ಉಡುಪಿ: ನಗರದ ಗುಂಡಿಬೈಲ್ ನಲ್ಲಿರುವ ಪೆಟ್ರೋಲ್ ಬಂಕ್ ಒಂದರ ಮಾಲಕರ ಸಂಬಂಧಿ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ಶನಿವಾರ (ನ.7) ರಾತ್ರಿ ನಡೆದಿದೆ.
ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಹಲ್ಲೆಗೊಳಗಾದವರು.
ನ.7ರಂದು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಖಾಸಗಿ ಬಸ್ ಚಾಲಕ ಆಕಾಶ್ ಎಂಬಾತ ಪೆಟ್ರೋಲ್ ಬಂಕ್ ಜಾಗದಲ್ಲಿ ಬಸ್ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ. ಇದನ್ನು ಬಂಕ್ ಮಾಲಕರ ಸಂಬಂಧಿ ಆಶಿಶ್ ಶೆಟ್ಟಿ ಪ್ರಶ್ನಿಸಿ, ಇಲ್ಲಿ ಮದ್ಯಪಾನ ಮಾಡಬೇಡಿ ಎಂದು ಎಚ್ಚರಿಸಿದ್ದರು. ಈ ವಿಚಾರವಾಗಿ ಆಶಿಶ್ ಶೆಟ್ಟಿ ಹಾಗೂ ಬಸ್ ಚಾಲಕ ಆಕಾಶ್ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ತಳ್ಳಾಡಿಕೊಂಡಿದ್ದರು.
ಇದಾದ ಕೆಲ ಹೊತ್ತಿನ ಬಳಿಕ ನಾಲ್ವರು ಕಾರಿನಲ್ಲಿ ಹಾಗೂ ಓರ್ವ ಲಾರಿಯಲ್ಲಿ ಬಂಕ್ಗೆ ವಾಪಸ್ ಬಂದಿದ್ದಾರೆ. ಲಾರಿಗೆ 3,000 ರೂ. ಮೌಲ್ಯದ ಡೀಸೆಲ್ ಹಾಕಿಸಿಕೊಂಡ ಬಳಿಕ ಏಕಾಏಕಿ ಆಶಿಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ಆರೋಪಿ ಪುನೀತ್ ಎಂಬಾತ ತನ್ನ ಕೈಯಲ್ಲಿದ್ದ ಕಡಗದಿಂದ ಆಶಿಶ್ ಅವರ ತಲೆಗೆ ಜೋರಾಗಿ ಹೊಡೆದಿದ್ದಾರೆ.
ಗಾಯಾಳು ಆಶಿಶ್ ಶೆಟ್ಟಿ ಖಾಸಗಿ ಆಸ್ಪತ್ರೆಗೆ ದಾಖಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.




