್ದರು. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಗೋಡೆ ಹಾಗೂ ಟ್ಯಾಪ್‌ಗಳಿಗೆ ಹಾನಿಯಾಗಿದ್ದರಿಂದ, ಮುಂಗಡವಾಗಿ ನೀಡಿದ್ದ ₹20,000 ಹಣದಲ್ಲಿ ಎರಡು ತಿಂಗಳ ಬಾಡಿಗೆ ಹಾಗೂ ದುರಸ್ತಿ ವೆಚ್ಚವನ್ನು ಕಡಿತಗೊಳಿಸುವುದಾಗಿ ನವೀನ್ ಕುಮಾರ್ ತಿಳಿಸಿದ್ದರು. ಇದಕ್ಕೆ ಒಪ್ಪದ ಆರೋಪಿ, ಸಂಪೂರ್ಣ ಹಣ ನೀಡುವಂತೆ ಒತ್ತಾಯಿಸಿ ಅಕ್ಟೋಬರ್ 23ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಅಕ್ಟೋಬರ್ 28ರಂದು ಸಂಜೆ ಸುಮಾರು 3.30ರ ವೇಳೆಗೆ ಅಂಗಡಿಗೆ ಬಂದ ಆರೋಪಿ, ಮುಂಗಡ ಹಣದ ವಿಚಾರವಾಗಿ ನವೀನ್ ಕುಮಾರ್ ಅವರೊಂದಿಗೆ ಜಗಳವಾಡಿದ್ದಾನೆ. ಬಳಿಕ ಹೊರಗೆ ಹೋಗಿ ಸ್ಕೂಟರ್‌ನಿಂದ ಬಾಟಲಿ ಹಾಗೂ ದೊಡ್ಡ ತಲವಾರನ್ನು ತಂದು, ಬಾಟಲಿಯಲ್ಲಿದ್ದ ದ್ರವವನ್ನು ಆಸಿಡ್ ಎಂದು ಹೇಳಿ ದೂರುದಾರರ ಮೈಮೇಲೆ ಎರಚಿದ್ದಾನೆ. ಬಳಿಕ ತಲವಾರಿನಿಂದ ಕಡಿದು ಕೊಲ್ಲುವುದಾಗಿ ಬೆದರಿಸಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಎಡಗೈ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 124(1) ಮತ್ತು 109ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಪತ್ತೆಹಚ್ಚಲು ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಘಟನೆಯಾದ ಕೆಲವೇ ಗಂಟೆಗಳಲ್ಲಿ ಶಿವಳ್ಳಿ ಗ್ರಾಮದ ಎಂ.ಜಿ.ಎಂ. ಸಮೀಪ ಆರೋಪಿಯನ್ನು ವಶಕ್ಕೆ ಪಡೆದು, ಸ್ಕೂಟರ್ ಹಾಗೂ ತಲವಾರನ್ನು ಸ್ವಾಧೀನಪಡಿಸಿಕೊಂಡಿದೆ. ಬಳಿಕ ಆರೋಪಿಯನ್ನು ತನಿಖಾಧಿಕಾರಿಯ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

More like this
Related

ಕುಂದಾಪುರ : ಅಕ್ರಮ ಕೊಜೆ ಮಣ್ಣು ಸಾಗಾಟದ ಟಿಪ್ಪರ್ ಅಪಘಾತ ಪ್ರಕರಣ: ಮೂವರ ಬಂಧನ

ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ; ಯುವ ಕಾಂಗ್ರೆಸ್ ಮುಖಂಡ ಸಹಿತ ಮೂವರ...

ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ವಿವಿಧ ಕ್ಷೇತ್ರಗಳ 71 ಸಾಧಕರ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ–2026ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ...

ಅಂಡರ್-19 ಏಷ್ಯಾಕಪ್‌ಗೆ ಭಾರತದ ತಂಡ ಪ್ರಕಟ: ಸೆಹ್ವಾಗ್ ಪುತ್ರ ಆರ್ಯವೀರ್, ದ್ರಾವಿಡ್ ಪುತ್ರ ಅನ್ವಯ್‌ಗೆ ಸ್ಥಾನ

ನವದೆಹಲಿ: ಒಮಾನ್‌ನ ಮಸ್ಕತ್‌ನಲ್ಲಿ ನವೆಂಬರ್ 5ರಿಂದ 14ರವರೆಗೆ ನಡೆಯಲಿರುವ ಎಸಿಸಿ ಪುರುಷರ...

Copying is disabled on Udupi Digital News.