Friday, November 6, 2026

ನ. 29ರಂದು ಸೋದೆ ಮಠದ ಪರ್ಯಾಯದ ಪೂರ್ವಭಾವಿ ಬಾಳೆ ಮುಹೂರ್ತ

ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಉಡುಪಿಯಲ್ಲಿ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ

ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಪರಮಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಎರಡನೇ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತವು ನವೆಂಬರ್ 29ರಂದು ಬೆಳಿಗ್ಗೆ 7.45ಕ್ಕೆ ಸೋದೆ ಮಠದ ಆವರಣದಲ್ಲಿ ನೆರವೇರಲಿದೆ. ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಮೂರು ದಿನಗಳ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ ಆಯೋಜಿಸಲಾಗಿದೆ ಎಂದು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.

ಅವರು ಗುರುವಾರ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಾಳೆ ಮುಹೂರ್ತದ ಅಂಗವಾಗಿ ಬೆಳಿಗ್ಗೆ 6.30ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಡೆಯಲಿದ್ದು, ಬಳಿಕ ಶ್ರೀಚಂದ್ರೇಶ್ವರ, ಅನಂತೇಶ್ವರ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ಬೆಳಿಗ್ಗೆ 7.45ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಮಠದ ತೋಟದಲ್ಲಿ ಬಾಳೆ, ಕಬ್ಬು ಮತ್ತು ತುಳಸಿ ಗಿಡಗಳನ್ನು ನೆಡುವ ಮೂಲಕ ಧಾರ್ಮಿಕ ವಿಧಿವಿಧಾನ ನೆರವೇರಲಿದೆ. ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಮಠದ ದಿವಾನರು, ಆಸ್ಥಾನ ವಿದ್ವಾಂಸರು, ಪಂಡಿತರು ಹಾಗೂ ಭಕ್ತರು ಉಪಸ್ಥಿತರಿರಲಿದ್ದಾರೆ.

ಬಾಳೆ ಕೃಷಿಯ ಮಹತ್ವ, ವೈಜ್ಞಾನಿಕ ಕೃಷಿ ಪದ್ಧತಿಗಳು, ಮೌಲ್ಯವರ್ಧನೆ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಇದರಲ್ಲಿ 100ಕ್ಕೂ ಅಧಿಕ ಬಗೆಯ ಬಾಳೆ ಗೊನೆಗಳ ಪ್ರದರ್ಶನ, 150ಕ್ಕೂ ಅಧಿಕ ತಳಿಗಳ ಪರಿಚಯ ಹಾಗೂ ಸಸಿಗಳ ಮಾರಾಟ ನಡೆಯಲಿದೆ. ಹೆಸರಿಲ್ಲದ ವಿಶಿಷ್ಟ ಬಾಳೆ ತಳಿಯೊಂದಕ್ಕೆ ಮಠದ ವತಿಯಿಂದ ನಾಮಕರಣ ಮಾಡಿ ವಾಣಿಜ್ಯ ಮುದ್ರೆ ಘೋಷಿಸುವ ಕಾರ್ಯಕ್ರಮವೂ ಇರಲಿದೆ.

ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರು ಮತ್ತು ಉದ್ಯಮಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ (NRCB) ಹಾಗೂ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CFTRI) ವಿಜ್ಞಾನಿಗಳು ತಾಂತ್ರಿಕ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಸುಮಾರು 40 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮಳಿಗೆದಾರರಿಗೆ ಸ್ಥಳಾವಕಾಶ ಹಾಗೂ ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ಮೂರು ದಿನಗಳಲ್ಲಿ ಸುಮಾರು 2,000 ರೈತರು, 2,000 ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮಿಗಳು ಹಾಗೂ 10,000ಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆಯಿದೆ.

ಬಾಳೆಹಣ್ಣು, ಬಾಳೆಕಾಯಿ, ದಿಂಡು, ಎಲೆ ಮತ್ತು ನಾರಿನಿಂದ ತಯಾರಿಸಿದ ಆಹಾರ, ಕರಕುಶಲ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಬಾಳೆ ಆಧಾರಿತ ವಿವಿಧ ಖಾದ್ಯಗಳ ತಯಾರಿಕೆ, ವಿಶೇಷ ಕ್ಯಾಂಟೀನ್, ಸುಕೇಳಿ ಪ್ರಸಾದ ವಿತರಣೆ, ಕೃಷಿ ತಜ್ಞರ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಾಳೆಯ ಮಹತ್ವದ ಕುರಿತು ವಿಶೇಷ ಕೈಪಿಡಿಯನ್ನೂ ಸಾರ್ವಜನಿಕರಿಗೆ ವಿತರಿಸಲಾಗುವುದು.

ಮೇಳದ ಅಂಗವಾಗಿ ಉಡುಪಿ ಜಿಲ್ಲೆಯ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನವೆಂಬರ್ 22ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿಯ ಐ.ವೈ.ಸಿ. ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ‘ಬಾಳೆಗಿಡ, ಬಾಳೆಹಣ್ಣಿನ ವ್ಯಾಪಾರ ಅಥವಾ ಬಾಳೆ ತೋಟ’, 4ರಿಂದ 7ನೇ ತರಗತಿಗೆ ‘ಬಾಳೆ ತೋಟದಲ್ಲಿ ಮಂಗಗಳು, ಆನೆಗಳು ಅಥವಾ ಗೋವುಗಳು’ ಹಾಗೂ 8ರಿಂದ 10ನೇ ತರಗತಿಗೆ ‘ಬಾಳೆ ತೋಟದಲ್ಲಿ ಕೃಷ್ಣ-ಬಲರಾಮ’ ವಿಷಯಗಳನ್ನು ನೀಡಲಾಗಿದೆ. ವಿಷಯಕ್ಕೆ ಸಂಬಂಧಿಸಿದ ಸ್ವಂತ ಸೃಜನಾತ್ಮಕ ಚಿತ್ರಗಳಿಗೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ನಟರಾಜ ಉಪಾಧ್ಯಾಯ (9880945716) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

More like this
Related

ಬರ ಪರಿಹಾರ ಬಿಡುಗಡೆ, ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಪ್ರಧಾನಿ ಮಧ್ಯಪ್ರವೇಶಕ್ಕೆ ಸಿಎಂ ಮನವಿ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ...

ನ. 6 ಮತ್ತು 7ರಂದು ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ

ಉಡುಪಿ: ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವವು ನವೆಂಬರ್ 6 ಮತ್ತು...

ಭೂಗತಪಾತಕಿ ಹೇಮಂತ್ ಪೂಜಾರಿಗೆ ಉದ್ದಿಮೆದಾರರ ಮೊಬೈಲ್ ಸಂಖ್ಯೆ ನೀಡಿದ ಆರೋಪ: ಓರ್ವನ ಬಂಧನ

ಉಡುಪಿ: ಹಣ ನೀಡುವಂತೆ ಬೆದರಿಕೆ ಕರೆ ಮಾಡಲು ಭೂಗತ ಪಾತಕಿ ಹೇಮಂತ್...

ಡೇವಿಡ್ ಡಿಸೋಜಾ ಕೊಲೆ ಪ್ರಕರಣ:  ಕೋಕಾ ಕಾಯ್ದೆಯಡಿ 10 ಆರೋಪಿಗಳ ತನಿಖೆಗೆ ಅನುಮತಿ

ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ...

Copying is disabled on Udupi Digital News.